ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟೆಸ್ಟ್‌ನಲ್ಲಿ 'ಯಶಸ್ವಿ' ದ್ವಿಶತಕ: ಜೈಸ್ವಾಲ್ ಹಿಂದಿರುವ ಪಾನಿಪೂರಿ ಕಥೆ ಏನು...!

Published 3 ಫೆಬ್ರುವರಿ 2024, 11:30 IST
Last Updated 3 ಫೆಬ್ರುವರಿ 2024, 11:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ದ್ವಿಶತಕ ಬಾರಿಸುವ ಮೂಲಕ ಕ್ರಿಕೆಟ್‌ ಪ್ರೇಮಿಗಳ ಮನ ಗೆದ್ದರು. 

22 ವರ್ಷದ ಯುವ ಬ್ಯಾಟರ್‌ ಜೈಸ್ವಾಲ್ ತಮ್ಮ ಆರನೇ ಟೆಸ್ಟ್‌ ಪಂದ್ಯದಲ್ಲಿ 290 ಎಸೆತಗಳನ್ನು ಎದುರಿಸಿ 209 ರನ್‌ ಗಳಿಸಿ ಔಟಾದರು. ಈ ಮೂಲಕ ಇಂಗ್ಲೆಂಡ್‌ ಎದುರು ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 112 ಓವರ್‌ಗಳಲ್ಲಿ 396 ರನ್‌ಗಳಿಗೆ ಆಲೌಟ್‌ ಆಯಿತು.

ಜೈಸ್ವಾಲ್‌ ದ್ವಿಶತಕದ ಹಾದಿಯಲ್ಲಿ 19 ಬೌಂಡರಿ ಹಾಗೂ 7 ಸಿಕ್ಸರ್‌ಗಳು ಇದ್ದವು. ಭಾರತ ತಂಡದ ಕಳಪೆ ಬ್ಯಾಟಿಂಗ್‌ನಲ್ಲಿ ಜೈಸ್ವಾಲ್‌ ಮಾತ್ರ ಮಿಂಚಿದರು. 

107ನೇ ಓವರ್‌ನಲ್ಲಿ ಜೈಸ್ವಾಲ್‌ ಔಟಾದಾಗ ಇಂಗ್ಲೆಂಡ್‌ ತಂಡದ ಆಟಗಾರರು ಅವರ ಬಳಿ ಬಂದು ಅಭಿನಂದಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 1993ರಲ್ಲಿ ಇಂಗ್ಲೆಂಡ್‌ ಹಾಗೂ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅತ್ಯಂತ ಕಿರಿಯ ವಯಸ್ಸಿನ ಆಟಗರನಾಗಿದ್ದ ವಿನೋದ ಕಾಂಬ್ಳಿ ದ್ವಿಶತಕ ಬಾರಿಸಿ ಸುದ್ದಿಯಾಗಿದ್ದರು. ಆಗ ಅವರಿಗೆ 21 ವರ್ಷಗಳು. 

ಇದಕ್ಕೂ ಮುನ್ನ 1971ರಲ್ಲಿ ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ನೆಲದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ್ದರು. 2008ರಲ್ಲಿ ಗೌತಮ್‌ ಗಂಭೀರ್‌ ಕೂಡ ಆಸ್ಟ್ರೇಲಿಯಾ ಎದುರು ದ್ವಿಶತಕ ಸಿಡಿಸಿದ್ದರು. ಎಡಗೈ ಬ್ಯಾಟ್ಸ್‌ಮನ್‌ ಮೊದಲ ಬಾರಿಗೆ ದ್ವಿಶತಕ ಬಾರಿಸಿದ ಶ್ರೇಯಕ್ಕೆ ಗಂಭೀರ್‌ ಪಾತ್ರರಾದರು. 

ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಜೈಸ್ವಾಲ್‌ 171 ರನ್ ಗಳಿಸಿದ್ದರು. ಪ್ರಸಕ್ತ ಇಂಗ್ಲೆಂಡ್‌ ಎದುರಿನ ಸರಣಿಯಲ್ಲಿ ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಜೈಸ್ವಾಲ್‌ 80 ರನ್‌ ಬಾರಿಸಿದ್ದರು. ಈ ಪಂದ್ಯವನ್ನು ಭಾರತ 28 ರನ್‌ಗಳಿಂದ ಸೋತಿತು.

ಜೈಸ್ವಾಲ್‌ ಅವರಿಗಿಂತ ಮೊದಲು ಸಚಿನ್ ತೆಂಡೂಲ್ಕರ್ ಮತ್ತು ವಿನೋದ್‌ ಕಾಂಬ್ಳಿ ಮಾತ್ರ 23 ವರ್ಷ ತುಂಬುವ ಮೊದಲೇ ಟೆಸ್ಟ್‌ ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ರನ್‌ ಮಾಡಿದ್ದರು. 

ಜೈಸ್ವಾಲ್‌ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಇಂಗ್ಲೆಂಡ್‌ ಮಾಜಿ ನಾಯಕ ಕೇವಿನ್‌ ಪಿಟರ್‌ಸನ್‌ ಅವರು ವಿಶ್ವ ಕ್ರೀಡೆಯ ಶ್ರೇಷ್ಠರಲ್ಲಿ  ಜೈಸ್ವಾಲ್ ಅವರೂ ಒಬ್ಬರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದೇ ಪಂದ್ಯದಲ್ಲಿ ಜೈಸ್ವಾಲ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿ ಆ್ಯಂಡರ್ಸನ್ ಬೌಲಿಂಗ್‌ನಲ್ಲಿ ಔಟಾದರು.

ಉತ್ತರಪ್ರದೇಶದ ಭದೋಹಿ ಮೂಲದ ಜೈಸ್ವಾಲ್ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಜೈಸ್ವಾಲ್‌ ತಂದೆಗೆ ಆರು ಮಕ್ಕಳು. ಇವರಲ್ಲಿ ಜೈಸ್ವಾಲ್‌ ನಾಲ್ಕನೆಯವರು. ಜೈಸ್ವಾಲ್‌ 11 ವರ್ಷ ವಯಸ್ಸಿನಲ್ಲಿ ಕ್ರಿಕೆಟ್‌ ತರಬೇತಿ ಪಡೆಯಲು ಭದೋಹಿಯಿಂದ ಮುಂಬೈಗೆ ತೆರಳಿದ್ದರು.

ಕ್ರಿಕೆಟ್‌ ಜಗತ್ತಿಗೆ ಪದಾರ್ಪಣೆ ಮಾಡುವ ಮೊದಲು ಜೈಸ್ವಾಲ್‌, ರಸ್ತೆಬದಿಯಲ್ಲಿ ಪಾನಿಪೂರಿ ಮಾರಿದ್ದಾರೆ. ಆಜಾದ್ ಮೈದಾನದ ಪಕ್ಕದಲ್ಲಿರುವ ರಸ್ತೆಬದಿಯ ಟೆಂಟ್‌ನಲ್ಲಿ ಬದುಕು ನಡೆಸಿದ್ದಾರೆ ಎಂದು ಸುದ್ದಿಯಾಗಿತ್ತು.

ಇದಕ್ಕೆ ಪೂರಕವಾಗಿ ಜೈಸ್ವಾಲ್ ಅವರ ಆರಂಭಿಕ ಕೋಚ್ ಜವಾಲ್ ಸಿಂಗ್ ಅವರು ಮಾಹಿತಿ ನೀಡಿ, ‘ಜೈಸ್ವಾಲ್ ಪಾನಿಪೂರಿ ಮಾರಿದ್ದಾರೆ. ಆದರೆ ಇದನ್ನು ಅನಗತ್ಯವಾಗಿ ಎಳೆಯಲಾಗಿದೆ‘ ಎಂದು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.

2020ರಲ್ಲಿ ಜೈಸ್ವಾಲ್‌ ಅಂಡರ್‌–19 ವಿಶ್ವಕಪ್‌ನಲ್ಲಿ ಸ್ಥಾನ ಪಡೆದರು. ಇಲ್ಲಿ ಅಧಿಕ ರನ್‌ ಕಲೆಹಾಕುವ ಮೂಲಕ ಗಮನ ಸೆಳೆದರು. ಅದೇ ವರ್ಷ ಐಪಿಎಲ್‌ನಲ್ಲಿ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿತು. ಇಲ್ಲಿಯವರೆಗೂ ಅವರು ಐಪಿಎಲ್‌ನಲ್ಲಿ 37 ಪಂದ್ಯಗಳನ್ನು ಆಡಿದ್ದು 1172 ರನ್ ಕಲೆಹಾಕಿದ್ದಾರೆ. 

ಜೈಸ್ವಾಲ್ ಭಾರತದ ಪರ 17 ಟಿ–20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿದಂತೆ 502 ರನ್ ಕಲೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT