ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19: ನಿಧಿ ಸಂಗ್ರಹ ಟೂರ್ನಿ ರದ್ದು

Last Updated 2 ಮೇ 2021, 15:22 IST
ಅಕ್ಷರ ಗಾತ್ರ

ಕೊಲಂಬೊ: ಕೋವಿಡ್‌ ವಿರುದ್ಧದ ಸಮರಕ್ಕೆ ನೆರವಾಗಲು ಹಣ ಸಂಗ್ರಹಿಸುವುದಕ್ಕಾಗಿ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯೊಂದನ್ನು ಕೋವಿಡ್‌ನಿಂದಾಗಿಯೇ ರದ್ದುಗೊಳಿಸಲಾಗಿದೆ. ಈ ವಿಷಯವನ್ನು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ತಿಳಿಸಿದೆ.

ಪಲ್ಲೆಕೆಲೆಯಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಗಿದ ಮರುದಿನ, ಮಂಗಳವಾರ ಪಂದ್ಯ ನಡೆಸಲು ಉದ್ದೇಶಿಸಲಾಗಿತ್ತು. ಶ್ರೀಲಂಕಾ ಗ್ರೇಟ್ಸ್‌ ಇಲೆವನ್ ಮತ್ತು ಟೀಮ್ ಶ್ರೀಲಂಕಾ ನಡುವೆ ಹಣಾಹಣಿ ನಡೆಯಬೇಕಾಗಿತ್ತು. ಆದರೆ ಮಾಜಿ ಟೆಸ್ಟ್ ಆಟಗಾರ 36 ವರ್ಷದ ಉಪುಲ್ ತರಂಗ ಅವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣ ಪಂದ್ಯ ರದ್ದುಗೊಂಡಿದೆ.

ಶ್ರೀಲಂಕಾ ಗ್ರೇಟ್ಸ್‌ ಇಲೆವನ್ ತಂಡದಲ್ಲಿ ಸನತ್ ಜಯಸೂರ್ಯ ಮತ್ತು ಅರವಿಂದ ಡಿ ಸಿಲ್ವಾ ಅವರಂಥ ಸ್ಫೋಟಕ ಬ್ಯಾಟ್ಸ್‌ಮನ್‌ಗಳು ಇದ್ದಾರೆ.

ಶ್ರೀಲಂಕಾದಲ್ಲಿ ಈಗ ನಡೆಯುತ್ತಿರುವ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಪ್ರವೇಶವಿಲ್ಲ. ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಭಾನುವಾರದಿಂದ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಕೂಡ ಜಾರಿಯಲ್ಲಿದೆ. ಸಾಂಪ್ರದಾಯಿಕ ಹೊಸವರ್ಷವಾದ ಏಪ್ರಿಲ್ 14ರ ವರೆಗೆ ಶ್ರೀಲಂಕಾದಲ್ಲಿ ಹೆಚ್ಚು ಪ್ರಕರಣಗಳು ಇರಲಿಲ್ಲ. ನಂತರ ನಿತ್ಯವೂ ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಶನಿವಾರ 1699 ಮಂದಿಗೆ ಸೋಂಕು ತಗುಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT