ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ಕಣ್ಣಲ್ಲಿ ಮಗಳು 'ಶೆಫಾಲಿ ವರ್ಮಾ'ರ ಯಶೋಕಥನ

Last Updated 6 ಮಾರ್ಚ್ 2020, 8:32 IST
ಅಕ್ಷರ ಗಾತ್ರ

29, 39, 46, 47– ಇವು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯ ಗುಂಪು ಹಂತದಲ್ಲಿ ಶೆಫಾಲಿ ವರ್ಮಾ ಗಳಿಸಿದ ಸ್ಕೋರ್‌ಗಳು. ಒಂದು ಇನಿಂಗ್ಸ್‌ಗಿಂತ ಇನ್ನೊಂದರಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತಿರುವುದರ ಸಂಕೇತಗಳಂತೆ ಇವು ಕಾಣುತ್ತವೆ.

ಹರಿಯಾಣದ ರೋಹ್‌ತಕ್‌ನಲ್ಲಿ ಒಡವೆ ರಿಪೇರಿ ಮಾಡುವ ಸಂಜೀವ್, ಮಾರ್ಚ್ 3ರ ಮಂಗಳವಾರ ಸಿಡ್ನಿ ತಲುಪಲೆಂದು ವಿಮಾನ ಹತ್ತಿದರು. ಆಗ ಅವರ ತಲೆಯೊಳಗೆ ಮಗಳ ಬಾಲ್ಯದ ದಿನಗಳೆಲ್ಲ ಸರಿದುಹೋದವು. ಹರಿಯಾಣ ರಾಜ್ಯದಲ್ಲಿ ಹೆಣ್ಣು ಭ್ರೂಣಹತ್ಯೆಯ ಪ್ರಮಾಣ ಹೆಚ್ಚಾಗಿತ್ತು. ಹೆಣ್ಣುಮಕ್ಕಳನ್ನು ಅಡುಗೆ, ಮನೆಕೆಲಸಕ್ಕೇ ಸೀಮಿತಗೊಳಿಸಿ ಬೆಳೆಸುವುದೇ ಲೇಸು ಎಂದು ಸಲಹೆ ಕೊಡುವ ಬಾಯಿಗಳೇ ಅಲ್ಲಿ ಹೆಚ್ಚು. ಸಂಜೀವ್ ಅದಕ್ಕೆ ಅಪವಾದ. ಅವರು ಮಗನ ಜತೆ ಮಗಳನ್ನೂ ಕ್ರಿಕೆಟ್‌ ಆಡಲು, ನೋಡಲು ಕರೆದುಕೊಂಡು ಹೋಗುತ್ತಿದ್ದರು.

ಸಚಿನ್‌ ತೆಂಡೂಲ್ಕರ್ ತಮ್ಮ ವೃತ್ತಿಬದುಕಿನ ಕೊನೆಯ ರಣಜಿ ಟೂರ್ನಿಯನ್ನು 2013ರಲ್ಲಿ ಆಡಿದ್ದರು. ಆಗ ಅವರು ಒಂದು ಪಂದ್ಯವನ್ನು ರೋಹ್‌ತಕ್‌ನಲ್ಲೂ ಆಡಲೆಂದು ಬಂದಿದ್ದರು. ಆಗ ಹತ್ತು ವರ್ಷದ ಬಾಲಕಿ ಶೆಫಾಲಿ ನೆಚ್ಚಿನ ಆಟಗಾರನ ಬ್ಯಾಟಿಂಗ್‌ ಅನ್ನು ಪ್ರತ್ಯಕ್ಷವಾಗಿ ನೋಡಿದ್ದು. ತಾನೂ ಗಂಭೀರವಾಗಿ ಕ್ರಿಕೆಟ್‌ ಅಭ್ಯಾಸ ಮಾಡಿ, ಭಾರತದ ಪರವಾಗಿ ಆಡಲೇಬೇಕು ಎಂದು ಆ ದಿನವೇ ಸಂಕಲ್ಪ ಮಾಡಿದರು.

ಶೆಫಾಲಿ ಅಪ್ಪನ ಮುದ್ದಿನ ಮಗಳು. ‘ಕೂದಲನ್ನು ಶಾರ್ಟ್ ಕಟ್‌ ಮಾಡಿಸಿಕೊಳ್ಳುವೆ’ ಎಂದು ಆರನೇ ವಯಸ್ಸಿನಲ್ಲಿ ಅಪ್ಪನ ಎದುರು ಹೇಳಿದಾಗಲೂ ಅವರು ತುಸುವೂ ಪ್ರತಿರೋಧ ತೋರಿರಲಿಲ್ಲ. ಸಚಿನ್ ತೆಂಡೂಲ್ಕರ್ ಆರಾಧಕರಾದ ಸಂಜೀವ್, ಅವಕಾಶ ಸಿಕ್ಕಾಗಲೆಲ್ಲ ಮಗಳಿಗೆ ನೆಚ್ಚಿನ ಆಟಗಾರನ ಬ್ಯಾಟಿಂಗ್‌ ವೈಖರಿಯನ್ನು ಬಣ್ಣಿಸುತ್ತಿದ್ದರು.

‘ಮಗಳನ್ನು ಯಾಕೆ ಈ ಕ್ರಿಕೆಟ್‌ ಹುಚ್ಚಿಗೆ ಹಚ್ಚಿರುವೆ? ಸುಮ್ಮನೆ ಮನೆ ಕೆಲಸ ಮಡುವುದನ್ನು ಕಲಿಸಿದರೆ ಆಗುತ್ತಿರಲಿಲ್ಲವೇ?’ ಎಂದು ಬಂಧು–ಮಿತ್ರರು ಪುಕ್ಕಟೆ ಸಲಹೆಯನ್ನು ಕೊಟ್ಟ ದಿನಗಳನ್ನು ಸಂಜೀವ್ ಅವರಿನ್ನೂ ಮರೆತಿಲ್ಲ.

ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಶುರುವಾದ ಮೇಲೆ ಶೆಫಾಲಿ ಆಡುತ್ತಿರುವುದನ್ನು ಕಂಡ ಅದೇಬಂಧು–ಮಿತ್ರರು, ‘ನಿನ್ನ ಮಗಳು ಹೆಣ್ಣುಮಕ್ಕಳ ಕ್ರಿಕೆಟ್ಟನ್ನೂ ಗಂಭೀರವಾಗಿ ನೋಡುವಂತೆ ಮಾಡಿಬಿಟ್ಟಳಲ್ಲಪ್ಪ’ ಎನ್ನುವಾಗ ಈ ತಂದೆಗೆ ಹೆಮ್ಮೆ.

ವಿಶ್ವಕಪ್‌ ಶುರುವಾದಾಗಿನಿಂದ ಸಂಜೀವ್ ವಾಯುವಿಹಾರವನ್ನು ತಪ್ಪಿಸುತ್ತಿಲ್ಲ. ಯಾಕೆಂದರೆ, ಆ ಸಂದರ್ಭದಲ್ಲೇ ಮಗಳ ಆಟದ ಕುರಿತ ವಿಶ್ಲೇಷಣೆಗಳು ಅವರಿಗೆ ಪರಿಚಯಸ್ಥರಿಂದ ದಾಟುವುದು. ಹರಿಯಾಣ ಕ್ರಿಕೆಟ್‌ ಸಂಸ್ಥೆ ಹಾಗೂ ಆಪ್ತೇಷ್ಟರು ಹಣಕಾಸಿನ ಸಹಾಯ ಮಾಡಿದ್ದರಿಂದ ಅವರು ಸಿಡ್ನಿಗೆ ವಿಮಾನ ಪ್ರಯಾಣ ಬೆಳೆಸುವುದು ಸಾಧ್ಯವಾಗಿದೆ.

ತಾರಾ ಬ್ಯಾಟ್ಸ್‌ವುಮನ್‌ಗಳಾದ ಸ್ಮೃತಿ ಮಂದಾನ ಹಾಗೂ ನಾಯಕಿ ಹರ್ಮನ್‌ಪ್ರೀತ್‌ ಕೌರ್ ಲಯ ಕಂಡುಕೊಳ್ಳಲು ಆಗೀಗ ಪರದಾಡಿದಾಗಲೂ ಶೆಫಾಲಿ ಆ ಕೊರತೆಯನ್ನು ತುಂಬಿದ್ದಾರೆ. ‘ನಾನು ಮೊದಲು ವೇಗವಾಗಿ ಆಡುವುದರ ಮೂಲಕ ಹೇಗೆ ಆತ್ಮವಿಶ್ವಾಸ ತುಂಬಿಕೊಂಡೆನೋ ಇವಳೂ ಹಾಗೆಯೇ ಆಡುತ್ತಿರುವುದು ಖುಷಿ ನೀಡಿದೆ’ ಎಂದು ಸ್ಮೃತಿ ಹೊಗಳಿದ್ದು ಅರ್ಥಪೂರ್ಣ.
ಈ ವಿಶ್ವಕಪ್‌ನಲ್ಲಿ ಇದುವರೆಗೆ ಶೆಫಾಲಿ ಆರು ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅಷ್ಟು ಸಂಖ್ಯೆಯ ಸಿಕ್ಸರ್‌ಗಳನ್ನು ಬೇರೆ ಯಾವ ಬ್ಯಾಟ್ಸ್‌ವುಮನ್‌ ಕೂಡ ಹೊಡೆದಿಲ್ಲದಿರುವುದು ಆಟದ ವೈಖರಿಗೆ ಹಿಡಿದ ಕನ್ನಡಿ.

‘ವಿಶ್ವಕಪ್‌ನಲ್ಲಿ ಒಂದು ಶತಕ ಗಳಿಸಲೇಬೇಕು... ಅಪ್ಪ’ ಎಂದು ಮಗಳು ತಿಂಗಳುಗಳ ಹಿಂದೆ ಆಡಿದ ಮಾತು ಸಂಜೀವ್ ಕಿವಿಯಲ್ಲಿ ಇನ್ನೂ ಗುನುಗುತ್ತಿದೆ. ಮಗಳು ಅರ್ಧಶತಕ ಹೊಡೆದರೂ ಅದು ಶತಕಕ್ಕೆ ಸಮ ಎನ್ನುವ ಅವರ ಕಣ್ಣಾಲಿಗಳಲ್ಲಿ ಮಗಳ ಯಶಸ್ಸಿನ ಕಥನಗಳೇ ಇಣುಕುತ್ತವೆ. ಭಾರತ ಇನ್ನೇನು ಫೈನಲ್‌ ಆಡಬೇಕಿದೆಯಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT