ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್: ಎಡಗೈ ವೇಗಿಗಳ ಎದುರಿಸಲು ಕೊಹ್ಲಿ ಸಿದ್ಧತೆ

ಕೇಪ್‌ಟೌನ್‌: ಜನವರಿ 3ರಿಂದ ಎರಡನೇ ಟೆಸ್ಟ್‌
Published 1 ಜನವರಿ 2024, 15:11 IST
Last Updated 1 ಜನವರಿ 2024, 15:11 IST
ಅಕ್ಷರ ಗಾತ್ರ

ಕೇಪ್‌ಟೌನ್‌: ದಕ್ಷಿಣ ಆಫ್ರಿಕಾದ ವೇಗಿ ನಾಂಡ್ರೆ ಬರ್ಗರ್‌ ಅವರನ್ನು ಎದುರಿಸುವ ನಿಟ್ಟಿನಲ್ಲಿ ವಿರಾಟ್‌ ಕೊಹ್ಲಿ ಅವರು ಸೋಮವಾರ ‘ನೆಟ್ ಸ್ಪ್ರಾಕ್ಟೀಸ್‌’ ವೇಳೆ ಹೆಚ್ಚಿನ ಗಮನಹರಿಸಿದರು. ಇನ್ನೊಂದೆಡೆ ಸತತವಾಗಿ ಶಾರ್ಟ್‌ಬಾಲ್‌ಗಳನ್ನು ಎದುರಿಸುವಲ್ಲಿ ಶ್ರೇಯಸ್‌ ಅಯ್ಯರ್‌ ತಡವರಿಸಿದಂತೆ ಕಂಡುಬಂದರು.

ಸೆಂಚುರಿಯನ್‌ನಲ್ಲಿ ನಡೆದ ಮೊದಲ ಕ್ರಿಕೆಟ್‌ ಟೆಸ್ಟ್‌ ಗೆದ್ದು ಎರಡು ಟೆಸ್ಟ್‌ಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮುನ್ನಡೆ ಸಾಧಿಸಿದೆ. ಬುಧವಾರ (ಜನವರಿ 3) ಕೇಪ್‌ಟೌನ್‌ನಲ್ಲಿ ಎರಡನೇ ಟೆಸ್ಟ್‌ ನಡೆಯಲಿದ್ದು, ಭಾರತಕ್ಕೆ ಸರಣಿ ಸೋಲು ತಪ್ಪಿಸುವ ಸವಾಲು ಎದುರಾಗಿದೆ.

ಹೊಸ ವರ್ಷದ ಮೊದಲ ದಿನ ಕೊಹ್ಲಿ ನೆಟ್ಸ್‌ನಲ್ಲಿ ಹೆಚ್ಚಿನ ಸಮಯ ತೆಗೆದುಕೊಂಡರು. ಒಂದು ಗಂಟೆಗೂ ಹೆಚ್ಚಿನ ಸಮಯ ಕಳೆದ ಅವರು,  ಮೊದಲು ಬೌಲರ್‌ಗಳನ್ನು ಎದುರಿಸಿದರು. ನಂತರ 20 ರಿಂದ 25 ನಿಮಿಷ ತೀವ್ರ ಗತಿಯ ಥ್ರೊ ಡೌನ್‌ಗಳನ್ನು ಎದುರಿಸಿದರು.

ಪಿಚ್‌ನಲ್ಲಿ ಎಡಗೈ ವೇಗದ ಬೌಲರ್‌ಗಳನ್ನು ನಿಭಾಯಿಸುವ ಉದ್ದೇಶವಿಟ್ಟುಕೊಂಡೇ ಅವರು ಅಭ್ಯಾಸಕ್ಕೆ ಇಳಿದಂತೆ ಇತ್ತು. ಈ ತಂಡದಲ್ಲಿ ಎಡಗೈ ವೇಗದ ಬೌಲರ್‌ಗಳಿಲ್ಲದ ಕಾರಣ ನೆಟ್‌ ಬೌಲರ್‌ ಕರೆಸಿಕೊಂಡು 25 ರಿಂದ 30 ಎಸೆತಗಳನ್ನು ಎದುರಿಸಿದರು. ಜೊತೆಗೆ ಎಂದಿನಂತೆ ಜಸ್ಪ್ರೀತ್‌ ಬೂಮ್ರಾ, ಮೊಹಮ್ಮದ್ ಸಿರಾಜ್, ರವಿಚಂದ್ರನ್ ಅಶ್ವಿನ್ ಮತ್ತು ಆವೇಶ್ ಖಾನ್ ಅವರ ಬೌಲಿಂಗ್‌ ಕೂಡ ಎದುರಿಸಿದರು.

ಕೊಹ್ಲಿ ಪದೇ ಪದೇ ಮುಂದಡಿಯಿಟ್ಟು ಆಡಿದರು. ಕೆಲವೊಮ್ಮೆ ಮುಂದೆ ಬಂದು ಎಸೆತಗಳನ್ನು ಮಿಡ್‌ವಿಕೆಟ್‌ ಮೇಲೆ ಬಾರಿಸಿದರು. ಅವರಿಗೆ ಎದುರಾದ ಒಂದೇ ಸಮಸ್ಯೆ ಎಂದರೆ ಕ್ರಿಕೆಟ್‌ ದಕ್ಷಿಣ ಆಫ್ರಿಕಾ ಒದಗಿಸಿದ ಬೌಲರ್‌, ಬರ್ಗರ್‌ ಅವರಿಗಿಂತ 15 ಕ್ಲಿಕ್‌ಗಳಷ್ಟು ಕಡಿಮೆ ವೇಗ ಹೊಂದಿದ್ದು. ಎಡಗೈ ವೇಗದ ಬೌಲರ್‌ ಬರ್ಗರ್‌ ಸೆಂಚುರಿಯನ್‌ನಲ್ಲಿ ನಡೆದ ತಮ್ಮ ಪದಾರ್ಪಣೆ ಟೆಸ್ಟ್‌ನಲ್ಲೇ ಭಾರತದ ಬ್ಯಾಟರ್‌ಗಳನ್ನು ಕಾಡಿ ಏಳು ವಿಕೆಟ್‌ಗಳನ್ನು ಕಬಳಿಸಿದ್ದರು.

ನೆಟ್‌ ಬೌಲರ್‌ನ ವೇಗ ಕಡಿಮೆಯಿದ್ದ ಕಾರಣ ಇನ್‌ಸ್ವಿಂಗ್‌ ‘ಓದಲು’ ಕೊಹ್ಲಿಗೆ ಅವಕಾಶ ದೊರೆತು ಅವರು ಮಿಡ್‌ವಿಕೆಟ್‌ ಮೇಲೆ ಫ್ಲಿಕ್‌ ಹೊಡೆತವಾಡಿದರು. ಪಂದ್ಯದ ಸಂದರ್ಭದಲ್ಲಿ ಕೊಹ್ಲಿ ಅವರಿಗೆ ಮುಂದೆಬಂದು ಆಡುವಷ್ಟು ಅವಕಾಶ ದೊರೆತಿರಲಿಲ್ಲ. ಅಶ್ವಿನ್ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್ ಎತ್ತಿದ ಅವರು, ಬೂಮ್ರಾ ಅವರನ್ನೂ ಎದುರಿಸಲೂ ಕಷ್ಟಪಡಲಿಲ್ಲ.

ಅಯ್ಯರ್‌ ಪರದಾಟ: ಅಯ್ಯರ್ ಅವರು ಶಾರ್ಟ್‌ಬಾಲ್‌ಗಳನ್ನು ಎದುರಿಸುವಲ್ಲಿ ಎಡವುತ್ತಿರುವುದು ಸೆಂಚುರಿಯನ್‌ ಟೆಸ್ಟ್‌ನಲ್ಲಿ ಮತ್ತೊಮ್ಮೆ ಬಯಲಾಗಿತ್ತು. ನೆಟ್ಸ್‌ನಲ್ಲಿ ನುವಾನ್ ಸೇನಾವಿರತ್ನೆ ಅವರನ್ನು ಎದುರಿಸುವಾಗಲೂ ಇದು ಗೋಚರವಾಯಿತು. ಒಂದೂವರೆ ತಿಂಗಳ ಹಿಂದೆ ವಿಶ್ವಕಪ್‌ನಲ್ಲಿ ಕೆಲವು ಅಮೋಘ ಇನಿಂಗ್ಸ್ ಆಡಿದ್ದ ಅವರು ಇಲ್ಲಿ ಪುಟಿದೇಳುತ್ತಿದ್ದ ಚೆಂಡನ್ನು ಸಲೀಸಾಗಿ ಆಡಲು ಆಗಲಿಲ್ಲ. ಒಮ್ಮೆ ಚೆಂಡು ಅವರ ಸೊಂಟದ ಮೇಲಿನ ಭಾಗಕ್ಕೆ ಬಡಿಯಿತು. ಅವರು ಕೆಲಕಾಲ ವಿಶ್ರಾಂತಿ ಪಡೆದು ಅಬ್ಯಾಸ ಮತ್ತೆ ಮುಂದುವರಿಸಿದರು. ಥ್ರೋ ಡೌನ್‌ ಬೌಲರ್‌ಗಳ ಎದುರೂ ಅವರು ವಿಶ್ವಾಸದಿಂದ ಇದ್ದಂತೆ ಕಾಣಲಿಲ್ಲ.

ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ಮಾತ್ರ ನಡೆಸಿದರು. ಶನಿವಾರ ಅಭ್ಯಾಸ ನಡೆಸುತ್ತಿದ್ದ ವೇಳೆ ಚೆಂಡು ಅವರ ಎಡ ಭುಜಕ್ಕೆ ಬಡಿದಿತ್ತು. ಸೋಮವಾರ ಅವರು ನೋವಿನಿಂದ ಬಳಲಿದಂತೆ ಕಾಣಲಿಲ್ಲ. ಶಾರ್ಟ್‌ಬಾಲ್‌ಗಳನ್ನು ಆತ್ಮವಿಶ್ವಾಸದಲ್ಲೇ ಆಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT