ಮಂಗಳವಾರ, ಸೆಪ್ಟೆಂಬರ್ 29, 2020
27 °C

ಪ್ರಾಯೋಜಕತ್ವ ಸ್ಥಗಿತದಿಂದ ಆರ್ಥಿಕ ಮುಗ್ಗಟ್ಟಿಲ್ಲ: ಗಂಗೂಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕಟ್ ಟೂರ್ನಿಯ ಪ್ರಶಸ್ತಿ ಪ್ರಾಯೋಜಕತ್ವದಿಂದ ಚೀನಾದ ವಿವೊ ಕಂಪೆನಿ ಹಿಂದೆ ಸರಿದಿರುವುದರಿಂದ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

’ಬಿಸಿಸಿಐಗೆ ಬಹಳ ಗಟ್ಟಿಯಾದ ಬುನಾದಿ ಇದೆ. ಹಿಂದಿನಿಂದಲೂ ಇದ್ದ ಆಟಗಾರರು ಮತ್ತು ಆಡಳಿತಗಾರರು ಕ್ರಿಕೆಟ್ ಮತ್ತು ಮಂಡಳಿಯನ್ನು ಬಹಳ ಬಲಿಷ್ಠಗೊಳಿಸಿದ್ದಾರೆ. ಈಗಿನ ಪ್ರಾಯೋಜಕತ್ವದ ತಡೆಯು ಸಣ್ಣ ವಿಷಯವಾಗಿದೆ. ಇದನ್ನು ನಿರ್ವಹಿಸುವ ತಾಕತ್ತು ಮಂಡಳಿಗೆ ಇದೆ‘ ಎಂದು ಶನಿವಾರ ಎಸ್‌. ಚಂದ್ ಗ್ರೂಪ್ ಶೈಕ್ಷಣಿಕ ಪುಸ್ತಕ ಪ್ರಕಾಶನವು ಆಯೋಜಿಸಿದ್ದ ವೆನಿನಾರ್‌ನಲ್ಲಿ ಗಂಗೂಲಿ ಹೇಳಿದರು.

’ನಮ್ಮ ಬಳಿ ಯಾವಾಗಲೂ ಪರ್ಯಾಯ ಯೋಜನೆ ಇರುತ್ತದೆ. ಪ್ಲ್ಯಾನ್‌ ಎ ಮತ್ತು ಬಿ ಗಳನ್ನು ಪರಿಣತರು ಹಾಗೂ ಸೂಕ್ಸ್ಮಮತಿಗಳಾದ ಬ್ರ್ಯಾಂಡ್‌ , ಕಾರ್ಪೊರೇಟ್ ತಜ್ಞರು ಸಿದ್ಧಪಡಿಸುತ್ತಾರೆ. ಸಮರ್ಥವಾದ ವೃತಿಪರತೆ ಇದ್ದಾಗ ಆತಂಕವಿರುವುದಿಲ್ಲ. ದೀರ್ಘ ಕಾಲದ ಸಿದ್ಧತೆಯಿದ್ದಾಗ ತೊಂದರೆಯಾಗುವುದಿಲ್ಲ. ಮಧ್ಯದಲ್ಲಿ ಸಣ್ಣಪುಟ್ಟ ಸವಾಲುಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಯಾವುದೂ ರಾತ್ರಿ ಕಳೆದು ಬೆಳಗಾಗುವುದರೊಳಗೆ ಆಗುವುದಿಲ್ಲ‘ ಎಂದು ನುಡಿದರು.

2021ರ ಟಿ20 ವಿಶ್ವಕಪ್  ಆತಿಥ್ಯವನ್ನು ಉಳಿಸಿಕೊಂಡಿದ್ದರ ಕುರಿತು ಮಾತನಾಡಿದ ಅವರು, ’ 2023ರಲ್ಲಿ ಏಕದಿನ  ಮತ್ತು ಮುಂದಿನ ವರ್ಷ ಟಿ20 ನಡೆಸಲು ಭಾರತಕ್ಕೆ ಅವಕಾಶ ನೀಡಿಯಾಗಿದೆ. ಆ ಪ್ರಕಾರ ಸಿದ್ಧತೆಗಳನ್ನೂ ನಾವು ಮಾಡುತ್ತಿದ್ದೇವೆ. ಕೋವಿಡ್ –19 ಪಿಡುಗಿನಿಂದಾಗಿ ಬಹಳಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಬೇಕಿದೆ‘ ಎಂದು ಹೇಳಿದರು.

ಗಾಲ್ವನ್ ಕಣಿವೆಯಲ್ಲಿ ಈಚೆಗೆ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಆಗ ದೇಶದಲ್ಲಿ ಚೀನಾ ಉತ್ಪನ್ನಗಳನ್ನು ನಿಷೇಧಿಸಬೇಕು ಎಂಬ ಅಭಿಯಾನ ಶುರುವಾಗಿತ್ತು. ಕೇಂದ್ರ ಸರ್ಕಾರವು ಚೀನಾದ ಆ್ಯಪ್‌ಗಳನ್ನು ನಿಷೇದಿಸಿದೆ. ಈ ಹಿನ್ಲೆಲೆಯಲ್ಲಿ ಐಪಿಎಲ್‌ನಿಂದ ವಿವೊ ಕೈಬಿಡಲು ಆಗ್ರಹ ಹೆಚ್ಚಿತ್ತು. ಆದರೆ ಈಚೆಗೆ ವಿವೊ ಕಂಪೆನಿಯೇ ಪ್ರಸಕ್ತ ವರ್ಷದ  ಟೂರ್ನಿಗೆ ಪ್ರಾಯೋಜಕತ್ವ ವಹಿಸದಿರಲು ನಿರ್ಧರಿಸಿತ್ತು ಅದಕ್ಕೆ ಬಿಸಿಸಿಐ ಸಮ್ಮತಿಸಿದೆ.

ಟೈಟಲ್ ಪ್ರಾಯೋಜಕತ್ವದ ಒಪ್ಪಂದವು 2022ರವರೆಗೆ ಇತ್ತು. ಕಂಪೆನಿಯು ಒಟ್ಟು ₹ 2190 ಕೋಟಿಯ ಒಪ್ಪಂದ ಮಾಡಿಕೊಂಡಿತ್ತು. ಅದರನ್ವಯ ಪ್ರತಿವರ್ಷದ ಕಂತಿನಲ್ಲಿ₹ 440 ಕೋಟಿ ನೀಡುತ್ತಿತ್ತು. ಅದರಲ್ಲಿ  ಬಿಸಿಸಿಐ ಮತ್ತು ಎಂಟು ಫ್ರ್ಯಾಂಚೈಸ್‌ಗಳಿಗೆ ಹಂಚಿಕೆ ಮಾಡಲಾಗುತ್ತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು