ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್ ಟೂರ್ನಿ: ಭಾರತಕ್ಕೆ ಇಂಗ್ಲೆಂಡ್‌ ಸವಾಲು ಮೀರುವ ಛಲ

ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಎದುರಾಗುವುದೇ ಭಾರತ?
Last Updated 9 ನವೆಂಬರ್ 2022, 18:28 IST
ಅಕ್ಷರ ಗಾತ್ರ

ಅಡಿಲೇಡ್: ಚುಟುಕು ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್‌ ಪ್ರವೇಶದ ಕನಸಿನೊಂದಿಗೆ ರೋಹಿತ್ ಪಡೆಯು ಗುರುವಾರ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ.

ಇಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಆಡಲಿದೆ.

2014ರ ವಿಶ್ವಕಪ್ ಟೂರ್ನಿಯ ನಂತರ ಭಾರತ ತಂಡವು ಫೈನಲ್‌ ಪ್ರವೇಶಿಸಿಲ್ಲ. ಅಲ್ಲದೇ 2013ರ ನಂತರ ಯಾವುದೇ ಐಸಿಸಿ ಟ್ರೋಫಿಯನ್ನೂ ಜಯಿಸಿಲ್ಲ. ಈ ಎರಡೂ ಕನಸುಗಳನ್ನು ನನಸು ಮಾಡಿಕೊಳ್ಳುವ ಅವಕಾಶ ಇಲ್ಲಿದೆ.

ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ನೋಟ ರೋಹಿತ್ ಅವರತ್ತ ಇದೆ. ಅವರಿಗೆ ಇದರ ಅರಿವು ಕೂಡ ಚೆನ್ನಾಗಿಯೇ ಇದೆ. ಆದರೆ ಬುಧವಾರ ಸುದ್ದಿಗೋಷ್ಠಿಗೆ ಬಂದ ರೋಹಿತ್ ಮುಖದಲ್ಲಿ ಒತ್ತಡದ ಭಾವವಿರಲಿಲ್ಲ. ಕಿರುನಗೆಯೊಂದಿಗೆ ಬಂದು ಕುಳಿತ ಅವರು ಶಾಂತಚಿತ್ತರಾಗಿಯೇ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಅವರ ಹಾವಭಾವಗಳಲ್ಲಿ ನಿರಾಳತೆ ಎದ್ದುಕಂಡಿತು.

ಒಂದು ವರ್ಷದ ಹಿಂದೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೋಹಿತ್ ತಂಡದ ಧ್ಯೇಯೋದ್ದೇಶವನ್ನು ಸ್ಪಷ್ಟವಾಗಿ ರೂಪಿಸಿದ್ದಾರೆ. ಇದರಿಂದಾಗಿ ಅನುಭವಿ ಬ್ಯಾಟರ್‌ಗಳು ಸರಿಯಾದ ಸಂದರ್ಭದಲ್ಲಿ ಲಯಕ್ಕೆ ಮರಳಿದ್ದಾರೆ. ಹೋದ ವರ್ಷ ತಂಡವು ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಆದರೆ ಈಗ ಹಾಗಿಲ್ಲ. ಸೂರ್ಯಕುಮಾರ್ ಯಾದವ್ ಎಂಬ ವಿಶಿಷ್ಟ ಪ್ರತಿಭೆಯು ಬೆಳಗುತ್ತಿದೆ. ವಿರಾಟ್ ಕೂಡ ಅಮೋಘ ಲಯದಲ್ಲಿದ್ದಾರೆ. ಈ ಜೋಡಿಯ ಆಟವು ತಂಡದ ಬ್ಯಾಟಿಂಗ್‌ಗೆ ಅಗಾಧ ಬಲ ಒದಗಿಸಿದೆ. ಆರಂಭಿಕ ಬ್ಯಾಟರ್ ರೋಹಿತ್‌ಗೆ ಈ ಟೂರ್ನಿಯಲ್ಲಿ ತಮ್ಮ ಹೆಜ್ಜೆಗುರುತು ಮೂಡಿಸಲು ಈಗ ಹೆಚ್ಚು ಸಮಯವಿಲ್ಲ. ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳಲು ಇದು ಸಕಾಲ.

ಸೂಪರ್ 12ರ ಹಂತದಲ್ಲಿ ಭಾರತ ತಂಡವು ಹಲವು ನಾಟಕೀಯ ತಿರುವುಗಳನ್ನು ದಾಟಿ ಬಂದಿದೆ. ಮೊದಲ ಪಂದ್ಯದಲ್ಲಿ ಕೊಹ್ಲಿಯ ಅಬ್ಬರದಾಟದ ಬಲದಿಂದ ಪಾಕಿಸ್ತಾನವನ್ನು ಮಣಿಸಿತ್ತು. ಇದೇ ತಾಣದಲ್ಲಿ ಬಾಂಗ್ಲಾ ವಿರುದ್ಧ ಕಠಿಣ ಜಯ ಸಾಧಿಸಿತ್ತು. ದಕ್ಷಿಣ ಆಫ್ರಿಕಾ ಎದುರು ಮಾತ್ರ ಮಣಿದಿತ್ತು. ಮೊದಲ ಗುಂಪಿನಲ್ಲಿ ಇಂಗ್ಲೆಂಡ್ ಕೂಡ ಇಂತಹದೇ ಹಾದಿಯಲ್ಲಿ ನಡೆದುಬಂದಿದೆ. ಮೊದಲ ಪಂದ್ಯದಲ್ಲಿಯೇ ಐರ್ಲೆಂಡ್ ವಿರುದ್ಧ ಸೋತಿದ್ದ ತಂಡವು ನಂತರ ಪುಟಿದೆದ್ದು ನಾಲ್ಕರ ಘಟ್ಟಕ್ಕೆ ಪ್ರವೇಶಿಸಿದೆ.

ನಾಕೌಟ್ ಹಂತಗಳಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅಚ್ಚುಕಟ್ಟಾಗಿ ವಿನಿಯೋಗಿಸುವಲ್ಲಿ ಇಂಗ್ಲೆಂಡ್ ಮೊದಲಿನಿಂದಲೂ ಎತ್ತಿದ ಕೈ. ಟಿ20 ಮಾದರಿಯಲ್ಲಿ ಅಮೋಘ ಲಯ ಹೊಂದಿರುವ ನಾಯಕ ಬಟ್ಲರ್, ಬೆನ್ ಸ್ಟೋಕ್ಸ್, ಮೋಯಿನ್ ಅಲಿ ಪಂದ್ಯ ಗೆಲ್ಲಿಸಬಲ್ಲ ಸಮರ್ಥರು. ಗಾಯದಿಂದಾಗಿ ಹೊರಗುಳಿದಿರುವ ಜಾನಿ ಬೆಸ್ಟೊ ವರ ಕೊರತೆ ತಂಡಕ್ಕೆ ಇದೆ. ಡೇವಿಡ್ ಮಲಾನ್ ಕೂಡ ಇತ್ತೀಚೆಗೆಗಾಯಗೊಂಡಿದ್ದಾರೆ. ಆದರೆ ಈ ಪಂದ್ಯದಲ್ಲಿ ಫಿಟ್ ಆಗಿ ಕಣಕ್ಕಿಳಿಯುವರೇ ಕಾದುನೋಡಬೇಕು. ಅವರು ಆಡದಿದ್ದರೆ ಭಾರತಕ್ಕೆ ಅನುಕೂಲವಾಗುವ ಸಾಧ್ಯತೆ ಹೆಚ್ಚು.

ಇದೆಲ್ಲದರಾಚೆ. ಅಡಿಲೇಡ್ ಆಕಾಶವು ಶುಭ್ರವಾಗಿದೆ. ಕ್ರೀಡಾಂಗಣದ ಆಸನಗಳು ಭರ್ತಿಯಾಗುವುದು ಖಚಿತ. ಅಭಿಮಾನಿಗಳ ಅಬ್ಬರದ ಮುಂದೆ ಉಭಯ ತಂಡಗಳ ಆಟಗಾರರ ಹಣಾಹಣಿ ರಂಗೇರುವ ಎಲ್ಲ ನಿರೀಕ್ಷೆಗಳೂ ಇವೆ.

ತಂಡಗಳು:

ಭಾರತ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್,ರಿಷಭ್ ಪಂತ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ದೀಪಕ್ ಹೂಡಾ, ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್.

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ/ವಿಕೆಟ್‌ಕೀಪರ್), ಬೆನ್ ಸ್ಟೋಕ್ಸ್, ಅಲೆಕ್ಸ್ ಹೇಲ್ಸ್, ಹ್ಯಾರಿ ಬ್ರೂಕ್, ಫಿಲ್ ಸಾಲ್ಟ್, ಡೇವಿಡ್ ಮಲಾನ್, ಸ್ಯಾಮ್ ಕರನ್, ಮಾರ್ಕ್ ವುಡ್, ಮೋಯಿನ್ ಅಲಿ, ಆದಿಲ್ ರಶೀದ್, ಟೈಮಲ್ ಮಿಲ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಸ್ ವೋಕ್ಸ್, ಡೇವಿಡ್ ವಿಲಿ.

ಪಂದ್ಯ ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್, ಹಾಟ್‌ಸ್ಟಾರ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT