ಶುಕ್ರವಾರ, ಏಪ್ರಿಲ್ 16, 2021
28 °C
ಕ್ರಿಕೆಟ್‌ಗೆ ವಿದಾಯ ಹೇಳಿದ ‘ದಾವಣಗೆರೆ ಎಕ್ಸ್‌ಪ್ರೆಸ್‌’ ಖ್ಯಾತಿಯ ವೇಗಿ ವಿನಯಕುಮಾರ್

‘ಡಬಲ್ ಟ್ರಿಪಲ್’ ಕಿರೀಟ ಧರಿಸಿದ ನಾಯಕ ವಿನಯಕುಮಾರ್

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶಿ ಕ್ರಿಕೆಟ್‌ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಕಾಣಸಿಗುವ ಒಂದು ವಿಶೇಷ ದಾಖಲೆಯಂದರೆ ಕರ್ನಾಟಕ ತಂಡದ ’ಡಬಲ್ ಟ್ರಿಪಲ್‘ ಪ್ರಶಸ್ತಿ ಸಾಧನೆ.

ಸತತ ಎರಡು ಋತುಗಳಲ್ಲಿ (2013-14 ಮತ್ತು 2014–15) ರಣಜಿ ಟ್ರೋಫಿ, ವಿಜಯ್ ಹಜಾರೆ ಮತ್ತು ಇರಾನಿ ಟ್ರೋಫಿಗಳನ್ನು ಗೆದ್ದ ಅನನ್ಯ ಸಾಧನೆ ಅದು. ಭಾರತದ ಒಂಬತ್ತು ದಶಕಗಳ ದೇಶಿ ಕ್ರಿಕೆಟ್ ಇತಿಹಾಸದಲ್ಲಿ ಇರುವ ಈ ಏಕೈಕ ಸಾಧನೆಯ ರೂವಾರಿ ರಂಗನಾಥ್ ವಿನಯಕುಮಾರ್.

’ದಾವಣಗೆರೆ ಎಕ್ಸ್‌ಪ್ರೆಸ್‌‘ ಎಂದೇ ಖ್ಯಾತರಾಗಿರುವ 37 ವರ್ಷದ  ವಿನಯ್,  ಎಲ್ಲ ಮಾದರಿಗಳ ಕ್ರಿಕೆಟ್‌ನಿಂದ ನಿವೃತ್ತರಾಗಿರುವುದಾಗಿ ಶುಕ್ರವಾರ ಘೋಷಿಸಿದ್ದಾರೆ.

’ನಿಮ್ಮೆಲ್ಲರ ನೆಚ್ಚಿನ ದಾವಣಗೆರೆ  ಎಕ್ಸ್‌ಪ್ರೆಸ್‌  ಇದೀಗ ನಿವೃತ್ತಿಯ ನಿಲ್ದಾಣಕ್ಕೆ ಬಂದು ತಲುಪಿದೆ‘ ಎಂದು ಪತ್ರ ಬರೆದು ಟ್ವೀಟ್ ಮಾಡಿದ್ದಾರೆ.

ಈ ಹೊತ್ತಿನಲ್ಲಿ ವಿನಯ್ ಸಾಧನೆಯ ಹಾದಿಯನ್ನು ನೋಡಿದರೆ ಹತ್ತಾರು ವಿಷಯಗಳು ಗಮನ ಸೆಳೆಯುತ್ತವೆ. 

ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡಗಣೇಶ್, ಡೇವಿಡ್ ಜಾನ್ಸನ್   ಅವರು ಶ್ರೀಮಂತಗೊಳಿಸಿದ ಕರ್ನಾಟಕದ ಮಧ್ಯಮವೇಗದ ಬೌಲಿಂಗ್ ಪರಂಪರೆಗೆ ಮೆರುಗು ತಂದ ಶ್ರೇಯ ವಿನಯ್‌ ಕುಮಾರ್‌ ಅವರಿಗೆ ಸಲ್ಲುತ್ತದೆ. 2004ರಲ್ಲಿ ಬಂಗಾಳದ ಎದುರು ರಣಜಿ ಟ್ರೋಫಿ ಕ್ರಿಕೆಟ್‌ಗೆ ವಿನಯ್ ಪದಾರ್ಪಣೆ ಮಾಡಿದ್ದರು.

ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡಗಣೇಶ್ ಮತ್ತು ವಿನಯ್ ವೇಗದ ವಿಭಾಗದ ಹೊಣೆ ನಿಭಾಯಿಸಿದ್ದರು. ಇಬ್ಬರೂ ತಲಾ ನಾಲ್ಕು ವಿಕೆಟ್ ಗಳಿಸಿದ್ದರು. ವಿನಯ್ ಬಂಗಾಳ ತಂಡದಲ್ಲಿ ಆಡಿದ್ದ ಭಾರತ ತಂಡದ ನಾಯಕ ಸೌರವ್ ಗಂಗೂಲಿ ಮತ್ತು ರೋಹನ್ ಗಾವಸ್ಕರ್ ವಿಕೆಟ್ ಗಳಿಸಿದ್ದರು.

’ದಾವಣಗೆರೆಯಲ್ಲಿ ಹುಟ್ಟಿ, ಬೆಳೆದು ಬಂದ ವಿನಯ್‌ ಕ್ರಿಕೆಟ್‌ನಲ್ಲಿ ಬೆಳೆದಿದ್ದು ಯುವ ಆಟಗಾರರಿಗೆ ಮಾದರಿ. ಸೌಲಭ್ಯಗಳ ಕೊರತೆ ಇರುವ ಗ್ರಾಮಾಂತರ ಪ್ರದೇಶದಿಂದ ಬಂದು ಕರ್ನಾಟಕ ತಂಡದ ನಾಯಕರಾಗಿ, ಭಾರತ ತಂಡದಲ್ಲಿಯೂ ಆಡುವ ಮಟ್ಟಕ್ಕೆ ಬೆಳೆದಿದ್ದು ಅವರ ಸಾಧನೆ‘ ಎಂದು ಮಾಜಿ ಕ್ರಿಕೆಟಿಗ ದೊಡ್ಡಗಣೇಶ್ ಹೇಳುತ್ತಾರೆ. 

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ವಿನಯ್‌ಗೆ ಬಾಲ್ಯದಲ್ಲಿ ಕ್ರಿಕೆಟ್ ಕಲಿಕೆಗೆ ಉತ್ತಮ ಸೌಲಭ್ಯಗಳು ಸಿಕ್ಕಿರಲಿಲ್ಲ. ಆದರೆ ನಿರಂತರ ಪರಿಶ್ರಮ ಮತ್ತು ಛಲದ ಸಾಧನೆಯಿಂದ ಕರ್ನಾಟಕ ತಂಡಕ್ಕೆ ಕಾಲಿಟ್ಟವರು. 

ಸ್ವಿಂಗ್ ಮೋಡಿ: ಬಲಗೈ ಮಧ್ಯಮವೇಗಿಯಾಗಿದ್ದ ವಿನಯ್‌, ತಮ್ಮ ಛಲದ ಹೋರಾಟದಿಂದ ಗಮನ ಸೆಳೆದವರು. ತಮ್ಮ ಬೌಲಿಂಗ್‌ನಲ್ಲಿ ವೇಗಕ್ಕಿಂತ ಹೆಚ್ಚು ವೇರಿಯೇಷನ್‌ಗಳಿಗೆ ಮಹತ್ವ ನೀಡಿದ್ದರು. ಸ್ವಿಂಗ್ ಮತ್ತು ಕಟರ್‌ಗಳ ಹದವಾದ ಮಿಶ್ರಣದ ಮೂಲಕ ಎದುರಾಳಿಗಳನ್ನು ಕಂಗೆಡಿಸುತ್ತಿದ್ದರು.

ಫಿಟ್‌ನೆಸ್‌ಗೆ ಹೆಚ್ಚು ಮಹತ್ವ ಕೊಡುತ್ತಿದ್ದ ಅವರು ತಮ್ಮ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ಗೂ ಸಾಣೆ ಹಿಡಿದು ಕ್ರಮೇಣ ಆಲ್‌ರೌಂಡರ್ ಆಗಿ ಗುರುತಿಸಿಕೊಂಡರು.  ಆಭಿಮನ್ಯು ಮಿಥುನ್, ಎಡಗೈ ಮಧ್ಯಮವೇಗಿ ಅರವಿಂದ್ ಅವರೊಂದಿಗೆ ವಿನಯ್ ಕರ್ನಾಟಕ ತಂಡಕ್ಕೆ ಹಲವು ಪಂದ್ಯಗಳಲ್ಲಿ ಗೆಲುವು ದಾಖಲಿಸಿಕೊಟ್ಟರು. ಭಾರತ ತಂಡದ ಗಮನ ಕೂಡ ಸೆಳೆದರು.  ಆದರೆ ಒಂದೇ ಟೆಸ್ಟ್‌ನಲ್ಲಿ ಆಡುವ ಅವಕಾಶ ಸಿಕ್ಕಿತು.
31 ಏಕದಿನ ಪಂದ್ಯಗಳಲ್ಲಿ ಆಡಿದರು.

ಕರ್ನಾಟಕ ತಂಡದಲ್ಲಿ ಕಾಲಿಟ್ಟ ಯುವ ಆಟಗಾರರನ್ನು ಸಮರ್ಥವಾಗಿ ದುಡಿಸಿಕೊಂಡರು. ಕರ್ನಾಟಕ ತಂಡಕ್ಕೆ  14 ವರ್ಷಗಳಿಂದ ಕಾಡಿದ್ದ ರಣಜಿ ಟ್ರೋಫಿ ಬರವನ್ನು 2014–15ರಲ್ಲಿ ನೀಗಿಸಿದರು.

ಎಲ್ಲ ಕ್ರಿಕೆಟಿಗರ ಜೀವನದಲ್ಲಿಯೂ  ಇರುವಂತಹ ಏರಿಳಿತಗಳನ್ನು ವಿನಯ್ ಕೂಡ ಅನುಭವಿಸಿದರು. 2018ರಲ್ಲಿ ಅವರು ಕರ್ನಾಟಕ ತಂಡದಿಂದ ಪುದುಚೇರಿ ತಂಡಕ್ಕೆ ತೆರಳುತ್ತಿರುವುದಾಗಿ ಘೋಷಿಸಿದರು. 2019ರ ಒಂದು ಋತುವಿನಲ್ಲಿ ಆ ತಂಡಕ್ಕೆ ಆಡಿದರು.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು