ಬುಧವಾರ, ಮಾರ್ಚ್ 3, 2021
26 °C
ಸಾಧಾರಣ ಮೊತ್ತ ಕಲೆಹಾಕಿದ ಆಸ್ಟ್ರೇಲಿಯಾ ಎ; ಉಸ್ಮಾನ್ ಖ್ವಾಜಾ ಶತಕ

ಕ್ರಿಕೆಟ್: ಎಂಟು ವಿಕೆಟ್ ಕಬಳಿಸಿದ ಸಿರಾಜ್‌

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಹೈದರಾಬಾದ್ ಹುಡುಗ ಮೊಹಮ್ಮದ್ ಸಿರಾಜ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಬಿರುಗಾಳಿ ಎಬ್ಬಿಸಿದರು. ಇದರಿಂದಾಗಿ ದೊಡ್ಡ ಮೊತ್ತ ಗಳಿಸುವ ಆಸ್ಟ್ರೇಲಿಯಾ ಎ ತಂಡದ ಗುರಿ ಈಡೇರಲಿಲ್ಲ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದ ಭಾರತ ‘ಎ’ ತಂಡದ ಸಿರಾಜ್ (19.3–7–59–8) ಇಲ್ಲಿ ಆರಂಭವಾದ ‘ಟೆಸ್ಟ್‌’ನ ಮೊದಲ ಇನಿಂಗ್ಸ್‌ನಲ್ಲಿ  ಆಸ್ಟ್ರೇಲಿಯಾ ‘ಎ‘ ತಂಡವನ್ನು 243 ರನ್‌ಗಳ ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಶತಕ ಬಾರಿಸಿದ ಉಸ್ಮಾನ್ ಖ್ವಾಜಾ (127; 228ಎಸೆತ, 20ಬೌಂಡರಿ) ಮತ್ತು ಮಾರ್ನಸ್ ಲಾಬುಚಾನ್ (60; 105ಎಸೆತ, 11ಬೌಂಡರಿ) ಅವರು ತಂಡವು ಅಲ್ಪಮೊತ್ತಕ್ಕೆ  ಕುಸಿಯುವುದನ್ನು ತಡೆದರು.

ಬ್ಯಾಟಿಂಗ್ ಆರಂಭಿಸಿರುವ ಭಾರತ ‘ಎ’ ತಂಡವು ದಿನದಾಟದ ಅಂತ್ಯಕ್ಕೆ  12 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 41 ರನ್‌ ಗಳಿಸಿದೆ. 

ಬೆಳಿಗ್ಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಎ ತಂಡಕ್ಕೆ ಆರಂಭಿಕ ಜೋಡಿ ಉಸ್ಮಾನ್  ಮತ್ತು ಕರ್ಟಿಸ್ ಪ್ಯಾಟರ್ಸನ್ (31 ರನ್) ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 78 ರನ್‌ ಗಳಿಸಿದ ಅವರು ದೊಡ್ಡ ಮೊತ್ತ ಕಲೆಹಾಕುವತ್ತ ಹೆಜ್ಜೆ ಹಾಕಿದ್ದರು. ಆದರೆ ಊಟದ ವಿರಾಮಕ್ಕೆ ಕೇವಲ 15 ನಿಮಿಷಗಳು ಬಾಕಿಯಿದ್ದ ಸಂದರ್ಭದಲ್ಲಿ, ತಮ್ಮ ಎರಡು ಓವರ್‌ಗಳಲ್ಲಿ ಮೂರು ವಿಕೆಟ್ ಗಳಿಸಿದ ಸಿರಾಜ್ ಕೇಕೆ ಹಾಕಿದರು. ಪ್ಯಾಟರ್ಸನ್, ಟ್ರಾವಿಸ್ ಹೆಡ್ ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ ಅವರು ಪೆವಿಲಿಯನ್‌ಗೆ ಮರಳಿದರು. ವಿರಾಮದ ನಂತರದ ಎರಡನೇ ಓವರ್‌ನಲ್ಲಿ ಮಿಷೆಲ್ ಮಾರ್ಷ್ ಅವರ ವಿಕೆಟ್‌ ಕಬಳಿಸಿದರು. ಆಗ ತಂಡದ ಮೊತ್ತವು ಕೇವಲ 90 ರನ್‌ಗಳಾಗಿದ್ದವು.

ನಂತರ ಉಸ್ಮಾನ್ ಜೊತೆಗೂಡಿದ ಮಾರ್ನಸ್ ತಂಡದ ಆತಂಕವನ್ನು ದೂರ ಮಾಡಿದರು. ಐದನೇ ವಿಕೆಟ್‌ಗೇ 114 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ಚಹಾ ವಿರಾಮದವರೆಗೂ ಯಾವುದೇ ವಿಕೆಟ್‌ ಪತನವಾಗಲಿಲ್ಲ. ನಂತರ ಪೆವಿಲಿಯನ್‌ ಬದಿಯಿಂದ ಬೌಲಿಂಗ್ ಆರಂಭಿಸಿದ ಸಿರಾಜ್ ಈ ಜೊತೆಯಾಟವನ್ನು ಮುರಿದರು. ಅವರ ಇನ್‌ಸ್ವಿಂಗರ್‌ ತಡೆಯಲು ಮುಂದಾದ ಮಾರ್ನಸ್ ಬೀಟ್ ಆದರು. ಚೆಂಡು ಸ್ಟಂಪ್‌ಗೆ ಅಪ್ಪಳಿಸಿತು. ಇದಕ್ಕೂ ಮುನ್ನ ಉಸ್ಮಾನ್ ಶತಕದ ಗಡಿ ದಾಟಿದ್ದರು.

ನಂತರ ಬಂದ ಅಲೆಕ್ಸ್‌ ಕ್ಯಾರಿ ಅವರ ವಿಕೆಟ್‌ ಅನ್ನು ಕುಲದೀಪ್ ಯಾದವ್ ಕಬಳಿಸಿದರು. 66ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಸಿರಾಜ್  ಮೈಕೆಲ್ ನೇಸರ್ ಮತ್ತು ಕ್ರಿಸ್ ಟ್ರೆಮೆನ್ ಅವರ ವಿಕೆಟ್‌ಗಳನ್ನು ಕಬಳಿಸಿದರು. ಬ್ರೆಂಡನ್ ಡಾಜೆಟ್ ಅವರನ್ನು ಕುಲದೀಪ್ ಪೆವಿಲಿಯನ್‌ಗೆ ಕಳಿಸಿದರು.  ಕೊನೆಯದಾಗಿ ಉಸ್ಮಾನ್ ಖ್ವಾಜಾ ಅವರನ್ನೂ ಸಿರಾಜ್ ಔಟ್ ಮಾಡಿದರು.

 

ಆಸ್ಟ್ರೇಲಿಯಾ ‘ಎ’

243 (75.3 ಓವರ್‌ಗಳಲ್ಲಿ)

ಉಸ್ಮಾನ್ ಖ್ವಾಜಾ ಸಿ ಭರತ್ ಬಿ ಮೊಹಮ್ಮದ್ ಸಿರಾಜ್ 127

ಕರ್ಟೀಸ್ ಪ್ಯಾಟರ್ಸನ್ ಬಿ ಮೊಹಮ್ಮದ್ ಸಿರಾಜ್ 31

ಟ್ರಾವಿಸ್ ಹೆಡ್‌ ಸಿ ಭರತ್ ಬಿ ಮೊಹಮ್ಮದ್ ಸಿರಾಜ್ 04

ಪೀಟರ್ ಹ್ಯಾಂಡ್ಸ್‌ಕಂಬ್ ಎಲ್‌ಬಿಡಬ್ಲ್ಯು ಮೊಹಮ್ಮದ್ ಸಿರಾಜ್ 00

ಮಿಷೆಲ್ ಮಾರ್ಷ್ ಎಲ್‌ಬಿಡಬ್ಲ್ಯು ಮೊಹಮ್ಮದ್ ಸಿರಾಜ್ 00

ಮಾರ್ನಸ್ ಲಾಬುಚನ್ ಬಿ ಮೊಹಮ್ಮದ್ ಸಿರಾಜ್ 60

ಅಲೆಕ್ಸ್‌ ಕ್ಯಾರಿ ಸಿ ಶುಭಮನ್ ಗಿಲ್ (ಬದಲೀ ಆಟಗಾರ) ಬಿ ಕುಲದೀಪ್ ಯಾದವ್ 04

ಮೈಕೆಲ್ ನೆಸರ್ ಎಲ್‌ಬಿಡಬ್ಲ್ಯು ಮೊಹಮ್ಮದ್ ಸಿರಾಜ್ 00

ಕ್ರಿಸ್ ಟ್ರೆಮೆನ್ ಎಲ್‌ಬಿಡಬ್ಲ್ಯು ಮೊಹಮ್ಮದ್ ಸಿರಾಜ್ 00

ಬ್ರೆಂಡನ್ ಡಾಜೆಟ್ ಸಿ ಸಮರ್ಥ್ ಬಿ ಕುಲದೀಪ್ ಯಾದವ್ 00

ಜಾನ್ ಹಾಲೆಂಡ್ ಔಟಾಗದೆ 12

ಇತರೆ : 5 (ಬೈ 5)

ವಿಕೆಟ್ ಪತನ: 1–78 (ಪ್ಯಾಟರ್ಸನ್; 25.2), 2–86 (ಹೆಡ್; 27.5), 3–86 (ಪೀಟರ್; 27.6), 4–90 (ಮಾರ್ಷ್; 29.4), 5–204 (ಮಾರ್ನಸ್; 63.1), 6–209 (ಅಲೆಕ್ಸ್; 64.6), 7–210 (ಮೈಕೆಲ್; 65.2), 8–210 (ಕ್ರಿಸ್; 65.5), 9–215 (ಬ್ರೆಂಡನ್; 68.2), 10–243 (ಖ್ವಾಜಾ; 75.3).

 ಬೌಲಿಂಗ್

ಮೊಹಮ್ಮದ್ ಸಿರಾಜ್ 19.3–7–59–8, ನವದೀಪ್ ಸೈನಿ 9–3–24–0, ಕುಲದೀಪ್ ಯಾದವ್ 18–3–63–2, ಅಂಕಿತ್ ರಜಪೂತ್ 12–1–38–0, ಕೆ. ಗೌತಮ್ 16–5–46–0, ಆರ್. ಸಮರ್ಥ್ 1–0–8–0.

ಭಾರತ ‘ಎ‘

ವಿಕೆಟ್ ನಷ್ಟವಿಲ್ಲದೇ 41 (12 ಓವರ್‌ಗಳಲ್ಲಿ)

ಆರ್. ಸಮರ್ಥ್ ಔಟಾಗದೆ 10

ಮಯಂಕ್ ಅಗರವಾಲ್ ಔಟಾಗದೆ 31

ಬೌಲಿಂಗ್

ಕ್ರಿಸ್ ಟ್ರೆಮೇನ್ 4–1–15–0, ಬ್ರೆಂಡನ್ ಡಾಜೆಟ್ 5–0–24–0, ಮೈಕೆಲ್ ಸೆಸೆರ್ 2–1–1–0, ಜಾನ್ ಹಾಲೆಂಡ್ 1–0–1–0.

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.