ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸ್ತುಷ್, ಸ್ಕ್ವಾಷ್ ಮತ್ತು ಕ್ರಿಕೆಟ್!

ಅಮೆರಿಕ ತಂಡದ ಕನ್ನಡಿಗನ ಯಶೋಗಾಥೆ ಹೇಳಿದ ಅಪ್ಪ
Published 9 ಜೂನ್ 2024, 0:26 IST
Last Updated 9 ಜೂನ್ 2024, 0:26 IST
ಅಕ್ಷರ ಗಾತ್ರ

ಬೆಂಗಳೂರು: ಮೂಡಿಗೆರೆ ಮೂಲದ ನಾಸ್ತುಷ್ ಕೆಂಜಿಗೆ ಅವರು ಅಮೆರಿಕದ ಕ್ರಿಕೆಟ್ ತಂಡದಲ್ಲಿ ಆಡಲು ಕಾರಣವಾಗಿದ್ದು ಸ್ಕ್ವಾಷ್‌ ಆಟವಂತೆ!

ಹೌದು; ಅಮೆರಿಕದಲ್ಲಿ ಜನಿಸಿ ಪೌರತ್ವ ಪಡೆದಿದ್ದ ನಾಸ್ತುಷ್ ಓದಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ದಯಾನಂದ ವಿದ್ಯಾಸಾಗರ ಕಾಲೇಜಿನಲ್ಲಿ ಎಂ.ಟಿಕ್ (ಬಯೋ ಮೆಡಿಕಲ್) ಮಾಡಿದರು. ಈ ಅವಧಿಯಲ್ಲಿ ಅವರು ಕರ್ನಾಟಕದಲ್ಲಿ ಕ್ರಿಕೆಟಿಗನಾಗಿ ಬೆಳೆದಿದ್ದರು. ಆದರೆ ರಾಜ್ಯ ತಂಡದಲ್ಲಿ ಸ್ಥಾನ ಸಿಗದ ಕಾರಣಕ್ಕೆ ನಿರಾಶೆಗೊಂಡು ಕ್ರಿಕೆಟ್ ಆಟವನ್ನು ಬಿಟ್ಟಿದ್ದರು. ಆಗ ಅವರು ಕಲಿತಿದ್ದ ಸ್ಕ್ವಾಷ್ ಅವರ ಜೀವನಕ್ಕೆ ತಿರುವು ನೀಡಿದ್ದು ರೋಚಕ ಕಥೆ.

ಈ ವಿಷಯದ ಕುರಿತು ನಾಸ್ತುಷ್ ಅವರ ತಂದೆ, ಪರಿಸರ, ವಿಜ್ಞಾನ ಲೇಖನ ಪ್ರದೀಪ್ ಕೆಂಜಿಗೆ ‘ಪ್ರಜಾವಾಣಿ’ಯೊಂದಿಗೆ ಅಮೆರಿಕದಿಂದ ದೂರವಾಣಿಯಲ್ಲಿ ನಡೆಸಿದ ಮಾತುಕತೆಯಲ್ಲಿ ಹೇಳಿದರು. 

ಕ್ರಿಕೆಟ್ ಬಿಟ್ಟ ಮೇಲೆ ಸ್ಕ್ವಾಷ್ ಆಟದ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದರು. ಕೇವಲ ಮೂರೇ ತಿಂಗಳಲ್ಲಿ ರಾಜ್ಯ ಚಾಂಪಿಯನ್ ಆಗಿದ್ದರು. ಎಡಗೈ ಆಟಗಾರನಾಗಿದ್ದರು. ಅಂತರರಾಷ್ಟ್ರೀಯ ಆಟಗಾರರಾದ ಸೌರವ್ ಘೋಷಾಲ್ ಮತ್ತು ದೀಪಿಕಾ ಪಳ್ಳೀಕಲ್ ಅವರಿಬ್ಬರೂ ಬೆಂಗಳೂರಿಗೆ ಬಂದಾಗ ಸ್ಪಾರಿಂಗ್ ಪಾರ್ಟನರ್ ಆಗಿ ನಾಸ್ತುಷ್ ಅವರನ್ನೇ ಕರೆಸಿಕೊಳ್ಳುತ್ತಿದ್ದರು. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ನಾಸ್ತುಷ್ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು. 

‘ಅಮೆರಿಕದಲ್ಲಿ ಒಳ್ಳೆಯ ಉದ್ಯೋಗ ಲಭಿಸಿತ್ತು. ಭಾರತದಿಂದ ಬರುವಾಗ ಸ್ಕ್ವಾಷ್ ಕಿಟ್ ತೆಗೆದುಕೊಂಡೇ ಹೋಗಿದ್ದರು. ಅಲ್ಲಿ ಸ್ಕ್ವಾಷ್ ಜನಪ್ರಿಯ ಆಟ.  ನಾಸ್ತುಷ್ ಆಟದ ಜೊತೆಗೆ ಸ್ಕ್ವಾಷ್ ಕೋಚಿಂಗ್ ಕೂಡ ಮಾಡಿದರು. ಇದೇ ಸಂದರ್ಭದಲ್ಲಿ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರೊಬ್ಬರ ಪರಿಚಯ ನಾಸ್ತುಷ್‌ಗಾಯಿತು. ಅವರು ನಾಸ್ತುಷ್ ಅವರನ್ನು ಭಾನುವಾರದ ಪಂದ್ಯವೊಂದಕ್ಕೆ ಆಹ್ವಾನಿಸಿದ್ದರು. ಆ ಪಂದ್ಯದಲ್ಲಿ ನಾಸ್ತುಷ್ ಬೌಲಿಂಗ್ ನೋಡಿ ಬೆರಗಾಗಿದ್ದರು. ತಂಡಕ್ಕೆ ಆಯ್ಕೆ ಟ್ರಯಲ್ಸ್ ನಡೆಯುತ್ತಿದೆ. ಹಾಜರಾಗು ಎಂದರು. ಆದರೆ ಅಲ್ಲೊಂದು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಸ್ಥಳೀಯ ತಂಡದಲ್ಲಿ ಆಡಬೇಕೆಂದರೆ ಮೂರು ವರ್ಷ ಸ್ಥಳೀಯ ಕ್ಲಬ್‌ನಲ್ಲಿ ಆಡಿರಬೇಕು. ಇಲ್ಲವೇ ಒಟ್ಟು  800 ಗಂಟೆಗಳಷ್ಟು  ಅವಧಿಯ ಕ್ರಿಕೆಟ್ ಚಟುವಟಿಕೆ ದಾಖಲಿಸಬೇಕು. ಆದರೆ ವಾರದ ಐದು ದಿನ ಉದ್ಯೋಗದಲ್ಲಿದ್ದು ವಾರಾಂತ್ಯದ ಎರಡು ದಿನ ಮಾತ್ರ ಅವಕಾಶ ಸಿಗುತ್ತಿತ್ತು. ದಿನವೊಂದಕ್ಕೆ ಎಂಟು ಗಂಟೆ ಆಡಿದರೆ ವಾರಕ್ಕೆ 16 ತಾಸು ಆಡಬಹುದಿತ್ತು. ಇದು ದೀರ್ಘ ಕಾಲವಾಗುತ್ತಿತ್ತು. ಆದರೆ ನಾಸ್ತುಷ್ ನೌಕರಿ ಬಿಟ್ಟು ಪ್ರತಿದಿನವೂ ಎಂಟು ಗಂಟೆ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಆರು ತಿಂಗಳಿಗೆ 800 ಗಂಟೆಗಳ ನಿಯಮ ಪೂರೈಸಿದರು’ ಎಂದು ಪ್ರದೀಪ್ ವಿವರಿಸಿದರು. 

ಕೈತುಂಬ ಸಂಬಳ ಬರುವ ಉದ್ಯೋಗವನ್ನು ನಾಸ್ತುಷ್ ಬಿಟ್ಟಿದ್ದು ತಂದೆ, ತಾಯಿಗೆ ಹೇಳಿರಲಿಲ್ಲ. ಆದರೆ ನ್ಯೂಯಾರ್ಕ್‌ನಲ್ಲಿ  ಉಪಜೀವನಕ್ಕಾಗಿ ಸಂಜೆ ಹೊತ್ತಿನಲ್ಲಿ ಸ್ಕ್ವಾಷ್‌ ಕ್ಲಬ್‌ಗಳಲ್ಲಿ ತರಬೇತುದಾರರಾಗಿ ಕೆಲಸ ಮಾಡಿದ್ದರು. ಅದರಿಂದ ಬಂದ ಆದಾಯದಲ್ಲಿ ಜೀವನ ಮಾಡಿದ್ದರು.  

‘ನಾಸ್ತುಷ್ ಬಹಳ ಪ್ರತಿಭಾವಂತ ಮತ್ತು ಕಠಿಣ ಪರಿಶ್ರಮಿ. ವಿಶ್ವಕಪ್ ಆಡುತ್ತಿರುವುದು ನಮಗೆಲ್ಲ ಹೆಮ್ಮೆ. ಪಾಕಿಸ್ತಾನ ಎದುರು ಮೊದಲ ಓವರ್‌ ಸ್ಪಿನ್ನರ್ ನಾಸ್ತುಷ್‌ಗೆ ನೀಡಿದಾಗ ನಮಗೆಲ್ಲ ಆತಂಕವಾಗಿತ್ತು. ಆದರೆ ದಿಟ್ಟತನದಿಂದ ಬೌಲಿಂಗ್ ಮಾಡಿ ಅಮೆರಿಕ ತಂಡಕ್ಕೆ ಬಹಳ  ತುಂಬಿದ್ದು ನೋಡಿ ಸಂತಸಪಟ್ಟೆವು. ಸೂಪರ್ ಓವರ್‌ನಲ್ಲಿ ಸೌರಭ್ ನೇತ್ರವಾಳ್ಕರ್ ಆಟ ಅದ್ಭುತವಾಗಿತ್ತು. ಮುಂದಿನ ವಾರ ನಡೆಯುವ ಭಾರತದ ಎದುರಿನ ಪಂದ್ಯದಲ್ಲಿ  ನಾಸ್ತುಷ್, ರೋಹಿತ್ ಹಾಗೂ ಕೊಹ್ಲಿ ಎದುರು ಬೌಲಿಂಗ್ ಮಾಡುವುದನ್ನು ನೋಡಲು ಕಾತುರರಾಗಿದ್ದೇವೆ’ ಎಂದು ಪ್ರದೀಪ್ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT