ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011ರ ವಿಶ್ವಕಪ್ ಫಿಕ್ಸಿಂಗ್‌ ಆರೋಪ: ಸಾಕ್ಷ್ಯ ನೀಡಲು ಸಿದ್ಧ ಎಂದ ಲಂಕಾ ಮಾಜಿ ಸಚಿವ

Last Updated 4 ಜುಲೈ 2020, 15:59 IST
ಅಕ್ಷರ ಗಾತ್ರ

ಕೊಲಂಬೊ: ‘2011ರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಫಿಕ್ಸಿಂಗ್‌ ನಡೆದಿತ್ತು ಎಂಬುದನ್ನು ಸಾಬೀತುಪಡಿಸಲು ಅಗತ್ಯವಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ಗೆ (ಐಸಿಸಿ) ನೀಡಲು ತಯಾರಿದ್ದೇನೆ’ ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳತಗಮಗೆ ಶನಿವಾರ ಹೇಳಿದ್ದಾರೆ.

ಫಿಕ್ಸಿಂಗ್‌ ನಡೆದಿತ್ತು ಎಂಬುದನ್ನು ನಿರೂಪಿಸಲು ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣ ಶ್ರೀಲಂಕಾ ಪೊಲೀಸ್‌ ಶುಕ್ರವಾರ ಈ ಪ್ರಕರಣದ ತನಿಖೆಯನ್ನು ಕೈಬಿಟ್ಟಿತ್ತು.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಲಂಕಾ ತಂಡವು ಭಾರತದ ಎದುರು ಪರಾಭವಗೊಂಡಿತ್ತು. ಆ ಪಂದ್ಯವನ್ನು ಎರಡು ಪಕ್ಷಗಳು ಸೇರಿ ಮಾರಾಟ ಮಾಡಿವೆ ಎಂದು ಆರೋಪಿಸಿದ್ದ ಮಹಿಂದಾನಂದ ಈ ಕುರಿತು ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು.

‘ಪ್ರಭಾವಿ ವ್ಯಕ್ತಿಗಳು ಹಣಬಲದಿಂದ ತನಿಖೆಯ ದಾರಿ ತಪ್ಪಿಸಿದ್ದಾರೆ. ಪೊಲೀಸರು ಪ್ರಾಮಾಣಿಕತೆಯಿಂದ ತನಿಖೆ ನಡೆಸಲು ವಿಫಲರಾಗಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಷೆ ಅವರು ಮಧ್ಯಪ್ರವೇಶಿಸಿ ಮರು ತನಿಖೆ ನಡೆಸುವಂತೆ ಐಸಿಸಿ ಮೇಲೆ ಒತ್ತಡ ಹೇರಬೇಕು’ ಎಂದು ಅವರು ಹೇಳಿದ್ದಾರೆ.

‘ಅಗತ್ಯವಿರುವ ಎಲ್ಲಾ ಸಾಕ್ಷ್ಯಗಳನ್ನು ನೀಡಲು ಸಿದ್ಧನಿದ್ದೇನೆ. ಈ ಕುರಿತು ಐಸಿಸಿಯ ಭ್ರಷ್ಟಾಚಾರ ತಡೆ ಘಟಕದ ಮುಖ್ಯಸ್ಥ ಅಲೆಕ್ಸ್‌ ಮಾರ್ಷಲ್‌ ಅವರಿಗೂ ಮಾಹಿತಿ ನೀಡಿದ್ದೇನೆ’ ಎಂದೂ ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT