ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಯಲ್ಲಿ ಭ್ರಷ್ಟಾಚಾರ ತಡೆಗೆ ಕಾನೂನು ಇಲ್ಲ: ನೀರಜ್ ಕುಮಾರ್

Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಕ್ರೀಡೆಗಳಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು  ಆಡಳಿತಗಾರರು ಮೊದಲಿನಿಂದಲೂ ಆಸಕ್ತಿ ತೋರಿಲ್ಲ. ಇದರಿಂದಾಗಿ ಸ್ಪಾಟ್‌ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಆರೋಪಿ ಎಸ್‌. ಶ್ರೀಶಾಂತ್ ಕೂಡ ಪಾರಾದರು ಎಂದು ದೆಹಲಿಯ ಮಾಜಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದ್ದಾರೆ.

2013ರ ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆದಿತ್ತು. ಆ ಸಂದರ್ಭದಲ್ಲಿ ಐಪಿಎಸ್‌ ಅಧಿಕಾರಿ ನೀರಜ್‌ ಕುಮಾರ್ ಅವರು ವಿಶೇಷ ಘಟಕದ ಮುಖ್ಯಸ್ಥರಾಗಿದ್ದರು. ಅವರ ಮಾರ್ಗದರ್ಶದನಲ್ಲಿ ಪೊಲೀಸ್ ತಂಡವು ರಾಜಸ್ಥಾನ ರಾಯಲ್ಸ್‌ ತಂಡದ ಎಸ್‌. ಶ್ರೀಶಾಂತ್, ಜಿತ್ ಚಾಂಡಿಲಾ ಮತ್ತು ಅಂಕಿತ್ ಚವ್ಹಾಣ್ ಅವರನ್ನು ಬಂಧಿಸಿತ್ತು. 

2019ರಲ್ಲಿ  ಸುಪ್ರಿಂ ಕೋರ್ಟ್‌ನಲ್ಲಿ ಆರೋಪಿಗಳು ಖುಲಾಸೆಯಾಗಿದ್ದರು. ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಇರಲಿಲ್ಲ. 

‘ಭಾರತದಲ್ಲಿ ಕ್ರಿಕೆಟ್ ಅಥವಾ ಕ್ರೀಡೆಗಳಲ್ಲಿ ಭ್ರಷ್ಟಾಚಾರ ತಡೆಯಲು ಯಾವುದೇ ಕಾನೂನು ಇಲ್ಲ. ಆದ್ದರಿಂದ ಈ ಪ್ರಕರಣವು ತಾರ್ಕಿಕ ಅಂತ್ಯ ಕಾಣಲಿಲ್ಲ. ದುರದೃಷ್ಟಕರ’ ಎಂದು ನೀರಜ್ ಕುಮಾರ್  ಪಿಟಿಐ ಸುದ್ದಿಗಾರರಿಗೆ ಹೇಳಿದರು.

‘ಜಿಂಬಾಬ್ವೆಯಂತಹ ರಾಷ್ಟ್ರದಲ್ಲಿಯೂ ಕ್ರೀಡೆಯಲ್ಲಿ ಭ್ರಷ್ಟಾಚಾರ ತಡೆಗೆ ಕಾನೂನು ಇದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶಗಳಲ್ಲಿಯೂ ಕಾನೂನು ಇವೆ. ಅಲ್ಲಿ ಬರೀ ಕ್ರಿಕೆಟ್‌ ಅಷ್ಟೇ ಅಲ್ಲ. ಫುಟ್‌ಬಾಲ್, ಟೆನಿಸ್, ಗಾಲ್ಫ್‌ ಕ್ರೀಡೆಗಳಲ್ಲಿಯೂ ಇಂತಹ ಪ್ರಕರಣಗಳು ನಡೆಯುತ್ತವೆ. ಅವುಗಳ ತಡೆಗಾಗಿ ಕಾನೂನು ರೂಪಿಸಿದ್ದಾರೆ’ ಎಂದು 70 ವರ್ಷದ ನೀರಜ್ ಕುಮಾರ್ ಹೇಳಿದರು. 

2000ನೇ ಇಸವಿಯಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಹ್ಯಾನ್ಸಿ ಕ್ರೊನಿಯೆ ಅವರು ಮ್ಯಾಚ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ತಂಡದಲ್ಲಿಯೂ ನೀರಜ್ ಅವರಿದ್ದರು.

‘ಆರೋಪಿಗಳ ತಪ್ಪು ಸಾಬೀತು ಮಾಡಲು ನಾವು ಬಹಳಷ್ಟು ಪ್ರಯತ್ನ ಮಾಡಿ ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತೇವೆ. ಉದಾಹರಣೆಗೆ; ಪಂದ್ಯಗಳ ಫಿಕ್ಸಿಂಗ್‌ನಿಂದಾಗಿ ಬಹಳಷ್ಟು ಜನರಿಗೆ ಮೋಸವಾಗಿದೆ ಎಂದು ನಾವು ಉಲ್ಲೇಖಿಸುತ್ತೇವೆ. ಆಗ ನ್ಯಾಯಾಲಯವು, ಮೋಸ ಹೋದ  ಕನಿಷ್ಠ ಒಬ್ಬ ವ್ಯಕ್ತಿಯನ್ನು ಕರೆದು ಬಂದು ಹೇಳಿಕೆ ಕೊಡಿಸಿ ಎಂದು ಸೂಚಿಸುತ್ತದೆ. ಆ ರೀತಿ ಯಾರೂ ಬಂದು ಹೇಳಿಕೆ ಕೊಡುವುದಿಲ್ಲ. ಮೋಸಹೋದ ವ್ಯಕ್ತಿಯೇ ಬರದಿದ್ದರೆ ಮೊಕದ್ದಮೆ ನಿಲ್ಲುವುದಿಲ್ಲ. ಇದು ತಪ್ಪಿತಸ್ಥರು ಪಾರಾಗಲು ದಾರಿಯಾಗುತ್ತದೆ’ ಎಂದು ವಿವರಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT