ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024 MI vs RR: ತವರಿನಂಗಳದಲ್ಲಿ ಮುಂಬೈಗೆ ಜಯದ ತವಕ

ಮೂರನೇ ಗೆಲುವಿನ ಮೇಲೆ ರಾಜಸ್ಥಾನ ರಾಯಲ್ಸ್ ಕಣ್ಣು
Published 31 ಮಾರ್ಚ್ 2024, 23:30 IST
Last Updated 31 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಮುಂಬೈ: ಹಾರ್ದಿಕ್ ಪಾಂಡ್ಯ ನಾಯಕರಾದ ನಂತರ ಮುಂಬೈ ಇಂಡಿಯನ್ಸ್ ತಂಡವು ಇದೇ ಮೊದಲ ಬಾರಿ ತವರಿನಂಗಳದಲ್ಲಿ ಆಡಲಿದೆ. 

ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.  ಅಹಮದಾಬಾದ್‌ನಲ್ಲಿ ಗುಜರಾತ್ ಟೈಟನ್ಸ್ ಮತ್ತು ಹೈದರಾಬಾದಿನಲ್ಲಿ ಸನ್‌ರೈಸರ್ಸ್ ವಿರುದ್ಧ ಮುಂಬೈ ಸೋತಿತ್ತು. 

ಮುಂಬೈ ತಂಡವು ಕಳೆದ ಕೆಲವು ಟೂರ್ನಿಗಳಲ್ಲಿ ಇದೇ ರೀತಿ ಆರಂಭಿಕ ಪಂದ್ಯಗಳಲ್ಲಿ ಸೋತು, ನಂತರ ಪುಟಿದೆದ್ದು ಅಮೋಘವಾಗಿ ಆಡಿರುವ ಉದಾಹರಣೆಗಳು ಇವೆ. ಆದರೆ ಇಲ್ಲಿ  ನೆಟ್‌ ರನ್‌ ರೇಟ್ (–0.925) ಕೂಡ ಅತ್ಯಂತ ಕಡಿಮೆ ಇದೆ. ಗಾಯಗೊಂಡಿರುವ ಸೂರ್ಯಕುಮಾರ್ ಯಾದವ್ ಅವರ ಗೈರುಹಾಜರಿಯೂ ಮುಂಬೈ ತಂಡವನ್ನು ಕಾಡುತ್ತಿದೆ. ಉಭಯ ತಂಡಗಳು ಕಳೆದ ಐದು ಸಲ ಮುಖಾಮುಖಿಯಾದಾಗ ಮುಂಬೈ 4–1 ಗೆಲುವಿನ ದಾಖಲೆ ಹೊಂದಿದೆ. ಇದರಿಂದಾಗಿ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಆದರೆ  ಈ ಸಲ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನವು ಆಡಿದ ಎರಡೂ ಪಂದ್ಯಗಳಲ್ಲಿ ಜಯಿಸಿದೆ.

ಮುಂಬೈ ತಂಡಕ್ಕೆ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡುತ್ತಿದ್ದಾರೆ. ಇಶಾನ್ ಕಿಶನ್, ಟಿಮ್ ಡೇವಿಡ್ ಹಾಗೂ ಕಳೆದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ತಿಲಕ್ ವರ್ಮಾ ಉತ್ತಮ ಲಯದಲ್ಲಿದ್ದಾರೆ. ಆದರೆ ನಾಯಕ ಹಾರ್ದಿಕ್ ತಮ್ಮ ನಿರ್ಧಾರಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳುವ ಅವಶ್ಯಕತೆ ಇದೆ. ತಂಡದ ಪ್ರಮುಖ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರ ಅನುಭವ ಮತ್ತು ಪ್ರತಿಭೆಯನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಆದ್ಯತೆ ನೀಡಬೇಕಿದೆ.  ಸ್ಪಿನ್ನರ್ ಪಿಯೂಷ್ ಚಾವ್ಲಾ ಕೂಡ ಅನುಭವಿಯಾಗಿದ್ದಾರೆ. ಸ್ಥಳೀಯ ಆಟಗಾರ ಶಮ್ಸ್ ಮುಲಾನಿ ಐಪಿಎಲ್‌ಗೆ ಹೊಸಬರು. ಆದರೆ ವಾಂಖೆಡೆಯಲ್ಲಿ ಆಡುವ ಅನುಭವ ಅವರಿಗೆ ಬಹಳಷ್ಟಿದೆ.

ಹೋದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ 17 ವರ್ಷದ ಕೆವಾನಾ ಮಪಾಕಾ ಅವರಿಗೆ ಮೊದಲ ಓವರ್ ಹಾಕುವ ಅವಕಾಶ ನೀಡಲಾಗಿತ್ತು. ರಾಜಸ್ಥಾನ ತಂಡದಲ್ಲಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ತಮ್ಮ ಲಯಕ್ಕೆ ಮರಳಬೇಕಿದೆ. ಮೊದಲ ಪಂದ್ಯದಲ್ಲಿ ಸಂಜು ಮತ್ತು ಎರಡನೇ ಪಂದ್ಯದಲ್ಲಿ ರಿಯಾನ್ ಪರಾಗ್ ಅಮೋಘವಾಗಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿಗೆ ಕಾರಣರಾಗಿದ್ದರು. 

ಬೌಲಿಂಗ್ ವಿಭಾಗವೂ ಸಮರ್ಥವಾಗಿದೆ. ಯಜುವೇಂದ್ರ ಚಾಹಲ್, ನಾಂದ್ರೆ ಬರ್ಗರ್, ಆರ್. ಅಶ್ವಿನ್ ಉತ್ತಮ ಲಯದಲ್ಲಿದ್ದಾರೆ. ಆವೇಶ್ ಖಾನ್ ಡೆತ್ ಓವರ್‌ನಲ್ಲಿಯೂ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ. ಹೀಗಾಗಿ ತಂಡವು ಮುಂಬೈಗಿಂತಲೂ ಹೆಚ್ಚು ಸಮತೋಲನವಾಗಿದೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೊ ಸಿನಿಮಾ ಆ್ಯಪ್

ಬಲಾಬಲ

ಪಂದ್ಯ;28

ಮುಂಬೈ ಜಯ;15

ರಾಯಲ್ಸ್ ಜಯ; 12

ಫಲಿತಾಂಶವಿಲ್ಲ;1

ಯಜುವೇಂದ್ರ ಚಾಹಲ್ 
ಯಜುವೇಂದ್ರ ಚಾಹಲ್ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT