ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ: ಯಶಸ್ವಿ ಜೈಸ್ವಾಲ್ ತಂದೆ ಕಣ್ಣೀರು

Published 24 ಜೂನ್ 2023, 23:30 IST
Last Updated 24 ಜೂನ್ 2023, 23:30 IST
ಅಕ್ಷರ ಗಾತ್ರ

ಮುಂಬೈ: ‘ಟೆಸ್ಟ್ ತಂಡಕ್ಕೆ ನಾನು ಆಯ್ಕೆಯಾದ ಸುದ್ದಿ ತಿಳಿದು ಅಪ್ಪ ಕಣ್ಣೀರುಗರೆದರು..‘

ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಭಾವುಕ ನುಡಿಗಳಿವು. ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡುವ ಭಾರತ ತಂಡಕ್ಕೆ ಜೈಸ್ವಾಲ್ ಆಯ್ಕೆಯಾಗಿದ್ದಾರೆ. ಮೂಲತಃ ಉತ್ತರ ಪ್ರದೇಶದ ಬಡೊಹಿ ಗ್ರಾಮದ ಯಶಸ್ವಿ ಕ್ರಿಕೆಟಿಗನಾಗಿ ಬೆಳೆದಿದ್ದು ಮುಂಬೈನಲ್ಲಿ. ಆಜಾದ್ ಮೈದಾನದ ಪಕ್ಕದಲ್ಲಿದ್ದ ಕಾರ್ಮಿಕರ ಟೆಂಟ್‌ನಲ್ಲಿ ರಾತ್ರಿ ಕಳೆದು ಬೆಳಿಗ್ಗೆದ್ದು ಕ್ರಿಕೆಟ್ ಅಭ್ಯಾಸಕ್ಕೆ ತೆರಳುತ್ತಿದ್ದರು ಜೈಸ್ವಾಲ್.  ಜೀವನೋಪಾಯಕ್ಕಾಗಿ ಅಪ್ಪನೊಂದಿಗೆ ಪಾನೀಪುರಿ ಅಂಗಡಿಯಲ್ಲಿಯೂ ಕೆಲಸ ಮಾಡುತ್ತಿದ್ದರು.

ಕೋಚ್ ಜ್ವಾಲಾ ಸಿಂಗ್ ಅವರ ತರಬೇತಿಯಲ್ಲಿ ಅರಳಿದ ಯಶಸ್ವಿ 21 ವರ್ಷಕ್ಕೇ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಮೂರು ವರ್ಷಗಳಿಂದ ದೇಶಿ ಕ್ರಿಕೆಟ್‌ನ ಎಲ್ಲ ಮಾದರಿಗಳು ಮತ್ತು ಐಪಿಎಲ್‌ನಲ್ಲಿ ಅವರ ಬ್ಯಾಟಿಂಗ್ ಗಮನ ಸೆಳೆದಿದೆ. ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ಡಬ್ಲ್ಯುಟಿಸಿ ಫೈನಲ್  ಆಡಿದ್ದ ಭಾರತ ತಂಡದಲ್ಲಿಯೂ ಕಾಯ್ದಿಟ್ಟ ಆಟಗಾರನಾಗಿ ಆಯ್ಕೆಯಾಗಿದ್ದರು.

‘ಬಹಳ ಸಂತೋಷವಾಗಿದೆ. ವಿಂಡೀಸ್ ಸರಣಿಯ ಆಯ್ಕೆ ಪಟ್ಟಿ ಹೊರಬೀಳುವವರೆಗೂ ಆತಂಕವಿತ್ತು. ಅವಕಾಶ ಸಿಕ್ಕಿದೆ. ನನ್ನ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿನಿಯೋಗಿಸುತ್ತೇನೆ‘ ಎಂದು ಯಶಸ್ವಿ ಹೇಳಿದರು.

ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.

‘ರಾಯಲ್ಸ್ ತಂಡದ ಕೋಚ್ ಕುಮಾರ ಸಂಗಕ್ಕಾರ, ಸಹ ಆಟಗಾರರಾದ ಟ್ರೆಂಟ್ ಬೌಲ್ಟ್ ಮತ್ತು ಜೋ ರೂಟ್ ಅವರ ಮಾರ್ಗದರ್ಶನವಿದೆ. ಅಲ್ಲದೇ ಇತ್ತೀಚೆಗೆ ಇಂಗ್ಲೆಂಡ್‌ಗೆ ತೆರಳಿದ್ದಾಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ  ಮತ್ತು ಅಜಿಂಕ್ಯ ರಹಾನೆ ಅವರೊಂದಿಗೆ ಬಹಳಷ್ಟು ಮಾತುಕತೆ ನಡೆಸಿದ್ದೆ.  ಅದರಿಂದಾಗಿ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿದೆ‘ ಎಂದಿದ್ದಾರೆ.

‘ಸಿಕ್ಕ ಅವಕಾಶದಲ್ಲಿ ಏಕಾಗ್ರತೆಯಿಂದ ಆಡುವುತ್ತ ನಾನು ಗಮನ ಹರಿಸುತ್ತೇನೆ. ಶಿಸ್ತು ಮತ್ತು ಸರಳವಾದ ಯೋಜನೆಗಳೊಂದಿಗೆ ಆಡುತ್ತೇನೆ‘ ಎಂದರು.

ಯಶಸ್ವಿ ಸಾಧನೆ ಕುರಿತು ಬಾಲ್ಯದ ಕೋಚ್ ಜ್ವಾಲಾ ಸಿಂಗ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ ಆಜಾದ್ ಮೈದಾನದಲ್ಲಿ  2013ರಲ್ಲಿ ಯಶಸ್ವಿಯನ್ನು ನನ್ನ ಬಳಿ ತರಬೇತಿಗೆ ಸೇರಿಸಿಕೊಂಡೆ. ಪ್ರತಿಭಾವಂತ ಆಟಗಾರ. ಭವಿಷ್ಯದಲ್ಲಿ ಭಾರತ ತಂಡಕ್ಕೆ ಆಡಬೇಕು ಎಂಬ ಕನಸು ಕಂಡಿದ್ದೆ. ಹತ್ತು ವರ್ಷಗಳಿಂದ ಪಟ್ಟ ಪರಿಶ್ರಮಕ್ಕೆ ಇವತ್ತು ಫಲ ಸಿಗುತ್ತಿದೆ. ಕನಸು ನನಸಾಗುತ್ತಿದೆ‘ ಎಂದು ಜ್ವಾಲಾ ಹೇಳಿದ್ದಾರೆ.

ಇದೇ ವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ನಡೆಯಲಿರುವ ತಂಡದ ಶಿಬಿರದಲ್ಲಿ ಯಶಸ್ವಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT