ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 2nd Test: ಯಶಸ್ವಿ ಜೈಸ್ವಾಲ್ ಶತಕದ ಕಮಾಲ್, ಬೃಹತ್ ಮೊತ್ತದತ್ತ ಭಾರತ

Published 2 ಫೆಬ್ರುವರಿ 2024, 14:45 IST
Last Updated 2 ಫೆಬ್ರುವರಿ 2024, 14:45 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ‘ಮುಂಬೈ ಹುಡುಗ’ ಯಶಸ್ವಿ ಜೈಸ್ವಾಲ್ ಶುಕ್ರವಾರ ಇಂಗ್ಲೆಂಡ್ ತಂಡದ ಬೌಲರ್‌ಗಳ ಬೆವರಿಳಿಸಿದರು.

22 ವರ್ಷದ ಯಶಸ್ವಿ (ಬ್ಯಾಟಿಂಗ್ 179; 257ಎ, 4X17, 6X5) ಚೆಂದದ ಬ್ಯಾಟಿಂಗ್ ಬಲದಿಂದ ಭಾರತವು ಇಲ್ಲಿ ಆರಂಭವಾದ ಟೆಸ್ಟ್‌ನ ಮೊದಲ ದಿನದಾಟ 93 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 336 ರನ್‌ಗಳ ಬೃಹತ್ ಮೊತ್ತ ಗಳಿಸಿತು.

ಆರನೇ ಟೆಸ್ಟ್ ಆಡುತ್ತಿರುವ ಯಶಸ್ವಿಗೆ ಇದು ಎರಡನೇ ಶತಕ. ಹೋದ ವರ್ಷ ವೆಸ್ಟ್ ಇಂಡೀಸ್ ಎದುರು (171 ರನ್) ಚೊಚ್ಚಲ ಶತಕ ಹೊಡೆದಿದ್ದರು. ಇದೀಗ ಇಂಗ್ಲೆಂಡ್ ಎದುರು ವೈಯಕ್ತಿಕ ಶ್ರೇಷ್ಠ ಸ್ಕೋರ್ ದಾಖಲಿಸಿದರು. ಕ್ರೀಸ್‌ನಲ್ಲಿ ಉಳಿದಿರುವ ಅವರಿಗೆ ಶನಿವಾರದ ಆಟದಲ್ಲಿ ದ್ವಿಶತಕದ ಗಡಿ ದಾಟುವ ಅವಕಾಶವೂ ಇದೆ.

‘ಒಂದೊಂದೇ ಸೆಷನ್ (ಅವಧಿ) ಗಳಲ್ಲಿ ಆಡುವ ಯೋಜನೆಯೊಂದಿಗೆ ಕಣಕ್ಕಿಳಿದಿದ್ದೆ. ಅವರು (ಇಂಗ್ಲೆಂಡ್) ಉತ್ತಮವಾಗಿ ಬೌಲಿಂಗ್ ಮಾಡಿದರು. ಆರಂಭದ ಅವಧಿಯಲ್ಲಿ ಪರಿಣಾಮಕಾರಿ ಬೌಲಿಂಗ್ ಇತ್ತು. ಆ ಸಮಯ ಸರಿಯುವವರೆಗೆ ತಾಳ್ಮೆಯಿಂದ ಆಡಿದೆ. ನಂತರ ಲಭಿಸಿದ ಸಡಿಲ ಎಸೆತಗಳನ್ನು ಬೌಂಡರಿಗೆರೆ ದಾಟಿಸಿದೆ. ಆತ್ಮವಿಶ್ವಾಸ ಬೆಳೆದಂತೆ ಇನಿಂಗ್ಸ್‌ ಕೂಡ ಬೆಳೆಯಿತು’ ಎಂದು ದಿನದಾಟದ ನಂತರ ಸುದ್ದಿಗಾರರಿಗೆ ಜೈಸ್ವಾಲ್ ಹೇಳಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ತಂಡವು 49 ರನ್‌ಗಳಾದಾಗಲೇ ಎರಡು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಯಶಸ್ವಿ ಗಟ್ಟಿಯಾಗಿ ನಿಂತರು. ಅವರು ಶ್ರೇಯಸ್ ಅಯ್ಯರ್ ಅವರೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿ ಇನಿಂಗ್ಸ್‌ಗೆ ಚೇತರಿಕೆ ನೀಡಿದರು.

ಊಟದ ವಿರಾಮದ ನಂತರದ ಅವಧಿಯಲ್ಲಿ ಟಾಮ್ ಹಾರ್ಟ್ಲಿ ಬೌಲಿಂಗ್‌ನಲ್ಲಿ ಶ್ರೇಯಸ್ ಔಟಾದರು. ಇದರೊಂದಿಗೆ ಜೊತೆಯಾಟ ಮುರಿದುಬಿತ್ತು. ಯಶಸ್ವಿ ಮಾತ್ರ ತಮ್ಮ ಏಕಾಗ್ರತೆಯನ್ನು ಕಳೆದುಕೊಳ್ಳಲಿಲ್ಲ. ಚೆಂದದ ಡ್ರೈವ್, ಲಾಫ್ಟ್‌ಗಳನ್ನು ಆಡಿದರು. ಸ್ಪಿನ್ನರ್‌ಗಳಿಗೆ ಸ್ವೀಪ್‌ಗಳ ಪ್ರತ್ಯುತ್ತರ ಕೊಟ್ಟ ಎಡಗೈ ಬ್ಯಾಟರ್‌ ಸ್ಕೋರ್‌ ಬೋರ್ಡ್‌ನಲ್ಲಿ ರನ್‌ಗಳನ್ನು ನಿರಂತರವಾಗಿ  ಜೋಡಿಸಿದರು.

ಪದಾರ್ಪಣೆ ಪಂದ್ಯವಾಡಿದ ರಜತ್ ಅವರೊಂದಿಗಿನ ಜೊತೆಯಾಟದಲ್ಲಿ 70 ರನ್ ಸೇರಿಸಿದರು. ರಜತ್ 72 ಎಸೆತಗಳಲ್ಲಿ 32 ರನ್‌ ಗಳಿಸಿದರು.  ಚಹಾ ವಿರಾಮದ ನಂತರದ ಅವಧಿಯಲ್ಲಿ ಭಾರತ ತಂಡವು 111 ರನ್‌ಗಳನ್ನು ಗಳಿಸಿತು. ಇದೇ ಅವಧಿಯಲ್ಲಿ ಮೂರು ವಿಕೆಟ್‌ಗಳೂ (ರಜತ್ ಪಾಟೀದಾರ್, ಅಕ್ಷರ್ ಪಟೇಲ್ ಮತ್ತು ಕೆ.ಎಸ್. ಭರತ್) ಪತನವಾದವು. ಆರ್. ಅಶ್ವಿನ್ (ಬ್ಯಾಟಿಂಗ್ 5) ಕ್ರೀಸ್‌ನಲ್ಲಿದ್ದಾರೆ.

ಇಂಗ್ಲೆಂಡ್ ತಂಡವು ನಾಲ್ವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸಿತು. ಅದರಲ್ಲಿ ಶೋಯಬ್ ಬಷೀರ್ ಮತ್ತು ರೆಹಾನ್ ಅಹಮದ್ ತಲಾ  ಎರಡು ವಿಕೆಟ್ ಗಳಿಸಿದರು.

ರೋಹಿತ್ ವಿಕೆಟ್‌ ಅವಿಸ್ಮರಣೀಯ: ಬಷೀರ್

‘ರೋಹಿತ್ ಶರ್ಮಾ ಅವರ ವಿಕೆಟ್ ಗಳಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣ‘ ಎಂದು ಇಂಗ್ಲೆಂಡ್ ತಂಡದ ಬೌಲರ್ ಶೋಯಬ್ ಬಷೀರ್ ಸಂತಸ ವ್ಯಕ್ತಪಡಿಸಿದರು.

ಜ್ಯಾಕ್‌ ಲೀಚ್ ಅವರು ಗಾಯಗೊಂಡ ಕಾರಣ ಬಷೀರ್ ಅವರಿಗೆ ಟೆಸ್ಟ್ ಪದಾರ್ಪಣೆ ಮಾಡುವ ಅವಕಾಶ ಲಭಿಸಿತು. ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ ಅವರು ತಮ್ಮ ವೃತ್ತಿಜೀವನದ ಚೊಚ್ಚಲ ವಿಕೆಟ್ ಗಳಿಸಿದರು. ಅವರು ಭಾರತ ಪ್ರವಾಸಕ್ಕೆ ಹೊರಡುವ ಮುನ್ನ ವೀಸಾ ಪಡೆಯಲು ಕೆಲವು ತಾಂತ್ರಿಕ ಅಡಚಣೆಗಳನ್ನು ಎದುರಿಸಿದ್ದರು.

ಹೋದವಾರ ಹೈದರಾಬಾದ್ ನಲ್ಲಿ ನಡೆದಿದ್ದ ಪಂದ್ಯದ ಎರಡು ದಿನಗಳು ಮುಗಿದ ಮೇಲೆ ಅವರು ಭಾರತಕ್ಕೆ ಬಂದಿಳಿದಿರು.  6.4 ಅಡಿ ಎತ್ತರದ ಆಫ್‌ಸ್ಪಿನ್ನರ್ ಶೋಯಬ್ ಅವರು ಪಾಕಿಸ್ತಾನ ಮೂಲದವರು.

‘ಇವತ್ತು ನನಗೆ ವಿಶೇಷವಾದ ದಿನ. ಕಳೆದ ಎರಡು ಮೂರು ವರ್ಷಗಳಲ್ಲಿ ನಾನು ಪಟ್ಟ ಪರಿಶ್ರಮಕ್ಕೆ ಈಗ ಫಲ ಸಿಗುತ್ತಿದೆ. ರೋಹಿತ್ ಶ್ರೇಷ್ಠ ಬ್ಯಾಟರ್. ಅವರ ವಿಕೆಟ್ ಪಡೆಯುವುದೆಂದರೆ ಅದೊಂದು ಸಾಧನೆ’ ಎಂದು ಬಣ್ಣಿಸಿದರು.

ಭಾರತ 6ಕ್ಕೆ336 (93 ಓವರ್‌ಗಳಲ್ಲಿ)

ಯಶಸ್ವಿ ಬ್ಯಾಟಿಂಗ್ 179 (257ಎ, 4X17, 6X5)

ರೋಹಿತ್ ಸಿ ಪೋಪ್ ಬಿ ಬಷೀರ್ 14 (41ಎ)

ಶುಭಮನ್ ಸಿ ಫೋಕ್ಸ್ ಬಿ ಆ್ಯಂಡರ್ಸನ್ 34 (46ಎ, 4X5)

ಶ್ರೇಯಸ್ ಸಿ ಫೋಕ್ಸ್ ಬಿ ಹಾರ್ಟ್ಲಿ 27 (59ಎ, 4X3)

ರಜತ್ ಬಿ ರೆಹಾನ್ 32 (72ಎ, 4X3)

ಅಕ್ಷರ್ ಸಿ ರೆಹಾನ್ ಬಿ ಬಷೀರ್ 27 (51ಎ, 4X4)

ಭರತ್ ಸಿ ಬಷೀರ್ ಬಿ ರೆಹಾನ್ 17 (23ಎ, 4X2, 6X1)

ಅಶ್ವಿನ್ ಬ್ಯಾಟಿಂಗ್ 5 (10ಎ, 4X1)

ಇತರೆ: 1 (ನೋಬಾಲ್ 1)

ವಿಕೆಟ್ ಪತನ: 1–40 (ರೋಹಿತ್ ಶರ್ಮಾ; 17.3), 2–89 (ಶುಭಮನ್ ಗಿಲ್; 28.5), 3–179 (ಶ್ರೇಯಸ್ ಅಯ್ಯರ್; 50.4), 4–249 (ರಜತ್ ಪಾಟೀದಾರ್; 71.1), 5–301 (ಅಕ್ಷರ್ ಪಟೇಲ್; 85.3), 6–330 (ಶ್ರೀಕರ್ ಭರತ್; 90.6)

ಬೌಲಿಂಗ್‌: ಜೇಮ್ಸ್ ಆ್ಯಂಡರ್ಸನ್ 17–3–30–1, ಜೋ ರೂಟ್ 14–0–71–0, ಟಾಮ್ ಹಾರ್ಟ್ಲಿ 18–2–74–1, ಶೋಯಬ್ ಬಷೀರ್ 28–0–100–2, ರೆಹಾನ್ ಅಹಮದ್ 16–2–61–2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT