ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಬಳಗಕ್ಕೆ ಅಫ್ಗಾನಿಸ್ತಾನ ಸವಾಲು

ಚೊಚ್ಚಲ ಏಕದಿನ ಪಂದ್ಯದಲ್ಲಿ ಮೋಡಿ ಮಾಡುತ್ತಾರಾ ಮಥೀಶ ಪಥಿರಾಣ
Published 1 ಜೂನ್ 2023, 14:54 IST
Last Updated 1 ಜೂನ್ 2023, 14:54 IST
ಅಕ್ಷರ ಗಾತ್ರ

ಹಂಬಂಟೋಟಾ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭರವಸೆ ಮೂಡಿಸಿದ್ದ ಶ್ರೀಲಂಕಾ  ಬೌಲರ್ ಮಥೀಷ ಪಥಿರಾಣ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಅಫ್ಗಾನಿಸ್ತಾನ ಎದುರಿನ ಏಕದಿನ  ಪಂದ್ಯದ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವರು.

ಮಹತ್ವದ ಸರಣಿಗೂ ಮುನ್ನ ಹೊಸಪ್ರತಿಭೆಗಳನ್ನು ಕಣಕ್ಕಿಳಿಸುವ ಪ್ರಯೋಗವನ್ನು ಶ್ರೀಲಂಕಾ ಈ ಬಾರಿಯೂ ಮುಂದುವರಿಸಿದೆ. ಐಪಿಎಲ್‌ನಲ್ಲಿ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಮಿಂಚಿದ್ದ ಮಥೀಷ ಅವರಿಗೆ ಈ ಬಾರಿ ಅವಕಾಶ ಸಿಗಲಿದೆ.  2004ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ   ಲಸಿತ್ ಮಾಲಿಂಗ ಅವರನ್ನು ಶ್ರೀಲಂಕಾ ತಂಡ ಪದಾರ್ಪಣೆ ಅವಕಾಶ ನೀಡಿತ್ತು. 2008ರಲ್ಲಿ ಏಷ್ಯಾ ಕಪ್‌ ಟೂರ್ನಿಗೆ ಸ್ಪಿನ್‌ ಬೌಲರ್‌ ಅಜಂತ ಮೆಂಡಿಸ್‌ ಅವರನ್ನು ಪರಿಚಯಿಸಿ ಯಶಸ್ವಿಯಾಗಿತ್ತು. ಈ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಮೆಂಡಿಸ್ 6 ವಿಕೆಟ್‌ ಗಳಿಸಿದ್ದರು. ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಚೊಚ್ಚಲ ಏಕದಿನ ಪಂದ್ಯವನ್ನು ಆಡಲಿರುವ ರೌಂಡ್‌ ಆರ್ಮ್‌ ಶೈಲಿಯಿರುವ ಬೌಲರ್‌ ಮಥೀಷ ಅವರಿಗೂ ಈ ಸರಣಿ ಮಹತ್ವದ್ದಾಗಿದೆ.

ಐಸಿಸಿಯ ಏಕದಿನ ರ‍್ಯಾಂಕಿಂಗ್‌ನಲ್ಲಿ ಶ್ರೀಲಂಕಾ ತಂಡ ಕೆಳಹಂತದಲ್ಲಿದೆ. 1996ರಲ್ಲಿ ಏಕದಿನ ವಿಶ್ವಕಪ್‌ ಗೆದ್ದಿರುವ ಹಾಗೂ ಎರಡು ಬಾರಿ ರನ್ನರ್‌ ಅಪ್‌ ಆಗಿರುವ ಶ್ರೀಲಂಕಾ ಈ ಸಲದ  ವಿಶ್ವಕಪ್‌ ಟೂರ್ನಿಗೆ ಅರ್ಹತೆ ಪಡೆಯಲು ಅಫ್ಘಾನಿಸ್ತಾನ ಹಾಗೂ ನಂತರ ನಡೆಯಲಿರುವ   ಜಿಂಬಾಬ್ವೆ ವಿರುದ್ಧದ ಸರಣಿಗಳಲ್ಲಿ ಜಯ ಸಾಧಿಸುವುದು ಮುಖ್ಯವಾಗಿದೆ. 

ಈ ವರ್ಷ ಭಾರತದಲ್ಲಿ ನಡೆಯುವ ‌ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡಲು ಅಫ್ಘಾನಿಸ್ತಾನ ತಂಡವು ನೇರವಾಗಿ ಅರ್ಹತೆ ಗಳಿಸಿದೆ.  ಬೌಲಿಂಗ್‌ ವಿಭಾಗದಲ್ಲಿ ಪ್ರವಾಸಿ ತಂಡವು ಬಲಿಷ್ಠವಾಗಿದ್ದು, ಐಸಿಸಿಯ ಟಾಪ್‌ 10ರಲ್ಲಿ ಅಫ್ಗಾನಿಸ್ತಾನದ ಮೂವರು ಸ್ಥಾನ ಪಡೆದಿದ್ದಾರೆ. ಆದರೆ, ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಅವರು ಗಾಯಗೊಂಡಿರುವ ಕಾರಣ ಮೊದಲ ಎರಡು ಪಂದ್ಯಕ್ಕೆ ಲಭ್ಯರಿಲ್ಲ. ಆಫ್‌ ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಮತ್ತು ಮೊಹಮ್ಮದ್‌ ನಬಿ ಅವರಿಂದ ಪರಿಣಾಮಕಾರಿ ಆಟದ ನಿರೀಕ್ಷೆ ಇದೆ. ಐಪಿಎಲ್‌ನಲ್ಲಿ ಗುಜರಾತ್‌ ಟೈಟನ್ಸ್‌ನಲ್ಲಿ ಉತ್ತಮವಾಗಿ ಆಡಿದ್ದ ಎಡಗೈ ಸ್ಪಿನ್ನರ್‌ ನೂರ್‌ ಅಹಮ್ಮದ್‌ ಮೇಲೂ ನಿರೀಕ್ಷೆ ಹೆಚ್ಚಿದೆ. ಬ್ಯಾಟಿಂಗ್‌ ವಿಭಾಗದಲ್ಲೂ ಪ್ರವಾಸಿ ತಂಡ ಬಲಿಷ್ಠವಾಗಿದೆ.

ಮತ್ತೊಂದೆಡೆ ಶ್ರೀಲಂಕಾ ಟೆಸ್ಟ್‌ ತಂಡದ ನಾಯಕ ದಿಮುತ್‌ ಕರುಣರತ್ನೆ ಅವರನ್ನು ಏಕದಿನ ತಂಡಕ್ಕೆ ಸೇರಿಸಿಕೊಂಡಿದೆ. ಅವರು ಏಕದಿನ ಪಂದ್ಯದ ನಾಯಕನಾಗಿದ್ದ ಸಂದರ್ಭದಲ್ಲಿ ತಂಡವು 50 ಓವರ್‌ಗಳನ್ನು ಆಡಲು ಸತತವಾಗಿ ವಿಫಲವಾಗಿತ್ತು. ಹೀಗಾಗಿ, ಅವರ ನಾಯಕನ ಸ್ಥಾನಕ್ಕೆ ಕುತ್ತು ಬಂದಿತ್ತು. ಇದೀಗ ಅವರು ಮರಳಿ ತಂಡವನ್ನು ಸೇರಿಕೊಂಡಿದ್ದಾರೆ. ಗಾಯಗೊಂಡಿದ್ದ ವೇಗದ ಬೌಲರ್‌ ದುಷ್ಯಂತ ಚಮೀರಾ 7 ತಿಂಗಳ ಬಳಿಕ ತಂಡಕ್ಕೆ ಮರಳಿದ್ದಾರೆ.

ಶ್ರೀಲಂಕಾ ತಂಡ: ದಸೂನ್‌ ಶನಕ (ನಾಯಕ), ಕುಶಲ್‌ ಮೆಂಡಿಸ್‌ (ಉಪನಾಯಕ), ಪಥುಮ್‌ ನಿಸ್ಸಾಂಕ, ದಿಮುತ್‌ ಕರುಣರತ್ನೆ, ಸಾದೀರ ಸಮರವಿಕ್ರಮ, ಏಂಜೆಲೋ ಮ್ಯಾಥ್ಯೂಸ್‌, ಧನಂಜಯ ಡಿಸಿಲ್ವ, ಚರಿತ್‌ ಅಸಲಂಕ, ವಣಿಂದು ಹಸರಂಗ, ಮಹೀಷ್ ತೀಕ್ಷಣ, ದುಶಾನ್‌ ಹೇಮಂತ, ಚಮಿಕಾ ಕರುಣರತ್ನೆ, ದುಷ್ಯಂತ ಚಮಿರಾ, ಮಥೀಷ್ ಪಥಿರಾಣ, ಲಹೀರು ಕುಮಾರ, ಕುಶನ್‌ ರಜಿಥಾ.

ಅಫ್ಗಾನಿಸ್ತಾನ: ಹಶ್ಮುತುಲ್ಲ ಶಹೀದಿ (ನಾಯಕ), ರೆಹಮತ್‌ ಶಾ (ಉಪನಾಯಕ), ರೆಹಮತುಲ್ಲಾ ಗುರ್ಬಾಜ್‌, ಇಬ್ರಾಹಿಂ ಜದ್ರಾನ್, ರಿಯಾಜ್ ಹಸನ್‌, ನಜೀಬುಲ್ಲಾ ಜದ್ರಾನ್, ಮಹಮ್ಮದ್‌ ನಬಿ, ಐಕ್ರಮ್‌ ಐಕ್‌ಹೈಲ್‌, ಅಜ್ಮತುಲ್ಲಾ ಒಮರ್‌ಜೈ, ಮಜೀಬ್‌ ಉರ್‌ ರೆಹಮಾನ್‌, ನೂರ್‌ ಅಹಮ್ಮದ್‌, ಅಬ್ದುಲ್‌ ರೆಹಮಾನ್‌, ಫೈಸಲ್‌ ಹಕ್‌ ಫಾರೂಕಿ, ಫರೀದ್‌ ಅಹಮ್ಮದ್‌ ಮಲಿಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT