ಶನಿವಾರ, ಜೂನ್ 19, 2021
26 °C

ತಂಡದಿಂದ ಕೈಬಿಟ್ಟಾಗ ನಿವೃತ್ತಿ ಘೋಷಿಸುವ ಯೋಚನೆ ಮಾಡಿದ್ದೆ: ಸ್ಟುವರ್ಟ್ ಬ್ರಾಡ್

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ಲಂಡನ್: ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಅಂತಿಮ 11ರಿಂದ ಕೈಬಿಟ್ಟಾಗ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಯೋಚನೆ ಮಾಡಿದ್ದೆ ಎಂದು ಇಂಗ್ಲೆಂಡ್‌ನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ತಿಳಿಸಿದ್ದಾರೆ.

ಸೌತಾಂಪ್ಟನ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬ್ರಾಡ್ ಬದಲಿಗೆ ಜೇಮ್ಸ್ ಆ್ಯಂಡರ್ಸನ್, ಜೊಫ್ರಾ ಆರ್ಚರ್ ಮತ್ತು ಮಾರ್ಕ್ ವುಡ್ ಅವರಿಗೆ ಅವಕಾಶ ನೀಡಲಾಗಿತ್ತು. ಆ ಮೂಲಕ ತವರಿನಲ್ಲಿ ಸತತ 51 ಪಂದ್ಯಗಳಲ್ಲಿ ಆಡಿದ ಬ್ರಾಡ್ ಓಟಕ್ಕೆ ತಡೆ ಬಿದ್ದಿತ್ತು. ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಲ್ಕು ವಿಕೆಟ್‌ಗಳ ಗೆಲುವು ಸಾಧಿಸಿತ್ತು. ಮುಂದಿನ ಎರಡು ಪಂದ್ಯಗಳಲ್ಲಿ ಬ್ರಾಡ್‌ಗೆ ಅವಕಾಶ ನೀಡಲಾಗಿತ್ತು. ಎರಡು ಪಂದ್ಯಗಳಲ್ಲಿ ಅವರು ಒಟ್ಟು 16 ವಿಕೆಟ್ ಉರುಳಿಸಿದ್ದರು. ಎರಡೂ ಪಂದ್ಯಗಳನ್ನು ಗೆದ್ದ ಇಂಗ್ಲೆಂಡ್ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಬ್ರಾಡ್ ಸರಣಿಯ ಶ್ರೇಷ್ಠ ಆಟಗಾರ ಎಂದೆನಿಸಿಕೊಂಡಿದ್ದರು.

ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದಾಗ ನನ್ನ ಹೆಸರು ಕಾಣಿಸಲಿಲ್ಲ. ತುಂಬ ಬೇಸರಗೊಂಡಿದ್ದೆ. ನನಗೆ ಅವಕಾಶವಿಲ್ಲ ಎಂದು ಗೆಳೆಯ ಬಂದು ತಿಳಿಸಿದಾಗ ನಿಂತ ನೆಲವೇ ನಡುಗಿದಂತಾಯಿತು. ಮಾತುಗಳು ಹೊರಡಲಿಲ್ಲ. ನಿವೃತ್ತಿ ಘೋಷಿಸುವುದೇ ಸರಿ ಎಂದೆನಿಸಿತು. ಮತ್ತೆ ಮತ್ತೆ ಯೋಚಿಸುವುದರಲ್ಲಿ ಅರ್ಥವಿಲ್ಲ ಎಂದೆನಿಸಿತ್ತು. ಆದ್ದರಿಂದ ಈ ನಿರ್ಧಾರಕ್ಕೆ ಬದ್ಧನಾಗಿರುವುದೇ ಸರಿ ಎನಿಸಿತು’ ಎಂದು ತಿಳಿಸಿದರು.

‘ಬಯೊಸೆಕ್ಯೂರ್ ವಲಯದಲ್ಲಿ ನಮ್ಮನ್ನೆಲ್ಲ ಇರಿಸಿದ್ದರಿಂದ ದುಗುಡ ಇನ್ನೂ ಹೆಚ್ಚಾಗಿತ್ತು. ಏನು ಮಾಡಬೇಕೆಂದೇ ತೋಚುತ್ತಿರಲಿಲ್ಲ. ಆಟಗಾರನೊಬ್ಬನನ್ನು ಪಂದ್ಯದ ಸಂದರ್ಭದಲ್ಲಿ ಅಂಗಣದಲ್ಲೇ ಇರುವ ಹೋಟೆಲ್ ಕೊಠಡಿಯಲ್ಲಿ ಇರುವಂತೆ ಹೇಳಿದರೆ ಹೇಗಾಗಬೇಕು...? ನನಗೂ ಅದೇ ಸಂಕಟ ಕಾಡಿತ್ತು’ ಎಂದು ಅವರು ಹೇಳಿದರು.

ಇಂಗ್ಲೆಂಡ್ ಪರವಾಗಿ ಜೇಮ್ಸ್ ಆ್ಯಂಡರ್ಸನ್ ಜೊತೆ ಇನ್ನೊಂದು ತುದಿಯಲ್ಲಿ ಬೌಲಿಂಗ್ ಆರಂಭಿಸುವ ಬ್ರಾಡ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ದೇಶದ ಪರವಾಗಿ ಅತಿ ಹೆಚ್ಚು ವಿಕೆಟ್ ಗಳಿಸಿದ ಎರಡನೇ ಆಟಗಾರ ಎನಿಸಿದ್ದಾರೆ. ಆ್ಯಂಡರ್ಸನ್ 589 ವಿಕೆಟ್ ಗಳಿಸಿದ್ದರೆ ಬ್ರಾಡ್ 501 ವಿಕೆಟ್ ಪಡೆದಿದ್ದಾರೆ. ಈ ಬಗ್ಗೆ ಅಭಿಪ್ರಾಯ ಕೇಳಿದಾಗ ಹೌದು, 500 ವಿಕೆಟ್‌ಗಳ ಸಾಧನೆ ಆಗಿದೆ. ಇನ್ನು 600 ವಿಕೆಟ್‌ಗಳ ಗುರಿಯೊಂದಿಗೆ ಆಡಲಿದ್ದೇನೆ ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು