ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ ಸ್ಟೋಕ್ಸ್: 2016ರ ವಿಲನ್; 2019-2022ರ ಇಂಗ್ಲೆಂಡ್‌ ವಿಶ್ವಕಪ್ ಹೀರೊ

Last Updated 13 ನವೆಂಬರ್ 2022, 14:17 IST
ಅಕ್ಷರ ಗಾತ್ರ

ಮೆಲ್ಬರ್ನ್: ಕ್ರಿಕೆಟ್ ಇತಿಹಾಸದಲ್ಲೇ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳ ಸಾಲಿನಲ್ಲಿ ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ ಗುರುತಿಸಿಕೊಂಡಿದ್ದಾರೆ. ಏಕೆಂದರೆ ಆರು ವರ್ಷಗಳ ಹಿಂದೆ ಇದೇ ಇಂಗ್ಲೆಂಡ್ ತಂಡದ ಪಾಲಿಗೆ ವಿಲನ್ ಆಗಿದ್ದ ಸ್ಟೋಕ್ಸ್, ಈಗ ಕ್ರಿಕೆಟ್ ಜನಕ ರಾಷ್ಟ್ರಕ್ಕೆ ಎರಡು ಬಾರಿ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ವಹಿಸಿದ ಪಾತ್ರ ಗಮನಾರ್ಹವೆನಿಸಿದೆ.

ಆರು ವರ್ಷಗಳ ಹಿಂದೆ ಕೋಲ್ಕತ್ತದ ಈಡನ್ ಗಾರ್ಡನ್ ಮೈದಾನದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ 19 ರನ್ ಡಿಫೆಂಡ್ ಮಾಡಲು ಸ್ಟೋಕ್ಸ್‌ಗೆ ಸಾಧ್ಯವಾಗಿರಲಿಲ್ಲ.

ಇದು ವಿಶ್ವಕಪ್ ನಿರೀಕ್ಷೆಯಲ್ಲಿದ್ದ ಆಂಗ್ಲ ತಂಡದ ಅಭಿಮಾನಿಗಳ ಹೃದಯವನ್ನು ಛಿದ್ರಗೊಳಿಸಿತ್ತು. ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದ ಬೆನ್ ಸ್ಟೋಕ್ಸ್ ಸಹ ಮೈದಾನದಲ್ಲೇ ಕಣ್ಣೀರಿಟ್ಟರು.

ಆದರೆ ಅಲ್ಲಿಂದ ಬಳಿಕ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸ್ಟೋಕ್ಸ್ ಹಾಗೂ ಇಂಗ್ಲೆಂಡ್ ತಂಡ ಸಾಧಿಸಿರುವ ಮೈಲಿಗಲ್ಲು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ.

2019ರಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದ ಗೆಲುವಿನಲ್ಲಿ ಸ್ಟೋಕ್ಸ್ ಮಹತ್ವದ ಪಾತ್ರ ವಹಿಸಿದರು. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ ಸ್ಟೋಕ್ಸ್ ಏಕದಿನದಲ್ಲೂ ಇಂಗ್ಲೆಂಡ್‌ಗೆ ಚೊಚ್ಚಲ ವಿಶ್ವಕಪ್ ದೊರಕಿಸಿಕೊಟ್ಟರು. ಲಾರ್ಡ್ಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಸ್ಟೋಕ್ಸ್ ಔಟಾಗದೆ 84 ರನ್ ಗಳಿಸಿದ್ದರು.

ಈಗ 2022ರಲ್ಲೂ ಪಾಕಿಸ್ತಾನ ವಿರುದ್ಧ ಫೈನಲ್ ಪಂದ್ಯದ ಜಯದಲ್ಲಿ ಸ್ಟೋಕ್ಸ್ ಮಹತ್ವದ ಪಾತ್ರ ವಹಿಸಿದ್ದಾರೆ. ಅಜೇಯ ಅರ್ಧಶತಕ (52*) ಗಳಿಸಿರುವ ಸ್ಟೋಕ್ಸ್, ತಂಡವನ್ನು ಗೆಲುವಿನ ದಡ ಸೇರಿಸಿದರು.

ಪರಿಣಾಮ ಇಂಗ್ಲೆಂಡ್ ಟಿ20 ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು. ಅತ್ತ ಇಂಗ್ಲೆಂಡ್ ಕ್ರಿಕೆಟ್ ಅಧ್ಯಾಯದಲ್ಲಿ ಸ್ಟೋಕ್ಸ್ ಶ್ರೇಷ್ಠ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ.

ಅಷ್ಟೇ ಯಾಕೆ, ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಏಕಕಾಲಕ್ಕೆ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮೊದಲ ತಂಡವೆಂಬ ಕೀರ್ತಿಗೂ ಇಂಗ್ಲೆಂಡ್ ಪಾತ್ರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT