ಸೋಮವಾರ, ಸೆಪ್ಟೆಂಬರ್ 27, 2021
22 °C
ಹಿರಿಯ ಕ್ರಿಕೆಟಿಗ ಸುನಿಲ್ ಜೋಶಿ ಅಭಿಮತ

ಕನ್ನಡದ ವೀಕ್ಷಕ ವಿವರಣೆಯ ಖುಷಿ ಅಮೂಲ್ಯ: ಸುನಿಲ್ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

* ಐಪಿಎಲ್ ಬೆಳವಣಿಗೆಯನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?
2008ರಿಂದ ಐಪಿಎಲ್ ಶುರುವಾಯಿತು. ನಾನೂ ಆರ್‌ಸಿಬಿ ತಂಡಕ್ಕೆ ಮೂರು ವರ್ಷಗಳವರೆಗೆ ಆಡಿದ್ದೆ. ಆದರೆ, ಈಗ ವಿಶ್ವದ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್ ಲೀಗ್ ಆಗಿ ಬೆಳೆದಿದೆ. ಬಹಳಷ್ಟು ಜನರಿಗೆ ಅವಕಾಶದ ಕಣಜವಾಗಿದೆ. ಕರ್ನಾಟಕದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಮನೀಷ್ ಪಾಂಡೆ, ಕೆ. ಎಲ್. ರಾಹುಲ್, ವಿನಯಕುಮಾರ್, ರಾಬಿನ್ ಉತ್ತಪ್ಪ, ಶ್ರೇಯಸ್ ಗೋಪಾಲ್, ಕೆ. ಗೌತಮ್, ಪವನ್ ದೇಶಪಾಂಡೆ, ಅನಿರುದ್ಧ ಜೋಶಿ, ದೇವದತ್ತ ಪಡಿಕ್ಕಲ್ ಅವರೆಲ್ಲರಿಗೂ ಅವಕಾಶ ಸಿಕ್ಕಿರುವುದು ಖುಷಿಯ ಸಂಗತಿ. ಗ್ರಾಮಾಂತರ ಮಟ್ಟದಲ್ಲಿಯೂ ಐಪಿಎಲ್ ಬಹಳಷ್ಟು ಪ್ರಭಾವ ಬೀರುತ್ತಿದೆ. ನಮ್ಮ ರಾಜ್ಯ ಸಂಸ್ಥೆಯು ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಕೂಡ ಆರಂಭಿಸಿದೆ. ಆ ಟೂರ್ನಿಯ ಆರಂಭದಲ್ಲಿ ದಾವಣಗೆರೆ ತಂಡಕ್ಕೆ ನಾನೂ ಆಡಿದ್ದೆ. ಗ್ರಾಮಾಂತರ ಪ್ರತಿಭೆಗಳಿಗೆ ಅವಕಾಶ ಸಿಗುತ್ತಿದೆ.

*ಇವತ್ತಿನ ಕ್ರಿಕೆಟಿಗರಲ್ಲಿ ಆಟದ ಮೇಲಿನ ಪ್ರೀತಿಗಿಂತ ಲಾಭದ ಮೇಲೆ ಹೆಚ್ಚು ಗಮನ ಇದೆಯೇ?
ಇವತ್ತೂ ಆಟಗಾರರಲ್ಲಿ ಕ್ರಿಕೆಟ್‌ ಬಗ್ಗೆ ಪ್ರೀತಿ ಇದೆ. ನಮ್ಮ ಕಾಲದಲ್ಲಿಯೂ ಪ್ರೀತಿ, ಇತ್ತು. ಕಷ್ಟವೂ ಇತ್ತು. ಇವತ್ತು ಸೌಲಭ್ಯಗಳಿವೆ. ಆದರೆ, ಸುಲಭವಲ್ಲ. ಮೂರು ಮಾದರಿಗಳಲ್ಲಿಯೂ ಆಟಗಾರ ತನ್ನ ಫಿಟ್‌ನೆಸ್‌ ನಿರ್ವಹಿಸಿಕೊಂಡು ಆಡಬೇಕು. ಸತತ ಪ್ರಯತ್ನ, ಶ್ರಮ ಪಡಬೇಕು. ತನ್ನ ದೇಹದ ನಿರ್ವಹಣೆ, ವಿಶ್ರಾಂತಿ, ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಬೇಕು. ಅದಕ್ಕಾಗಿ ನೆರವು ಸಿಬ್ಬಂದಿ ಇದೆ. ತಜ್ಞರು ಇದ್ದಾರೆ. ಅವರ ಸಹಾಯದಿಂದ ಸಾಧನೆ ಮಾಡಬೇಕು.

*ವೀಕ್ಷಕ ವಿವರಣೆಗಾರನಾಗಿ ಅನುಭವ ಹೇಗಿತ್ತು?
ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಕಾಮೆಂಟರಿ ಮಾಡಲು ಬಹಳ ಖುಷಿಯಾಯಿತು. ಬಹಳಷ್ಟು ಸ್ನೇಹಿತರು, ಆಟಗಾರರು ಸಂಬಂಧಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕ ಇಟ್ಟುಕೊಂಡಿದ್ದೇವೆ. ನಾನು ಗದುಗಿನವ. ಆದ್ದರಿಂದ ಉತ್ತರ ಕರ್ನಾಟಕ ಜನರು ಅಲ್ಲಿಯ ಭಾಷೆಯಲ್ಲಿ ಮಾತನಾಡಲು ಪ್ರೀತಿಯಿಂದ ಆಗ್ರಹಿಸುತ್ತಾರೆ. ಅವಕಾಶ ಸಿಕ್ಕಾಗಲೆಲ್ಲ ಮಾತನಾಡಿದ್ದೇನೆ. 1982 ರಿಂದ 92ರವರೆಗಿನ ಅವಧಿಯಲ್ಲಿ ನಾನು ಗದುಗಿನಿಂದ ಬೆಳಗಿನ ಜಾವವೇ ರೈಲಿನಲ್ಲಿ ಹುಬ್ಬಳ್ಳಿಗೆ ತೆರಳುತ್ತಿದ್ದೆ. ಕ್ರಿಕೆಟ್ ಪ್ರಾಕ್ಟಿಸ್ ಮಾಡಿ ಬೆಳಿಗ್ಗೆ 9 ಗಂಟೆಗೆ ಬಸ್‌ನಲ್ಲಿ ಗದುಗಿಗೆ ಮರಳಿ ಶಾಲೆಗೆ ಹೋಗುತ್ತಿದ್ದೆ. ಅವೆಲ್ಲವೂ ನೆನಪಾಗುತ್ತವೆ. ಆ ದಿನಗಳಲ್ಲಿ ಲಭಿಸಿದ ಅನುಭವದಿಂದ ಇವತ್ತು ಕ್ರಿಕೆಟಿಗನಾಗಲು ಸಾಧ್ಯವಾಗಿದೆ. ದೊಡ್ಡ ತಾರೆಗಳೊಂದಿಗೆ ಆಡಿದ ಅನುಭವ, ರಾಜ್ಯ, ರಾಷ್ಟ್ರ ತಂಡಕ್ಕೆ ನೀಡಿದ ಕಾಣಿಕೆ ಹೆಮ್ಮೆ ಯೆನಿಸುತ್ತದೆ.

*ಐಪಿಎಲ್‌ನಲ್ಲಿ ಸ್ಪಿನ್ನರ್‌ಗಳ ಯಶಸ್ಸಿನ ಬಗ್ಗೆ ಹೇಳಿ
ಟೂರ್ನಿಯ ಇತಿಹಾಸದಲ್ಲಿ ಹಲವು ಸ್ಪಿನ್ನರ್‌ಗಳನ್ನು ನಾವು ನೋಡಿದ್ದೇವೆ. ಈ ಬಾರಿ ಮೂವರು ಲೆಗ್‌ಸ್ಪಿನ್ನರ್‌ಗಳು ಯಶಸ್ವಿಯಾಗಿರುವುದು ನನಗಂತೂ ತುಂಬಾ ಖುಷಿಯಾಗಿದೆ. ಅದರಲ್ಲಿ ನಮ್ಮ ಕನ್ನಡಿಗ ಶ್ರೇಯಸ್ ಗೋಪಾಲ್, ಆರ್‌ಸಿಬಿಯ ಯಜುವೇಂದ್ರ ಚಾಹಲ್ ಪ್ರಮುಖರು. ಟ್ವೆಂಟಿ–20 ಮಾದರಿಯಲ್ಲಿಯೂ ಭಾರತೀಯ ಸ್ಪಿನ್ನರ್‌ಗಳು ಪ್ರಾಬಲ್ಯ ಮೆರೆದಿರುವುದು ಹೆಮ್ಮೆಯ ವಿಷಯ. ಇದು ನಮ್ಮ ನೆಲದ ಮಹಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.

*ಯುವ ಆಟಗಾರರಿಗೆ ನಿಮ್ಮ ಸಲಹೆಗಳು?
ಕ್ರಿಕೆಟ್ ಮೂಲ ಕೌಶಲ್ಯಗಳನ್ನು ಕಲಿಯಿರಿ ಮತ್ತು ನಿರಂತರವಾಗಿ ಅಭ್ಯಾಸ ಮಾಡಿರಿ. ಒಂದೊಂದು ಹಂತ ಮೇಲೆ ಏರಿದಂತೆ ಸವಾಲುಗಳು ವಿಭಿನ್ನವಾಗಿರುತ್ತವೆ. ಆದರೆ, ಕೌಶಲ್ಯಗಳು ಬದಲಾಗುವುದಿಲ್ಲ. ಮೂಲ ಕೌಶಲ್ಯಗಳಲ್ಲಿ ನಿಪುಣರಾಗಿದ್ದರೆ, ಸವಾಲುಗಳನ್ನು ಎದುರಿಸುವುದು ಸುಲಭ.

*ಇಂಗ್ಲೆಂಡ್‌ನಲ್ಲಿ ಮಿಂಚಬಲ್ಲ ಸಾಮರ್ಥ್ಯ ಇರುವ ಭಾರತದ ಮಧ್ಯಮವೇಗಿ ಯಾರು?
ಇತ್ತೀಚಿನ ದಿನಗಳಲ್ಲಿ ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಶಮಿ ಅವರಿಗೆ ಚೆಂಡಿನ ಮೇಲೆ ನಿಯಂತ್ರಣ ಇದೆ. 140 ಕಿಲೋಮೀಟರ್ಸ್ (ಪ್ರತಿ ಗಂಟೆ) ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಮಣಕಟ್ಟಿನ ಚಲನೆ ಮತ್ತು ಸ್ವಿಂಗ್ ಚೆನ್ನಾಗಿದೆ. ಅವರಿಗೆ ಹೆಚ್ಚು ಯಶಸ್ಸು ಸಿಗುವ ನಿರೀಕ್ಷೆ ಇದೆ. 

*ವಿಶ್ವಕಪ್ ಟೂರ್ನಿ ಸಮೀಪಿಸುತ್ತಿದೆ. ಭಾರತ ತಂಡದಲ್ಲಿ ನಾಲ್ಕನೇ ಶ್ರೇಯಾಂಕದ ಬ್ಯಾಟ್ಸ್‌ಮನ್ ಯಾರಾದರೆ ಚೆನ್ನ?
ಇಂಗ್ಲೆಂಡ್‌ನಲ್ಲಿ ಪುಲ್ ಮತ್ತು ಕಟ್ ಶಾಟ್‌ಗಳನ್ನು ಪರಿಣಾಮಕಾರಿಯಾಗಿ ಆಡುವವರು ಬೇಕು. ಅಲ್ಲಿಯ ಪಿಚ್‌ಗಳಲ್ಲಿ ಸ್ವಿಂಗ್‌ ಎಸೆತಗಳನ್ನು ಎದುರಿಸುವ ಪರಿಣಾಮಕಾರಿ ಆಟಗಾರ ಬೇಕು. ಕೆ.ಎಲ್. ರಾಹುಲ್ ಅವರಿಗೆ ಅವಕಾಶ ನೀಡಬಹುದು. ಅವರಿಗೆ ಆ ಸಾಮರ್ಥ್ಯ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು