ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಲಿಂಗ್ ಆಫ್‌: ಎರಡು ವಾರ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Last Updated 22 ಜುಲೈ 2020, 15:57 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪದಾಧಿಕಾರಿಗಳ ಕೂಲಿಂಗ್ ಆಫ್‌ ನಿಯಮದ ಪರಿಷ್ಕರಣೆಗೆ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಎರಡು ವಾರಗಳ ಕಾಲ ಮುಂದೂಡಿದೆ. ಆಗಸ್ಟ್‌ 17ರಂದು ನ್ಯಾಯಪೀಠವು ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಈ ನಿಯಮದ ಪ್ರಕಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧಿಕಾರವಧಿಯು ಇದೇ 27ಕ್ಕೆ ಕೊನೆಗೊಳ್ಳಲಿದೆ. ಕಾರ್ಯದರ್ಶಿ ಜಯ್ ಶಾ ಅವರ ಅವಧಿಯು ಹೋದ ಮೇ ಕೊನೆಯ ವಾರದಲ್ಲಿಯೇ ಮುಕ್ತಾಯವಾಗಿದೆ. ಬುಧವಾರ ಈ ಕುರಿತು ನ್ಯಾಯಾಲಯವು ತೀರ್ಪು ನೀಡುವ ನಿರೀಕ್ಷೆ ಇತ್ತು.

ಆದರೆ ಬುಧವಾರ ಮುಖ್ಯ ನ್ಯಾಯಮೂರ್ತಿ ಶರದ್ ಬೋಬ್ಡೆ ಮತ್ತು ನ್ಯಾಯಮೂರ್ತಿ ಎಲ್. ನಾಗೇಶ್ವರ್ ರಾವ್ ಅವರು ಬಿಸಿಸಿಐಗೆ ಸಂಬಧಿಸಿದ ಪ್ರಕರಣಗಳ ವಿಚಾರಣೆಯನ್ನು ಮುಂದೂಡಿದರು. ತೀರ್ಪು ಬರುವವರೆಗೂ ಗಂಗೂಲಿ ಮತ್ತು ಶಾ ಅವರು ತಮ್ಮ ಸ್ಥಾನಗಳಲ್ಲಿ ಮುಂದುವರಿಯಬೇಕೋ ಅಥವಾ ಬೇಡವೋ ಎಂಬುದು ಸ್ಪಷ್ಟವಾಗಿಲ್ಲ ಎಂದು ’ಇಎಸ್‌ಪಿಎನ್ ಕ್ರಿಕ್ ಇನ್ಫೋ‘ ವೆಬ್‌ಸೈಟ್ ವರದಿ ಮಾಡಿದೆ.

ರಾಜ್ಯ ಮತ್ತು ಬಿಸಿಸಿಐನ ವಿವಿಧ ಹುದ್ದೆಗಳಲ್ಲಿ ಸತತ ಆರು ವರ್ಷ ಪದಾಧಿಕಾರಿಯಾಗಿದ್ದವರು ಮತ್ತೊಂದು ಅವಧಿಗೆ ಮುಂದುವರಿಯುವಂತಿಲ್ಲ. ಅವರು ಕನಿಷ್ಠ ಮೂರು ವರ್ಷ ಅಧಿಕಾರದಿಂದ ದೂರವಿರಬೇಕು ಎಂಬುದು ಕೂಲಿಂಗ್ ಆಫ್ ನಿಯಮ. ಬಂಗಾಳ ಕ್ರಿಕೆಟ್ ಸಂಸ್ಥೆಯಲ್ಲಿ ಜಂಟಿ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅವರು ಐದು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ್ದರು. ಹೋದ ಅಕ್ಟೋಬರ್‌ನಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಜಯ್ ಶಾ ಕೂಡ ಗುಜರಾತ್ ಕ್ರಿಕೆಟ್ ಸಂಸ್ಥೆಯ ಉನ್ನತ ಹುದ್ದೆಯಲ್ಲಿದ್ದರು. ಬಿಸಿಸಿಐನ ಮೊದಲ ಸರ್ವಸದಸ್ಯರ ಸಭೆಯಲ್ಲಿ ನಿಯಮಾವಳಿಯ ಸಮಗ್ರ ಪರಿಷ್ಕರಣೆಗೆ ಅನುಮತಿ ಕೋರಿದ್ದ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿತ್ತು.

ಬಿಸಿಸಿಐನಲ್ಲಿ ಆಡಳಿತ ಸುಧಾರಣೆಗೆ ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಸಮಿತಿಯು ಸಲ್ಲಿಸಿದ್ದ ಶಿಫಾರಸುಗಳ ಆಧಾರದಲ್ಲಿ ಮಂಡಳಿಗೆ ನೂತನ ನಿಯಮಾವಳಿ ರೂಪಿಸಲಾಗಿದೆ. ಆದರೆ ಅದರಲ್ಲಿರುವ ಕೆಲವು ಮಹತ್ವದ ನಿಯಮಗಳಿಗೆ ಮಂಡಳಿಯ ಹಲವು ಪ್ರಮುಖರಿಗೆ ಅಸಮಾಧಾನವಿದೆ. ಅದರಲ್ಲಿ ಪ್ರಮುಖವಾಗಿ ಕೂಲಿಂಗ್ ಆಫ್‌ ನಿಯಮದ ತಿದ್ದುಪಡಿಯ ಮೇಲೆ ಹೆಚ್ಚು ಒತ್ತು ನೀಡುತ್ತಿವೆ.

ಹಿಮಾಚಲ ಕ್ರಿಕೆಟ್ ಸಂಸ್ಥೆ ಹಾಗೂ ತಮಿಳುನಾಡು ಕ್ರಿಕೆಟ್ ಸಂಸ್ಥೆಗಳಿಗೆ ಸಂಬಂಧಿಸಿದ ಮೊಕದ್ದಮೆ, ಬಿಸಿಸಿಐ ಮತ್ತು ಐಪಿಎಲ್ ಲೆಕ್ಕಪತ್ರಗಳ ಪರಿಶೀಲನಾ ನಿಯಮದಲ್ಲಿ ಬದಲಾವಣೆ ಕೋರಿ ಸಿಎಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗಳನ್ನೂ ಈ ಸಂದರ್ಭದಲ್ಲಿ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT