ಶಾರ್ಜಾ (ಎಪಿ): ಅಫ್ಗಾನಿಸ್ತಾನ ತಂಡದವರು ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿ ಸ್ಮರಣೀಯ ಸಾಧನೆ ಮಾಡಿದೆ.
ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2–0 ರಲ್ಲಿ ಮುನ್ನಡೆ ಪಡೆದಿದೆ. ಅಫ್ಗಾನಿಸ್ತಾನ ತಂಡ, ಐಸಿಸಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಆರು ಸ್ಥಾನಗಳ ಒಳಗಿನ ತಂಡದ ವಿರುದ್ಧ ಸರಣಿ ಗೆದ್ದದ್ದು ಇದೇ ಮೊದಲು. ರಶೀದ್ ಖಾನ್ ನೇತೃತ್ವದ ತಂಡ ಮೊದಲ ಟಿ20 ಪಂದ್ಯವನ್ನು ಆರು ವಿಕೆಟ್‌ಗಳಿಂದ ಜಯಿಸಿತ್ತು.
ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಳಿಗೆ 130 ರನ್ ಗಳಿಸಿತು. ಇಮಾದ್ ವಸೀಂ (ಔಟಾಗದೆ 64, 57 ಎ.) ಮಾತ್ರ ಉತ್ತಮವಾಗಿ ಆಡಿದರು.
ಸಾಧಾರಣ ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ ಮೂರು ವಿಕೆಟ್ ಕಳೆದುಕೊಂಡು 133 ರನ್ ಗಳಿಸಿ ಗೆದ್ದಿತು. ರಹ್ಮಾನುಲ್ಲಾ ಗುರ್ಬಾಜ್ (44 ರನ್, 49 ಎ) ಮತ್ತು ಇಬ್ರಾಹಿಂ ಜದ್ರಾನ್ (38 ರನ್, 40 ಎ) ಗೆಲುವಿನ ಹಾದಿ ಸುಗಮಗೊಳಿಸಿದರು.
ರಶೀದ್ ಬಳಗದ ಗೆಲುವಿಗೆ ಕೊನೆಯ ಎರಡು ಓವರ್‌ಗಳಲ್ಲಿ 22 ರನ್‌ಗಳು ಬೇಕಿದ್ದವು. ನಜೀಬುಲ್ಲಾ ಜದ್ರಾನ್ ಮತ್ತು ಮೊಹಮ್ಮದ್ ನಬಿ ತಲಾ ಒಂದು ಸಿಕ್ಸರ್ ಹೊಡೆದು ಗೆಲುವಿಗೆ ಕಾರಣರಾದರು.
ಪಾಕಿಸ್ತಾನ ತಂಡವು ಈ ಸರಣಿಯಲ್ಲಿ ಪ್ರಮುಖರಿಗೆ ವಿಶ್ರಾಂತಿ ನೀಡಿದೆ.
ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 130 (ಇಮಾದ್ ವಸೀಂ ಔಟಾಗದೆ 64, ಶಾದಾಬ್ ಖಾನ್ 32, ಫಜಲ್‌ಹಕ್ ಫರೂಕಿ 19ಕ್ಕೆ 2) ಅಫ್ಗಾನಿಸ್ತಾನ 19.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 133 (ರಹ್ಮಾನುಲ್ಲಾ ಗುರ್ಬಾಜ್ 44, ಇಬ್ರಾಹಿಂ ಜದ್ರಾನ್ 38, ನಜೀಬುಲ್ಲಾ ಜದ್ರಾನ್ ಔಟಾಗದೆ 23, ಮೊಹಮ್ಮದ್ ನಬಿ ಔಟಾಗದೆ 14) ಫಲಿತಾಂಶ: ಅಫ್ಗಾನಿಸ್ತಾನಕ್ಕೆ 7 ವಿಕೆಟ್ ಗೆಲುವು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.