ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ‘ಹಾಲ್‌ ಆಫ್‌ ಫೇಮ್’ಗೆ ಸೆಹ್ವಾಗ್‌, ಎಡುಲ್ಜಿ

ಶ್ರೀಲಂಕಾದ ಮಾಜಿ ಆಟಗಾರ ಅರವಿಂದ ಡಿಸಿಲ್ವಾ ಅವರಿಗೂ ಗೌರವ
Published 13 ನವೆಂಬರ್ 2023, 16:04 IST
Last Updated 13 ನವೆಂಬರ್ 2023, 16:04 IST
ಅಕ್ಷರ ಗಾತ್ರ

ದುಬೈ: ಮಾಜಿ ನಾಯಕಿ ಡಯಾನಾ ಎಡುಲ್ಜಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಹಾಲ್‌ ಆಫ್‌ ಫೇಮ್‌ ಗೌರವ ಪಡೆದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡರು.

ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಬ್ಯಾಟರ್‌ ವೀರೇಂದ್ರ ಸೆಹ್ವಾಗ್‌ ಮತ್ತು ಶ್ರೀಲಂಕಾ ತಂಡದ ಮಾಜಿ ಆಟಗಾರ ಅರವಿಂದ ಡಿಸಿಲ್ವಾ ಅವರೂ ಐಸಿಸಿ ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಂಡಿದ್ದಾರೆ. ಕ್ರಿಕೆಟ್‌ ವೃತ್ತಿಬದುಕಿನಲ್ಲಿ ತೋರಿದ ಸಾಧನೆಯನ್ನು ಪರಿಗಣಿಸಿ ಅವರಿಗೆ ಐಸಿಸಿ ಈ ಗೌರವ ನೀಡಿದೆ.

ಎಡಗೈ ಸ್ಪಿನ್ನರ್‌ ಆಗಿದ್ದ ಎಡುಲ್ಜಿ ಅವರು 1976 ರಿಂದ 1993ರ ವರೆಗಿನ ಅವಧಿಯಲ್ಲಿ ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿ ಎನಿಸಿಕೊಂಡಿದ್ದರು. 20 ಟೆಸ್ಟ್‌ಗಳನ್ನು ಆಡಿದ್ದ ಅವರು 63 ವಿಕೆಟ್‌ಗಳನ್ನು ಗಳಿಸಿದ್ದಾರೆ. 34 ಏಕದಿನ ಪಂದ್ಯಗಳಿಂದ 46 ವಿಕೆಟ್‌ಗಳನ್ನು ಗಳಿಸಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಆಡಳಿತಗಾರ್ತಿಯಾಗಿಯೂ ಕೆಲಸ ಮಾಡಿದ್ದ ಅವರು ಮಹಿಳಾ ಕ್ರಿಕೆಟಿಗರಿಗೆ ಉದ್ಯೋಗಾವಕಾಶ ದೊರಕಿಸಿಕೊಡಲು ಶ್ರಮಿಸಿದ್ದರು.

‘ಪುರುಷ ಮತ್ತು ಮಹಿಳಾ ಕ್ರಿಕೆಟ್‌ ತಾರೆಯರನ್ನು ಒಳಗೊಂಡ ಐಸಿಸಿ ಹಾಲ್‌ ಆಫ್‌ ಫೇಮ್‌ಗೆ ಸೇರ್ಪಡೆಗೊಂಡ ಭಾರತದ ಮೊದಲ ಕ್ರಿಕೆಟಿಗಳಾಗಿರುವುದು ನಿಜಕ್ಕೂ ಬಲುದೊಡ್ಡ ಗೌರವ’ ಎಂದು ಐಸಿಸಿ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ 67 ವರ್ಷದ ಎಡುಲ್ಜಿ ತಿಳಿಸಿದ್ದಾರೆ.

ಆಧುನಿಕ ಕ್ರಿಕೆಟ್‌ನ ಸ್ಫೋಟಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ಸೆಹ್ವಾಗ್‌ ಅವರು 1999 ರಿಂದ 2013ರ ವರೆಗೆ ರಾಷ್ಟ್ರೀಯ ತಂಡದಲ್ಲಿ ಆಡಿದ್ದರು. 104 ಟೆಸ್ಟ್‌ಗಳನ್ನು ಆಡಿರುವ ಅವರು 23 ಶತಕಗಳನ್ನು ಒಳಗೊಂಡಂತೆ 8,586 ರನ್‌ ಪೇರಿಸಿದ್ದಾರೆ. 2008 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಚೆನ್ನೈನಲ್ಲಿ ಅವರು ಗಳಿಸಿದ್ದ 319 ರನ್‌ಗಳು, ಭಾರತದ ಪರ ಟೆಸ್ಟ್‌ನಲ್ಲಿ ದಾಖಲಾದ ಗರಿಷ್ಠ ಸ್ಕೋರ್‌ ಎನಿಸಿದೆ.

251 ಏಕದಿನ ಪಂದ್ಯಗಳಲ್ಲಿ ಆಡಿ 8,273 ರನ್‌ ಪೇರಿಸಿದ್ದು, 94 ವಿಕೆಟ್‌ಗಳನ್ನೂ ಪಡೆದಿದ್ದಾರೆ. 2011 ರಲ್ಲಿ ವೆಸ್ಟ್‌ ಇಂಡೀಸ್‌ ಎದುರು ಇಂದೋರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅವರು ಗಳಿಸಿದ್ದ 219 ರನ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಅತಿದೊಡ್ಡ ಇನಿಂಗ್ಸ್‌ ಆಗಿದೆ.

‘ನನಗೆ ಈ ಗೌರವ ನೀಡಿರುವ ಐಸಿಸಿ ಹಾಗೂ ತೀರ್ಪುಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು 45 ವರ್ಷದ ಸೆಹ್ವಾಗ್‌ ಪ್ರತಿಕ್ರಿಯಿಸಿದ್ಧಾರೆ.

1996ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರವಿಂದ ಡಿಸಿಲ್ವಾ ಅವರು ಸುದೀರ್ಘ 19 ವರ್ಷ (1984–2003) ಅಂತರರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ.

93 ಟೆಸ್ಟ್ ಪಂದ್ಯಗಳಿಂದ 6,361 ರನ್‌ಗಳು ಹಾಗೂ 308 ಏಕದಿನ ಪಂದ್ಯಗಳಿಂದ 9,284 ರನ್‌ಗಳನ್ನು ಕಲೆಹಾಕಿದ್ದಾರೆ. 1996ರ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜೇಯ 107 ರನ್‌ ಗಳಿಸಿದ್ದರು.

ಅರವಿಂದ ಡಿಸಿಲ್ವಾ
ಅರವಿಂದ ಡಿಸಿಲ್ವಾ
ಡಯಾನಾ ಎಡುಲ್ಜಿ
ಡಯಾನಾ ಎಡುಲ್ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT