ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ರಿಕೆಟ್ ಪಂದ್ಯಕ್ಕೂ ‘ಗ್ರಹಣ’

ಗುರುವಾರದ ಆಟ ಬೆಳಿಗ್ಗೆ 11.15ಕ್ಕೆ ಆರಂಭ
Last Updated 26 ಡಿಸೆಂಬರ್ 2019, 10:51 IST
ಅಕ್ಷರ ಗಾತ್ರ

ಮೈಸೂರು: ಕಂಕಣ ಸೂರ್ಯಗ್ರಹಣವು ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ತಂಡಗಳ ನಡುವೆ ಇಲ್ಲಿನ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದ ಮೇಲೂ ಪರಿಣಾಮ ಬೀರಿದೆ.

ನಾಲ್ಕು ದಿನಗಳ ರಣಜಿ ಪಂದ್ಯ ಬುಧವಾರ ಆರಂಭವಾಗಿದ್ದು, ಶನಿವಾರದವರೆಗೆ ನಡೆಯಲಿದೆ. ಪ್ರತಿದಿನದ ಆಟ ಬೆಳಿಗ್ಗೆ 9.30ಕ್ಕೆ ಆರಂಭವಾಗುತ್ತದೆ. ಆದರೆ ಗ್ರಹಣದ ಕಾರಣ ಗುರುವಾರದ ಆಟವನ್ನು ಬೆಳಿಗ್ಗೆ 11.15ಕ್ಕೆ ಆರಂಭಿಸಲು ನಿರ್ಧರಿಸಲಾಗಿದೆ.

ಪ್ರತಿದಿನ ಸಂಜೆ 5ರ ವರೆಗೆ ಆಟ ನಡೆಯಲಿದ್ದರೆ, ಗುರುವಾರ 5.30ರ ವರೆಗೆ ಆಟ ಮುಂದುವರಿಯಲಿದೆ. 90 ಓವರ್‌ಗಳ ಆಟ ಸಾಧ್ಯವಾಗದಿರುವ ಕಾರಣ 79 ಓವರ್‌ಗಳ ಆಟ ನಡೆಯಲಿದೆ.

ರಣಜಿ ಟೂರ್ನಿಯ ಮೂರನೇ ಸುತ್ತಿನ ಪಂದ್ಯ ಮೈಸೂರು ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ಆದ್ದರಿಂದ ಗ್ರಹಣ ಸ್ಪಷ್ಟವಾಗಿ ಗೋಚರಿಸುವ ಸ್ಥಳಗಳಲ್ಲಿ ಆಟದ ಅವಧಿಯಲ್ಲಿ ಬದಲಾವಣೆ ತರುವಂತೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಸೂಚಿಸಿದೆ.

ಬಿಸಿಸಿಐ ಸೂಚನೆಯಂತೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಜತೆ ಚರ್ಚಿಸಿ ದಿನದಾಟವನ್ನು ತಡವಾಗಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪಂದ್ಯದ ರೆಫರಿ ಪಿ.ರಂಗನಾಥ್‌ ತಿಳಿಸಿದರು.

ಗ್ರಹಣದ ವೇಳೆ ಸೂರ್ಯನನ್ನು ಬರಿಗಣ್ಣಿನಿಂದ ನೋಡಿದರೆ ಕಣ್ಣಿಗೆ ಹಾನಿ ಉಂಟಾಗುತ್ತದೆ. ಮೈದಾನವು ತೆರೆದ ಸ್ಥಳವಾಗಿರುವುದರಿಂದ ಆಟಗಾರರು ಸೂರ್ಯನನ್ನು ನೋಡುವ ಸಾಧ್ಯತೆಗಳಿರುತ್ತದೆ. ಸೌರಕನ್ನಡಕ ಧರಿಸಿ ಆಟವಾಡಲು ಸಾಧ್ಯವಿಲ್ಲ. ಆದ್ದರಿಂದ ಆಟಗಾರರ ಹಿತಾಸಕ್ತಿ ಪರಿಗಣಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT