ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಲ್ ಪುನರಾರಂಭಕ್ಕೆ ಸಿದ್ಧತೆ

ಸ್ಥಳೀಯ ಫ್ರ್ಯಾಂಚೈಸಿ ಲೀಗ್ ಕ್ರಿಕೆಟ್‌ ಪುನರಾರಂಭಕ್ಕೆ ಕೆಎಸ್‌ಸಿಎ ಚಿತ್ತ
Published 1 ಜುಲೈ 2023, 1:00 IST
Last Updated 1 ಜುಲೈ 2023, 1:00 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮಾಂತರ ಕ್ರಿಕೆಟ್‌ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಟೂರ್ನಿಯೆಂದೇ ಬಿಂಬಿಸಲಾಗಿದ್ದ ಕರ್ನಾಟಕ ಪ್ರೀಮಿಯರ್ ಲೀಗ್ ಪುನರಾರಂಭಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಿದ್ಧತೆ ಆರಂಭಿಸಿದೆ.  ಮುಂದಿನ ತಿಂಗಳು ಟೂರ್ನಿ ಆಯೋಜನೆಗೊಳ್ಳುವ ಸಾಧ್ಯತೆ ಇದೆ.

2019ರಲ್ಲಿ ಕೊನೆಯ ಬಾರಿಗೆ ಟೂರ್ನಿ ನಡೆದಿತ್ತು. ಮ್ಯಾಚ್ ಫಿಕ್ಸಿಂಗ್ ಹಗರಣ ಸದ್ದು ಮಾಡಿದ್ದರಿಂದ ಮತ್ತು ಕೋವಿಡ್‌ ಬಿಕ್ಕಟ್ಟಿನಿಂದಾಗಿ ಟೂರ್ನಿ ಸ್ಥಗಿತವಾಗಿತ್ತು. ನಾಲ್ಕು ವರ್ಷಗಳ ನಂತರ ಮತ್ತೆ ಫ್ರ್ಯಾಂಚೈಸಿ ಆಧಾರಿತ ಕೆಪಿಎಲ್ ಆಯೋಜಿಸುವ ಕುರಿತು ರಾಜ್ಯ ಸಂಸ್ಥೆಯಲ್ಲಿ ಚರ್ಚೆಗಳು ನಡೆಯುತ್ತಿವೆ.

ಹೋದ ವರ್ಷ ಆಗ ಅಧ್ಯಕ್ಷರಾಗಿದ್ದ  ರೋಜರ್ ಬಿನ್ನಿ ನೇತೃತ್ವದ ಆಡಳಿತ ಸಮಿತಿಯು ಮಹಾರಾಜ ಟ್ರೋಫಿ ಟಿ20 ಲೀಗ್ ಆಯೋಜಿಸಿತ್ತು. ಆದರೆ ಅದು ಫ್ರಾಂಚೈಸಿ ಲೀಗ್ ಆಗಿರಲಿಲ್ಲ. ಪ್ರಾಯೋಜಕತ್ವ ಮಾದರಿಯಲ್ಲಿ ಆಗಿತ್ತು. ಆಡಿದ್ದ ಆರು ತಂಡಗಳ ಆಟಗಾರರು, ನೆರವು ಸಿಬ್ಬಂದಿ ಮತ್ತು ತರಬೇತುದಾರರನ್ನು ಕೆಎಸ್‌ಸಿಎ ನೇಮಿಸಿದ್ದ  ಸಮಿತಿಯು ಆಯ್ಕೆ ಮಾಡಿತ್ತು. ಆಟಗಾರರ ಆಯ್ಕೆಗೆ ಹರಾಜು ಪ್ರಕ್ರಿಯೆ ಇರಲಿಲ್ಲ. ಮೈಸೂರು ಮತ್ತು ಬೆಂಗಳೂರಿನಲ್ಲಿ ಪಂದ್ಯಗಳು ನಡೆದಿದ್ದವು.

‘ಹೋದ ವರ್ಷದ ಮಹಾರಾಜ ಟ್ರೋಫಿ ಟೂರ್ನಿಯು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಫ್ರ್ಯಾಂಚೈಸಿಗಳಿದ್ದರೆ ರಾಜ್ಯದ ಬೇರೆ ಬೇರೆ ನಗರಗಳಲ್ಲಿರುವ ಮೈದಾನಗಳಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಬಹುದು. ಇದರಿಂದ ಸ್ಥಳೀಯ ಪ್ರತಿಭೆಗಳಿಗೆ  ಅವಕಾಶ ಸಿಗುತ್ತದೆ. ಸ್ಥಳೀಯ ಅಭಿಮಾನಿಗಳಿಗೂ ಪಂದ್ಯಗಳನ್ನು ನೋಡಲು ಅವಕಾಶ ಸಿಗುತ್ತದೆ. ಆದ್ದರಿಂದ ಫ್ರ್ಯಾಂಚೈಸಿ ಲೀಗ್ ಮಾಡುವುದು ಒಳಿತು‘ ಎಂದು ಕೆಎಸ್‌ಸಿಎ ಹೆಸರು ಹೇಳಲಿಚ್ಛಿಸದ ಸದಸ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

2009ರಲ್ಲಿ ಮೊದಲ ಆವೃತ್ತಿ ನಡೆದಿತ್ತು. ಎಂಟು ತಂಡಗಳು ಆಡಿದ್ದವು. ಬೆಂಗಳೂರು, ವಿಜಯಪುರ, ಬೆಳಗಾವಿ, ಮೈಸೂರು, ಮಂಗಳೂರು, ದಾವಣಗೆರೆ ಮತ್ತು ಶಿವಮೊಗ್ಗದ ತಂಡಗಳಿದ್ದವು. ಅದರಲ್ಲಿ ರಾಜ್ಯ ತಂಡದ ಪ್ರಮುಖ ಕ್ರಿಕೆಟಿಗರು ಆಡಿದ್ದರು. 2010–11ರಲ್ಲಿಯೂ ಟೂರ್ನಿ ಆಯೋಜನೆಗೊಂಡಿತ್ತು. ಆದರೆ ಅದರ ನಂತರದ ಮೂರು ವರ್ಷ ಟೂರ್ನಿ ನಡೆಯಲಿಲ್ಲ. 2014ರಲ್ಲಿ ಮರಳಿ ಆರಂಭವಾಯಿತು. ಕೆಎಸ್‌ಸಿಎ ಮಾಜಿ ಅಧ್ಯಕ್ಷರೂ ಆಗಿದ್ದ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ಅವರ ಹೆಸರಿನಲ್ಲಿ ಟ್ರೋಫಿ ನೀಡಲು ಆರಂಭಿಸಲಾಯಿತು. ಆದರೆ ಏಳು ತಂಡಗಳು ಮಾತ್ರ ಕಣದಲ್ಲಿದ್ದವು. 2019ರವರೆಗೂ ಟೂರ್ನಿ ನಡೆಯಿತು.

’ಕೋವಿಡ್ ಕಾರಣದಿಂದ ಟೂರ್ನಿ ಸ್ಥಗಿತವಾಗಿತ್ತು. ಗ್ರಾಮಾಂತರ ವಿಭಾಗಗಳ ಕ್ರಿಕೆಟ್ ಪ್ರತಿಭೆಗಳಿಗೆ ಈ ಟೂರ್ನಿಯು ಉತ್ತಮ ವೇದಿಕೆಯಾಗಿದೆ. ಆದ್ದರಿಂದ ಮರು ಆರಂಭ ಮಾಡಲು ಯೋಜಿಸಿದ್ದೇವೆ. ಈ ಕುರಿತು ಶೀಘ್ರದಲ್ಲಿಯೇ ಸಂಪೂರ್ಣ ಚರ್ಚೆ ನಡೆಸಿ ಯೋಜನೆ ಸಿದ್ಧಪಡಿಸುತ್ತೇವೆ. ಆಗಸ್ಟ್‌ನಲ್ಲಿಯೇ ಟೂರ್ನಿ ನಡೆಯುವುದು ಬಹುತೇಕ ಖಚಿತ‘ ಎಂದು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ’ಪ್ರಜಾವಾಣಿ‘ಗೆ ತಿಳಿಸಿದರು.

ಈ ಹಿಂದೆ ಟೂರ್ನಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಹೊಸದಾಗಿ ಆರಂಭಿಸುವುದು ಒಳ್ಳೆಯದು. ಟಿವಿಯಲ್ಲಿ ನೇರಪ್ರಸಾರವೂ ಇರುವುದರಿಂದ ಸ್ಥಳೀಯ ಆಟಗಾರರಿಗೆ ಐಪಿಎಲ್ ಮತ್ತಿತರ ಟೂರ್ನಿಗಳ ಆಯ್ಕೆಗಾರರ ಗಮನ ಸೆಳೆಯಲು ಅವಕಾಶವಾಗುತ್ತದೆ. ಜೊತೆಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಆಟಗಾರರೊಂದಿಗಿನ ಒಡನಾಟವೂ ಸಾಧ್ಯವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಟೂರ್ನಿಯು ಕಳಂಕಮುಕ್ತವಾಗಿ ನಡೆಯಬೇಕು ಎಂದು ಕೆಲವು ಹಿರಿಯ ಕ್ರಿಕೆಟಿಗರು ಅಭಿಪ್ರಾಯಪಡುತ್ತಾರೆ.  

2019ರ ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್ ನಡೆದ ಕುರಿತು ವರದಿಯಾಗಿತ್ತು.  ಟೂರ್ನಿಯಲ್ಲಿ ಆಡಿದ್ದ ರಾಜ್ಯದ ಕೆಲವು ಆಟಗಾರರು, ಕೋಚ್ ಮತ್ತು ಫ್ರ್ಯಾಂಚೈಸಿಯ ಮಾಲೀಕರೊಬ್ಬರು ಆರೋಪಿಗಳಾಗಿದ್ದರು. ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹಲವು ತಿಂಗಳ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ನಂತರ ಕೆಲವು ಕ್ರಿಕೆಟಿಗರು ಆರೋಪಮುಕ್ತರಾಗಿದ್ದಾರೆ.

ಮಹಿಳೆಯರಿಗೆ ಟಿ20 ಟೂರ್ನಿ

ರಾಜ್ಯದ ಮಹಿಳಾ ಕ್ರಿಕೆಟಿಗರಿಗಾಗಿ ಟಿ20 ಟೂರ್ನಿ ಆಯೋಜಿಸಲು ಕೆಎಸ್‌ಸಿಎ ಸಿದ್ಧವಾಗಿದೆ. 

’ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ನೀಡುವಲ್ಲಿ ರಾಜ್ಯ ಸಂಸ್ಥೆಯು ಮುಂಚೂಣಿಯಲ್ಲಿದೆ. ಇದೀಗ ಮಹಿಳಾ ಟಿ20 ಚಾಂಪಿಯನ್‌ಷಿಪ್ ಟೂರ್ನಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಪ್ರತಿಭಾನ್ವಿತ ಆಟಗಾರ್ತಿಯರಿಗೆ ಉತ್ತಮ ಅವಕಾಶ ಸಿಗಲಿದೆ‘ ಎಂದು ಅಧ್ಯಕ್ಷ ರಘುರಾಮ್ ಭಟ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT