ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ನಿರ್ಮಿಸಿದ ಪಿಚ್‌; ಮಗ ನೀಡಿದ ಮೆರುಗು

ಕರ್ನಾಟಕದ ಕ್ರಿಕೆಟ್‌ ರಂಗ ಅಪರೂಪದ ಜೋಡಿ ಕಸ್ತೂರಿರಂಗನ್–ಶ್ರೀರಾಮ್
Last Updated 22 ಜೂನ್ 2020, 9:09 IST
ಅಕ್ಷರ ಗಾತ್ರ

‘ಐವತ್ತೊಂದು ವರ್ಷಗಳ ಹಿಂದೆ ಆ ದೊಡ್ಡ ಮೈದಾನದಲ್ಲಿ ನಿಂತಿದ್ದ ನಾನು, ಅಪ್ಪಾ ಇಷ್ಟೊಂದು ದೊಡ್ಡ ಬಂಡೆ ಇದೆ. ಇದನ್ನು ಹೇಗೆ ತೆಗೆಯುತ್ತೀರಿ ಎಂದು ಕೇಳಿದ್ದೆ. ಎಂಟು ವರ್ಷದ ಬಾಲಕನಾಗಿದ್ದ ನನ್ನನ್ನು ನೋಡಿ ನಸುನಗು ಬೀರಿದ್ದರು. ಮುಂದೆ ಕೆಲವು ತಿಂಗಳುಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಕಲ್ಲುಬಂಡೆ ಪುಡಿಯಾಯಿತು. ಇವತ್ತು ವಿಶ್ವದ ಹಲವು ಕ್ರಿಕೆಟಿಗರ ಅಚ್ಚುಮೆಚ್ಚಿನ ಚಿನ್ನಸ್ವಾಮಿ ಕ್ರೀಡಾಂಗಣ ತಲೆ ಎತ್ತಿತು. ನನಗೂ ಸ್ಫೂರ್ತಿಯಾಯಿತು’–

ಹೋದ ಹತ್ತು ವರ್ಷಗಳಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಕ್ಯೂರೇಟರ್ ಆಗಿರುವ ಕೆ. ಶ್ರೀರಾಮ್ ಅವರ ಹೆಮ್ಮೆಯ ನುಡಿಗಳಿವು. ಚಾಮರಾಜಪೇಟೆಯಲ್ಲಿರುವ ಅವರ ಮನೆಯಲ್ಲಿ ತಮ್ಮ ತಂದೆ ಗೋಪಾಲಸ್ವಾಮಿ ಅಯ್ಯಂಗಾರ್ ಕಸ್ತೂರಿರಂಗನ್ ಅವರ ಪಕ್ಕದಲ್ಲಿ ಕುಳಿತ ಶ್ರೀರಾಮ್‌ ಈ ಮಾತುಗಳನ್ನು ಹೇಳಿದ್ದರು. ಕಸ್ತೂರಿರಂಗನ್ ಅವರು ಪಿಚ್‌ ನಿರ್ಮಿಸಿದಾಗ ಇದ್ದ ಕ್ರಿಕೆಟ್ ಬೇರೆಯದೇ ಆಗಿತ್ತು. ಈಗ ಅವರ ಮಗ ಶ್ರೀರಾಮ್ ಅವರ ಮುಂದಿರುವ ಸವಾಲುಗಳೇ ವಿಭಿನ್ನ. ಅಪ್ಪಂದಿರ ದಿನಾಚರಣೆಗಾಗಿ ‘ಪ್ರಜಾವಾಣಿ’ಯೊಂದಿಗೆ ಶ್ರೀರಾಮ್ ಹಂಚಿಕೊಂಡ ಮಾತುಗಳು ಇಲ್ಲಿವೆ.

* ನಿಮ್ಮ ತಂದೆಯವರು ಪಿಚ್‌ ಕ್ಯೂರೇಟರ್‌ ಆಗಿ ಕೆಲಸ ಮಾಡಿದ ಸಂದರ್ಭ ಹಾಗೂ ಈಗಿನ ಸಮಯಕ್ಕೆ ಏನು ವ್ಯತ್ಯಾಸವಿದೆ?

ಬಹಳಷ್ಟು ವ್ಯತ್ಯಾಸಗಳಿವೆ. ಅಂದು ಪಿಚ್‌ ನಿರ್ಮಾಣ ಮತ್ತು ನಿರ್ವಹಣೆಗೆ ಆಧುನಿಕ ತಂತ್ರಜ್ಞಾನ, ಯಂತ್ರಗಳು ಇರಲಿಲ್ಲ. ಆದರೆ ಆ ಕಾಲದಲ್ಲಿಯೇ ಅದ್ಭುತವಾದ ಮೈದಾನವನ್ನು ನಿರ್ಮಿಸಿದ ಶ್ರೇಯ ಅವರದ್ದು. ಅವರ ಅನುಭವ ಮತ್ತು ದೂರದೃಷ್ಟಿಯ ಶಕ್ತಿ ಅಸಾಧಾರಣ. ಇವತ್ತಿಗೂ ನಾನು ಪ್ರತಿಯೊಂದು ಪಂದ್ಯಕ್ಕೆ ಪಿಚ್‌ ಸಿದ್ಧಪಡಿಸುವಾಗಲೂ ಅವರ ಮಾರ್ಗದರ್ಶನವಿಲ್ಲದೇ ಮುಂದುವರಿಯುವುದಿಲ್ಲ. ಅಪ್ಪ ಕ್ರಿಕೆಟಿಗರಾಗಿ ದೊಡ್ಡ ಹೆಸರು ಮಾಡಿದವರು. ಅವರಿಂದಾಗಿ ನನಗೂ ಕ್ರಿಕೆಟ್ ನಂಟು ಬೆಳೆಯಿತು. ಪಿಚ್ ಮಾಡುವ ಕಲೆಯೂ ಕರಗತವಾಯಿತು. 2001ರವರೆಗೆ ಅಪ್ಪನೇ ಪಿಚ್‌ ಕ್ಯೂರೇಟರ್ ಆಗಿದ್ದರು. ನಂತರ ನಾರಾಯಣರಾಜು ಕಾರ್ಯನಿರ್ವಹಿಸಿದ್ದರು. ಅವರ ನಂತರ 2010ರಲ್ಲಿ ಬ್ರಿಜೇಶ್ ಪಟೇಲ್ ಅವರು ನನಗೆ ಹೊಣೆ ನೀಡಿದ್ದರು.

* ಈಗಿನ ಕ್ರಿಕೆಟ್‌ನಲ್ಲಿ ಪಿಚ್ ನಿರ್ವಹಣೆಯ ಸವಾಲು ಯಾವ ರೀತಿ ಇದೆ?

ಇವತ್ತಿನ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಪಿಚ್‌ ಸದಾ ಸುದ್ದಿಯಲ್ಲಿರುತ್ತದೆ. ಆದರೆ ನನ್ನ ತಂದೆಯ ಮಾರ್ಗದರ್ಶನದಿಂದ ನನಗೆ ಕಷ್ಟವಾಗಿಲ್ಲ. ಆದರೆ 2015ರ ಸಂದರ್ಭದಲ್ಲಿ ಒಂದು ಕಹಿ ಅನುಭವ ಆಗಿತ್ತು. ಬಿಸಿಸಿಐನ ಕೆಲವು ಪರಿಣತರ ಸಲಹೆಯಂತೆ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ನ ಮೇಲ್ಪದರ ನವೀಕರಣ ಮಾಡಿದ್ದೆವು. ಆ ವರ್ಷ ಐಪಿಎಲ್‌ನಲ್ಲಿ ಸರಾಸರಿ 128 ರನ್‌ಗಳು ದಾಖಲಾದವು. ಆಗ ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಕೆಎಸ್‌ಸಿಎ ಆಡಳಿತಕ್ಕೂ ಬೇಸರವಾಗಿತ್ತು. ಅಪ್ಪ ಕೂಡ ನನ್ನನ್ನು ಬೈದಿದ್ದರು. ಆಗ ಬಹಳಷ್ಟು ನೊಂದಿದ್ದೆ. ಆದರೆ ಬ್ರಿಜೇಶ್ ಅದರ ನಂತರವೂ ಅವಕಾಶ ಕೊಟ್ಟರು. ನಂತರ ಮೂರು ವರ್ಷಗಳಲ್ಲಿ ಶ್ರೇಷ್ಠ ಪಿಚ್ ಕ್ಯೂರೇಟರ್ ಪ್ರಶಸ್ತಿ ಒಲಿಯಿತು. ಚಿನ್ನಸ್ವಾಮಿ ಶ್ರೇಷ್ಠ ಕ್ರೀಡಾಂಗಣ ಮತ್ತು ಪಿಚ್‌ ಗೌರವಕ್ಕೆ ಪಾತ್ರವಾಯಿತು. ವಿಶ್ವದ ಉತ್ತಮ ಪಿಚ್‌ಗಳಲ್ಲಿ ಇದೂ ಒಂದಾಗಿದೆ. ನಮ್ಮ ತಂಡದಲ್ಲಿರುವ ಜೆಸಿಂತಾ, ಪ್ರಶಾಂತ್ ಮತ್ತು ಸಿಬ್ಬಂದಿಯ ಅಪಾರ ಶ್ರಮ ಇದರ ಹಿಂದೆ ಇದೆ. ಅನಿಲ್ ಕುಂಬ್ಳೆ, ಶ್ರೀನಾಥ್ ಅವರು ಕೆಎಸ್‌ಸಿಎ ಆಡಳಿತದಲ್ಲಿದ್ದಾಗ ಆಲೂರಿನ ಮೂರು ಮೈದಾನಗಳನ್ನು ಕೇವಲ ಆರು ತಿಂಗಳಲ್ಲಿ ಸಿದ್ಧಪಡಿಸಿದ್ದು ಹೆಮ್ಮೆಯ ವಿಷಯ.

* ನೀವು ಸಿದ್ಧಪಡಿಸುವ ಪಿಚ್‌ನ ವಿಶೇಷತೆ ಏನು?

ಟೆಸ್ಟ್‌ ಪಂದ್ಯಗಳಿಗೆ ಪಿಚ್ ಸಿದ್ಧಪಡಿಸುವುದು ಕಠಿಣ ಸವಾಲು. ಆದರೆ ನಾನು ಇದುವರೆಗೆ ಮಾಡಿರುವ ಪಿಚ್‌ಗಳಲ್ಲಿ ಪಂದ್ಯಗಳು ಕನಿಷ್ಠ ನಾಲ್ಕು ದಿನಗಳವರೆಗೆ ನಡೆದಿವೆ. ಫಲಿತಾಂಶಗಳು ಹೊರಹೊಮ್ಮಿವೆ. ರಣಜಿ ಪಂದ್ಯಗಳೂ ಮೂರುವರೆ ದಿನ ನಡೆದಿವೆ. ಹೋದ ರಣಜಿ ಋತುವಿನಲ್ಲಿ ಮುಂಬೈನಲ್ಲಿ ತಟಸ್ಥ ಪಿಚ್ ಕ್ಯೂರೇಟರ್ ಆಗಿದ್ದೆ. ಅಲ್ಲಿ ಮುಂಬೈ ಮತ್ತು ರೈಲ್ವೆ ನಡುವಣ ರೋಚಕ ಪಂದ್ಯ ನಡೆದಿತ್ತು. ತವರಿನ ತಂಡವು ಸೋತಿತ್ತು. ಯಾರೇ ಜಯಿಸಲಿ ಅಮೋಘವಾದ ಕ್ರಿಕೆಟ್ ಆಟ ನಡೆದಾಗ ನಮಗೆ ಸಂತಸ. ಅಪ್ಪ ಮತ್ತು ನಾನು ಇದುವರೆಗೆ ಒಂದೇ ಒಂದು ರೂಪಾಯಿ ಕೂಡ ಪಡೆಯದೇ ಕಾರ್ಯನಿರ್ವಹಿಸಿದ್ದೇವೆ.

* ಚಿನ್ನಸ್ವಾಮಿ ಕ್ರೀಡಾಂಗಣದೊಂದಿಗಿನ ನಿಮ್ಮ ನಂಟು ಬಹಳ ಹಳೆಯದು ಅವಿಸ್ಮರಣೀಯವಾದ ನೆನಪು ಯಾವುದು?

ಹತ್ತಾರು ನೆನಪುಗಳಿವೆ. ಎಂಟು ವರ್ಷದವನಿದ್ದೆ. ಅಪ್ಪ ಇಲ್ಲಿಗೆ ಕರೆದುಕೊಂಡು ಬಂದಾಗ. ಆಗ ಕಲ್ಲುಬಂಡೆಯೊಂದಿತ್ತು ಇಲ್ಲಿ. ಅದನ್ನು ಕಾರ್ಮಿಕರು ಹಾರೆ, ಸುತ್ತಿಗೆಗಳಿಂದ ಪುಡಿ ಪುಡಿ ಮಾಡಿ ತೆರವು ಮಾಡಿದ್ದರು. ಈಗಿನಂತೆ ಆಧುನಿಕ ಯಂತ್ರಗಳಿರಲಿಲ್ಲ. ನಂತರ ದಿನದಿಂದ ದಿನಕ್ಕೆ ಕೆಲಸ ಭರದಿಂದ ನಡೆದಿತ್ತು. ಕ್ರಿಕೆಟ್ ಮೈದಾನವೊಂದು ಅರಳಿತ್ತು. 1974ರಲ್ಲಿ ಮೊದಲ ಟೆಸ್ಟ್‌ ಪಂದ್ಯ ನಡೆಯಿತು. ಭಾರತ ಮತ್ತು ವೆಸ್ಟ್ ಇಂಡೀಸ್‌ ನಡುವಣ ಪಂದ್ಯ ಅದು. ಪಂದ್ಯದ ಮುನ್ನಾ ದಿನ ಪಿಚ್‌ ಬಳಿ ನಾನು ಅಪ್ಪನೊಂದಿಗೆ ನಿಂತಿದ್ದೆ. ವಿಂಡೀಸ್ ತಂಡದ ಮ್ಯಾನೇಜರ್ ನನ್ನ ಬಳಿ ಬಂದು ನೀವು ಪಿಚ್ ಕ್ಯುರೇಟರ್‌ ಏನಪ್ಪಾ ಎಂದು ನಗುತ್ತಾ ಕೇಳಿದ್ದರು. ಆ ಪಂದ್ಯ ನಡೆಯುವಾಗ ಒಂದು ದಿನ ವಿವಿಯನ್ ರಿಚರ್ಡ್ಸ್‌ ನನ್ನ ಹೆಗಲ ಮೇಲೆ ಕೈಹಾಕಿಕೊಂಡು ನಿಂತು ನೋಡಿದ್ದು

ಮಗನ ಕಾರ್ಯ ಅಪ್ಪನಿಗೆ ಹೆಮ್ಮೆ

ಆಗಿನ ಕಾಲದಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆ ಯುತ್ತಿದ್ದವು. 1969ರಲ್ಲಿ ಚಿನ್ನಸ್ವಾಮಿಯವರು ನನಗೆ ಹೊಸ ಕ್ರೀಡಾಂಗಣದ ನಿರ್ಮಾಣದ ಹೊಣೆ ನೀಡಿದರು. ಮುಂದೆ ಪಿಚ್‌ ಕ್ಯುರೇಟರ್ ಆಗಿ ಕಾರ್ಯನಿರ್ವಹಿಸಿದೆ. ಆಗಿನ ಮೈಸೂರು ತಂಡದಲ್ಲಿ ಆಡಿದ್ದ ಅನುಭವ ಮತ್ತು ನಮ್ಮ ಕುಟುಂಬದ ವೃತ್ತಿಯಾದ ತೋಟಗಾರಿಕೆಯ ಅನುಭವದಿಂದ ಕ್ರೀಡಾಂಗಣದ ನಿರ್ವಹಣೆ ಸುಲಭವಾಯಿತು. ಈಗ ಶ್ರೀರಾಮ್ ಆ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದು ಸಂತಸವಾಗಿದೆ ಎಂದು ಕಸ್ತೂರಿರಂಗನ್
ಹೇಳುತ್ತಾರೆ.

ಕಸ್ತೂರಿರಂಗನ್ ಮತ್ತು ಶ್ರೀರಾಮ್ –ಪ್ರಜಾವಾಣಿ ಚಿತ್ರ/ರಂಜು ಪಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT