ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ನಾಯಕಿಯ ಮಗುವಿನೊಂದಿಗೆ ಮುದ್ದಾಟ: ಸ್ಮೃತಿ ಮಂದಾನ ಭಾವನಾತ್ಮಕ ಪೋಸ್ಟ್ 

Last Updated 8 ಮಾರ್ಚ್ 2022, 5:43 IST
ಅಕ್ಷರ ಗಾತ್ರ

ನವದೆಹಲಿ: ಮಾ.6ರಂದು (ಭಾನುವಾರ) ನಡೆದ ಭಾರತ –ಪಾಕಿಸ್ತಾನ ವಿರುದ್ಧದ ಪಂದ್ಯ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು.

ಈ ಪಂದ್ಯ ಮುಗಿತ್ತಿದ್ದಂತೆ ಪಾಕಿಸ್ತಾನ ತಂಡದ ನಾಯಕಿ ಬಿಸ್ಮಾ ಮಹರೂಫ್ ಅವರು ತಮ್ಮ ಏಳು ತಿಂಗಳ ಮಗುವನ್ನು ಎತ್ತಿಕೊಂಡು ಪೆವಿಲಿಯನ್‌ಗೆ ಬಂದಿದ್ದರು. ಆಗ ಭಾರತದ ಆಟಗಾರ್ತಿಯರು ಬಿಸ್ಮಾ ಅವರ ಪುಟ್ಟ ಮಗುವಿನೊಂದಿಗೆ ಮುದ್ದಾಟವಾಡಿದ್ದರು.

ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡ 107 ರನ್‌ಗಳ ಜಯ ದಾಖಲಿಸಿತ್ತು. ಈ ಪಂದ್ಯದ ನಂತರದ ಸುಂದರ ಕ್ಷಣದ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಭಾರತದ ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಭಾರತ ಕ್ರಿಕೆಟ್‌ ತಂಡದ ಪ್ರಮುಖ ಬ್ಯಾಟರ್ ಸ್ಮೃತಿ ಮಂದಾನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಭಾವನಾನ್ಮಕ ಪೋಸ್ಟ್‌ವೊಂದನ್ನು ಪ್ರಕಟಿಸಿದ್ದಾರೆ.

‘ಮಗುವಿಗೆ ಜನ್ಮ ನೀಡಿದ 6 ತಿಂಗಳ ಬಳಿಕ ತಂಡಕ್ಕೆ ಹಿಂತಿರುಗಿ, ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದು ಸ್ಫೂರ್ತಿ ನೀಡುವ ಸಂಗತಿಯಾಗಿದೆ. ಬಿಸ್ಮಾ ಮಹರೂಫ್ ಅವರು ವಿಶ್ವದಾದ್ಯಂತ ಎಲ್ಲಾ ಕ್ರೀಡಾಪಟುಗಳಿಗೆ ಒಂದು ಮಾದರಿಯಾಗಿದ್ದಾರೆ’ ಎಂದು ಸ್ಮೃತಿ ಬರೆದುಕೊಂಡಿದ್ದಾರೆ.

‘ಬೇಬಿ ಫಾತಿಮಾಗಾಗಿಯೇ, ಬಿಸ್ಮಾ ಮಹರೂಫ್ ಶೀಘ್ರ ಆಟಕ್ಕೆ ಮರಳಿದ್ದಾರೆ ಎಂಬುದು ನನ್ನ ಅನಿಸಿಕೆ. ಆಕೆಗೆ (ಬೇಬಿ ಫಾತಿಮಾ) ಭಾರತದ ಪರವಾಗಿ ಬಹಳಷ್ಟು ಪ್ರೀತಿ ದೊರೆಯಲಿ’ ಎಂದು ಸ್ಮೃತಿ ಹೇಳಿದ್ದಾರೆ.

ಈ ಫೋಟೊವನ್ನು ಹಂಚಿಕೊಂಡಿದ್ದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ‘ಎಂತಹ ಸುಂದರ ಕ್ಷಣವಿದು. ಕ್ರಿಕೆಟ್ ಎಂಬುದು ಮೈದಾನದಲ್ಲಷ್ಟೇ ಬೌಂಡರಿಗಳನ್ನು ಹೊಂದಿದೆ. ಆದರೆ, ಅದು ಮೈದಾನದ ಹೊರಗೆ ಎಲ್ಲವನ್ನೂ ದಾಟಿಬಿಡುತ್ತದೆ. ಕ್ರೀಡೆ ಒಂದುಗೂಡಿಸುತ್ತದೆ’ ಎಂದು ಬರೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT