ಸನ್‌ರೈಸರ್ಸ್‌ಗೆ ಕೆಕೆಆರ್‌ ಸವಾಲು

ಶನಿವಾರ, ಮೇ 25, 2019
22 °C
ಇಂದು ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ: ವಾರ್ನರ್‌–ರಸೆಲ್‌ ಮುಖಾಮುಖಿ

ಸನ್‌ರೈಸರ್ಸ್‌ಗೆ ಕೆಕೆಆರ್‌ ಸವಾಲು

Published:
Updated:
Prajavani

ಹೈದರಾಬಾದ್‌: ಈ ಸಲದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಸ್ಫೋಟಕ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಡೇವಿಡ್‌ ವಾರ್ನರ್‌ ಮತ್ತು ಆ್ಯಂಡ್ರೆ ರಸೆಲ್‌ ಭಾನುವಾರ ಮುಖಾಮುಖಿಯಾಗಲಿದ್ದಾರೆ.

ಉಪ್ಪಳದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುವ ಹೋರಾಟದಲ್ಲಿ ಆತಿಥೇಯ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ ಕೋಲ್ಕತ್ತ ನೈಟ್‌ರೈಡರ್ಸ್‌ ಸವಾಲು ಎದುರಾಗಲಿದೆ.

ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಎದುರು ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿರುವ ಸನ್‌ರೈಸರ್ಸ್‌ ತವರಿನ ಅಂಗಳದಲ್ಲಿ ಮತ್ತೊಮ್ಮೆ ಗೆಲುವಿನ ತೋರಣ ಕಟ್ಟಲು ಸಿದ್ಧವಾಗಿದೆ.

ವಾರ್ನರ್‌ ಮತ್ತು ಜಾನಿ ಬೇಸ್ಟೊ ಈ ತಂಡದ ಶಕ್ತಿಯಾಗಿದ್ದಾರೆ. ಆಸ್ಟ್ರೇಲಿಯಾದ ವಾರ್ನರ್‌ ಈ ಸಲದ ಲೀಗ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 450ರನ್‌ಗಳಿವೆ. ಬೇಸ್ಟೊ ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಅವರು ಎಂಟು ಪಂದ್ಯಗಳಿಂದ 365ರನ್‌ ಕಲೆಹಾಕಿದ್ದಾರೆ. ಇದರಲ್ಲಿ ತಲಾ ಒಂದು ಶತಕ ಮತ್ತು ಅರ್ಧಶತಕ ಸೇರಿವೆ.

ಅಮೋಘ ಲಯದಲ್ಲಿರುವ ಈ ಜೋಡಿ ಭಾನುವಾರ ದಿನೇಶ್‌ ಕಾರ್ತಿಕ್‌ ಪಡೆಯ ಬೌಲರ್‌ಗಳ ಮೇಲೆ ಸವಾರಿ ಮಾಡಲು ಕಾಯುತ್ತಿದೆ.

ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಆತಿಥೇಯರ ಚಿಂತೆಗೆ ಕಾರಣವಾಗಿದೆ. ವಿಜಯಶಂಕರ್‌, ನಾಯಕ ಕೇನ್‌ ವಿಲಿಯಮ್ಸನ್‌, ಮನೀಷ್‌ ಪಾಂಡೆ ಮತ್ತು ಯೂಸುಫ್‌ ಪಠಾಣ್‌ ರನ್‌ ಗಳಿಸಲು ಪರದಾಡುತ್ತಿದ್ದಾರೆ. ಇವರು ಭಾನುವಾರದ ಹೋರಾಟದಲ್ಲಿ ಲಯ ಕಂಡುಕೊಳ್ಳಬೇಕು. ದೀಪಕ್‌ ಹೂಡಾ ಕೂಡಾ ಜವಾಬ್ದಾರಿ ಅರಿತು ಆಡಬೇಕು.

ಸನ್‌ರೈಸರ್ಸ್‌ ಬಲಾಢ್ಯ ಬೌಲಿಂಗ್‌ ವಿಭಾಗವನ್ನು ಹೊಂದಿದೆ. ಭುವನೇಶ್ವರ್‌ ಕುಮಾರ್‌, ರಶೀದ್‌ ಖಾನ್‌, ಖಲೀಲ್‌ ಅಹಮದ್‌, ಸಿದ್ಧಾರ್ಥ್‌ ಕೌಲ್‌ ಮತ್ತು ಸಂದೀಪ್ ಶರ್ಮಾ ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದಾರೆ. ಇವರು ಎದುರಾಳಿ ಪಡೆಯ ಬ್ಯಾಟಿಂಗ್‌ ಶಕ್ತಿಯಾಗಿರುವ ರಸೆಲ್‌ ಮತ್ತು ನಿತೀಶ್‌ ರಾಣಾ ಅವರನ್ನು ಕಟ್ಟಿಹಾಕಲು ಯಾವ ಬಗೆಯ ರಣನೀತಿ ಹೆಣೆದು ಅಂಗಳಕ್ಕಿಳಿಯಲಿದ್ದಾರೆ ಎಂಬುದು ಸದ್ಯದ ಕುತೂಹಲ.

‘ಫ್ಲೇ ಆಫ್’ ಮೇಲೆ ಕಣ್ಣಿಟ್ಟಿರುವ ಕೆಕೆಆರ್‌, ಸನ್‌ರೈಸರ್ಸ್‌ ಎದುರಿನ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ಈ ತಂಡ ರಸೆಲ್‌ ಮತ್ತು ನಿತೀಶ್‌ ರಾಣಾ ಮೇಲೆ ಹೆಚ್ಚು ಅವಲಂಬಿತವಾಗಿದೆ. ಈ ಜೋಡಿ ಶುಕ್ರವಾರ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅಮೋಘ ಜೊತೆಯಾಟ ಆಡಿತ್ತು. ಹೀಗಿದ್ದರೂ ತಂಡಕ್ಕೆ ಗೆಲುವು ಒಲಿದಿರಲಿಲ್ಲ.

ಇವರು ಸನ್‌ರೈಸರ್ಸ್‌ ವಿರುದ್ಧವೂ ಅಬ್ಬರಿಸಲು ಕಾಯುತ್ತಿದ್ದಾರೆ. ಇವರಿಗೆ ನಾಯಕ ಕಾರ್ತಿಕ್‌, ರಾಬಿನ್‌ ಉತ್ತಪ್ಪ, ಕ್ರಿಸ್‌ ಲಿನ್‌ ಶುಭಮನ್‌ ಗಿಲ್ ಮತ್ತು ಸುನಿಲ್ ನಾರಾಯಣ ಅವರಿಂದ ಸೂಕ್ತ ಬೆಂಬಲ ಸಿಗುವುದು ಅಗತ್ಯ.

ಬೌಲಿಂಗ್‌ನಲ್ಲೂ ಕೆಕೆಆರ್‌ ಪರಿಣಾಮಕಾರಿ ಸಾಮರ್ಥ್ಯ ತೋರಬೇಕಿದೆ. ಈ ತಂಡ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿಗೆ 213ರನ್‌ ಬಿಟ್ಟುಕೊಟ್ಟಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !