ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೂಮ್ರಾ ಭಯದಲ್ಲಿ ಮಾಲಿಂಗ ಬಳಗ

ಟ್ವೆಂಟಿ–20 ಕ್ರಿಕೆಟ್: ಭಾರತ–ಶ್ರೀಲಂಕಾ ಹಣಾಹಣಿ ಇಂದು; ರಿಷಭ್‌ ಪಂತ್‌ ಆಟದ ಮೇಲೆ ಎಲ್ಲರ ಕಣ್ಣು
Last Updated 4 ಜನವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ಗುವಾಹಟಿ: ಚುಟುಕು ಕ್ರಿಕೆಟ್ ಸರಣಿ ಆಡಲು ಭಾರತಕ್ಕೆ ಬಂದಿರುವ ಶ್ರೀಲಂಕಾ ತಂಡಕ್ಕೆ ಜಸ್‌ಪ್ರೀತ್‌ ಬೂಮ್ರಾ ಅವರ ಯಾರ್ಕರ್‌ಗಳನ್ನು ಎದುರಿಸುವ ಸವಾಲು ಒಂದು ಕಡೆ ಇದೆ. ಇನ್ನೊಂದೆಡೆ ‘ಹಿಟ್‌ಮ್ಯಾನ್‌’ ರೋಹಿತ್ ಶರ್ಮಾ ಅವರು ವಿಶ್ರಾಂತಿ ಪಡೆದಿರುವ ಸಮಾಧಾನವೂ ಇದೆ!

ಭಾನುವಾರ ಬರ್ಸಾಪರದ ಕ್ರೀಡಾಂಗಣದಲ್ಲಿ ನಡೆಯಲಿರುವ ಸರಣಿಯ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಭಾರತಕ್ಕೆ ಸವಾಲೊಡ್ಡಲು ಸಿದ್ಧವಾಗಿರುವ ಲಂಕಾ ತಂಡ ಯುವ ಆಟಗಾರರ ಮೇಲೆ ಹೆಚ್ಚು ಅವಲಂಬಿತ ವಾಗಿದೆ. ಲಸಿತ್ ಮಾಲಿಂಗ ನಾಯಕತ್ವದ ತಂಡದಲ್ಲಿ ಬಹುಪಾಲು ಯುವ ಆಟಗಾ ರರೇ ಇದ್ದಾರೆ. ಆದ್ದರಿಂದ ಬೂಮ್ರಾ ಬಗೆಗಿನ ಆತಂಕ ಸಹಜವೇ ಆಗಿದೆ.

ನಾಲ್ಕು ತಿಂಗಳಿಂದ ಬೆನ್ನಿನ ಗಾಯದಿಂದಾಗಿ ವಿಶ್ರಾಂತಿ ಪಡೆದಿದ್ದ ಬೂಮ್ರಾ ಈಗ ತಂಡಕ್ಕೆ ಮರಳಿದ್ದಾರೆ. ಹೊಸ ವರ್ಷದ ಮೊದಲ ಪಂದ್ಯದಲ್ಲಿ ತಮ್ಮ ಫಿಟ್‌ನೆಸ್ ಮತ್ತು ಕೈಚಳಕ ಎರಡನ್ನೂ ಸಾಬೀತುಮಾಡಲು ಸಿದ್ಧರಾಗಿದ್ಧಾರೆ. ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಅವರು ಫಿಟ್‌ ಆಗುವುದು ಭಾರತ ತಂಡಕ್ಕೆ ಬಹಳ ಮುಖ್ಯವಾಗಿದೆ.

ಟೂರ್ನಿ ನಡೆಯಲಿರುವ ಆಸ್ಟ್ರೇಲಿ ಯಾದ ಆಂಗಳದಲ್ಲಿ ಅವರ ಅಗತ್ಯ ಭಾರತ ತಂಡಕ್ಕೆ ಇದೆ. ಆದ್ದರಿಂದ ಅವರ ಮೇಲೆ ಈಗ ಎಲ್ಲರ ಕಣ್ಣುಗಳೂ ನೆಟ್ಟಿವೆ. ಅವರೊಂದಿಗೆ ಮಧ್ಯಮವೇಗಿಗಳಾದ ನವದೀಪ್ ಸೈನಿ ಮತ್ತು ಶಾರ್ದೂಲ್ ಠಾಕೂರ್‌ ಮೇಲೂ ನಿರೀಕ್ಷೆಯ ಭಾರ ಇದೆ. ಏಕೆಂದರೆ ಅನುಭವಿ ಮೊಹಮ್ಮದ್ ಶಮಿ ವಿಶ್ರಾಂತಿ ಯಲ್ಲಿದ್ದಾರೆ. ಗಾಯಗೊಂಡಿರುವ ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್ ಅವರೂ ಲಭ್ಯರಿಲ್ಲ.

ಸ್ಪಿನ್‌ ವಿಭಾಗದಲ್ಲಿ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಸಮರ್ಥರಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಲು ಶಿಖರ್ ಧವನ್ ಬಂದಿದ್ದಾರೆ. ರೋಹಿತ್ ಅನುಪಸ್ಥಿತಿಯಲ್ಲಿ ಶಿಖರ್ ತಮ್ಮ ಲಯಕ್ಕೆ ಮರಳುವ ಅನಿವಾರ್ಯತೆ ಇದೆ. ಎಡಗೈ ಬ್ಯಾಟ್ಸ್‌ಮನ್ ಶಿಖರ್, ರಣಜಿ ಟೂರ್ನಿಯ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ 140 ರನ್‌
ಹೊಡೆದಿದ್ದರು.

ವಿರಾಟ್ ಕೊಹ್ಲಿ ಇನ್ನೊಂದು ರನ್‌ ಗಳಿಸಿದರೆ ರೋಹಿತ್ ದಾಖಲೆಯನ್ನು ಮುರಿಯುವರು. ಮಧ್ಯಮ ಕ್ರಮಾಂಕ ದಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಲಯದಲ್ಲಿದ್ದಾರೆ. ಸ್ಫೋಟಕ ಬ್ಯಾಟ್ಸ್‌ ಮನ್ ಶಿವಂ ದುಬೆ ಮತ್ತು ಕರ್ನಾಟಕದ ಮನೀಷ್ ಪಾಂಡೆ ಅವರಲ್ಲಿ ಯಾರು ಕಣಕ್ಕಿಳಿಯುವ ಅವಕಾಶ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕು.

ಪಂತ್‌ಗೆ ಕೊನೆ ಅವಕಾಶ?: ವಿಕೆಟ್‌ಕೀಪರ್ ರಿಷಭ್ ಪಂತ್‌ಗೆ ಸಾಮರ್ಥ್ಯ ಸಾಬೀತು ಮಾಡಲು ಇದು ಬಹುತೇಕ ಕೊನೆಯ ಅವಕಾಶವಾಗಬಹುದು. ಈ ಪಂದ್ಯದಲ್ಲಿ ಅವರು ಕ್ಯಾಚ್‌ಗಳನ್ನು ಬಿಟ್ಟರೆ, ತಮ್ಮ ಭವಿಷ್ಯವನ್ನೇ ಕೈಚೆಲ್ಲಿದಂತೆ. ಅವರ ಬದಲಿಗೆ ಸಂಜು ಸ್ಯಾಮ್ಸನ್‌ ಅವಕಾಶ ಪಡೆಯಬಹುದು. ಕಳೆದ ಎರಡು ಸರಣಿಗಳಲ್ಲಿಯೂ ಸಂಜು ಬೆಂಚ್ ಕಾದಿದ್ದಾರೆ.

ಶ್ರೀಲಂಕಾ ತಂಡವು ಎರಡು ದಿನಗಳ ಹಿಂದೆ ಗುವಾಹಟಿಗೆ ಬಂದಿಳಿದಿದೆ. ಇದುವರೆಗೂ ಭಾರತ ತಂಡದ ಎದುರು ಹೆಚ್ಚು ಕಹಿಯನ್ನೇ ಉಂಡಿರುವ ಲಂಕಾ, ಈ ಬಾರಿ ಗೆಲುವಿನೊಂದಿಗೆ ಹೊಸವರ್ಷವನ್ನು ಆರಂಭಿಸುವ ತವಕದಲ್ಲಿದೆ.

ಈಚೆಗೆ ಆಸ್ಟ್ರೇಲಿಯಾದಲ್ಲಿ ಲಂಕಾ ತಂಡವು 0–3ರಿಂದ ಸೋಲನುಭವಿಸಿ ಬಂದಿದೆ. ಆ ಟೂರ್ನಿಯಲ್ಲಿ ಚೆನ್ನಾಗಿ ಆಡಿದ್ದ ಕುಶಾಲ ಪೆರೆರಾ ಮೇಲೆ ಹೆಚ್ಚು ಅವಲಂಬಿತವಾಗಿದೆ. ಏಂಜೆಲೊ ಮ್ಯಾಥ್ಯೂಸ್‌, ಭಾನುಕಾ ರಾಜಪಕ್ಷ, ಧನುಷ್ಕಾ ಚೆನ್ನಾಗಿ ಆಡಿದರೆ ಭಾರತಕ್ಕೆ ಕಠಿಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT