ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

T20 world cup: ಪಾಕ್‌ಗೆ ಅಮೆರಿಕದ ಆಘಾತ!

ಬಾಬರ್‌ ಬಳಗಕ್ಕೆ ಮುಖಭಂಗ
Published 7 ಜೂನ್ 2024, 16:23 IST
Last Updated 7 ಜೂನ್ 2024, 16:23 IST
ಅಕ್ಷರ ಗಾತ್ರ

ಡಲ್ಲಾಸ್‌: ಕ್ರಿಕೆಟ್‌ ಶಿಶುಗಳಾದ ಅಮೆರಿಕದ ತಂಡವು ಗುರುವಾರ ಸೂಪರ್‌ ಓವರ್‌ಗೆ ಬೆಳೆದ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲಿನ ಆಘಾತ ನೀಡಿ ಟಿ20 ವಿಶ್ವಕಪ್‌ ಇತಿಹಾಸದಲ್ಲೇ ಅಚ್ಚರಿಯ ಫಲಿತಾಂಶ ನೀಡಿತು. ಈ ರೋಚಕ ಪಂದ್ಯದ ಗೆಲುವಿನೊಡನೆ ಜಂಟಿ ಆತಿಥೇಯ ತಂಡ ‘ಎ’ ಗುಂಪಿನಲ್ಲಿ ಎರಡನೇ ಗೆಲುವು ದಾಖಲಿಸಿತು.

ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಪಾಕಿಸ್ತಾನ ಆರಂಭಿಕ ಕುಸಿತದಿಂದ ಚೇತರಿಸಿ 7 ವಿಕೆಟ್‌ಗೆ 159 ರನ್ ಗಳಿಸಿತು. ಆದರೆ ಆರಂಭದಿಂದಲೇ ಪಾಕ್‌ ವೇಗದ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಅಮೆರಿಕ ಕೊನೆಯ ಓವರಿನಲ್ಲಿ 14 ರನ್ ಹೊಡೆದು 3 ವಿಕೆಟ್‌ಗೆ 159 ರನ್ ಗಳಿಸಿತು. ಸೂಪರ್‌ ಓವರ್‌ನಲ್ಲಿ 1 ವಿಕೆಟ್‌ಗೆ 18 ರನ್ ಹೊಡೆದ ಅಮೆರಿಕ ನಂತರ ಪಾಕಿಸ್ತಾನವನ್ನು 1 ವಿಕೆಟ್‌ಗೆ 13 ರನ್‌ಗಳಿಗೆ ನಿಯಂತ್ರಿಸಿ ಸ್ಮರಣೀಯ ಜಯ ದಾಖಲಿಸಿತು.

‘ಮೊದಲ ಬಾರಿ ಆಡುತ್ತಿರುವ ನಾವು ಪಾಕಿಸ್ತಾನ ತಂಡವನ್ನು ಸೋಲಿಸಿದ್ದು ಬಹುದೊಡ್ಡ ಸಾಧನೆ’ ಎಂದು ಅರ್ಧ ಶತಕ ಹೊಡೆದು ‘ಪಂದ್ಯದ ಆಟಗಾರ’ನಾದ ನಾಯಕ ಮೊನಾಂಕ್ ಪಟೇಲ್ ಪ್ರತಿಕ್ರಿಯಿಸಿದರು.

‘ನಾವು ಆಡಿದ ರೀತಿಯಿಂದ ಹೆಮ್ಮೆ ಮೂಡಿದೆ. ಇಂದು ಮೊದಲ ಎಸೆತದಿಂದ ಕೊನೆಯ ಎಸೆತದವರೆಗೆ ಸಾಂಘಿಕ ಪ್ರಯತ್ನ’ ಎಂದರು.

ಪಾಕಿಸ್ತಾನ ಪವರ್‌ಪ್ಲೇ ಒಳಗೆ 3 ವಿಕೆಟ್‌ಗೆ 30 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಮೊಹಮ್ಮದ್ ರಿಜ್ವಾನ್‌ (9), ಉಸ್ಮಾನ್‌ ಖಾನ್ (3), ಫಖರ್ ಜಮಾನ್‌ (11) ಬಲು ಬೇಗ ನಿರ್ಗಮಿಸಿದರು. ನಾಯಕ ಬಾಬರ್ ಹೋರಾಟ ತೋರಿ 44 ರನ್ ಗಳಿಸಿದರು. ಕನ್ನಡಿಗ, ಎಡಗೈ ಸ್ಪಿನ್ನರ್ ನೊಸ್ತುಷ್‌ ಕೆಂಜಿಗೆ (30ಕ್ಕೆ3) ಅವರು ಮೂರು ವಿಕೆಟ್‌ ಪಡೆದು ಪಂದ್ಯ ಕೈಜಾರದಂತೆ ನೋಡಿಕೊಂಡರು. ಎಡಗೈ ವೇಗಿ ಶಾಹಿನ್ ಅಫ್ರಿದಿ ಎರಡು ಸಿಕ್ಸರ್ ಸೇರಿ ಅಜೇಯ 23 ರನ್ ಗಳಿಸಿದರು.

ದಕ್ಷಿಣ ಆಫ್ರಿಕ ಸಂಜಾತ ಆಂಡ್ರಿಯಾಸ್ ಗೌಸ್‌, ಪಾಕಿಸ್ತಾನ ವೇಗ ಮತ್ತು ಸ್ಪಿನ್ ದಾಳಿಯನ್ನು ಎದುರಿಸಿ ರೌಫ್‌ಗೆ ಬೌಲ್ಡ್ ಆಗುವ ಮೊದಲು 35 ರನ್ ಗಳಿಸಿದರು. ಮೊನಾಂಕ್ ಪಟೇಲ್ (50) ಹಾಗೂ ಆರನ್‌ ಜೋನ್ಸ್‌ (ಔಟಾಗದೇ 36) ತಂಡದ ಸವಾಲು ಮುಂದುವರಿಸಿದರು. ಅನುಭವಿ ಹ್ಯಾರಿಸ್‌ ರವೂಫ್‌ ಮಾಡಿದ ಕೊನೆಯ ಓವರ್‌ನಲ್ಲಿ ಗೆಲುವಿಗೆ 15 ರನ್ ಅಗತ್ಯವಿತ್ತು. ರೋಚಕವಾಗಿದ್ದ ಈ ಓವರ್‌ನ ಕೊನೆಯ ಎಸೆತ ಫುಲ್ಟಾಸ್‌ ಆಗಿದ್ದು ನಿತೀಶ್ ಕುಮಾರ್ ಮಿಡ್‌ಆಫ್‌ ಮೇಲಿಂದ ಬೌಂಡರಿ ಬಾರಿಸಿದರು. ಆದರೆ ತಂಡ 14 ರನ್ ಗಳಿಸಿದ್ದರಿಂದ ಸೂಪರ್‌ ಓವರ್‌ಗೆ ತಲುಪಿತು.

ಜೋನ್ಸ್ ಮತ್ತು ಹರ್ಮೀತ್ ಸಿಂಗ್ ಅವರು ಎಡಗೈ ವೇಗಿ ಮೊಹಮ್ಮದ್‌ ಆಮೀರ್‌ ಮಾಡಿದ್ದ ಸೂಪರ್‌ ಓವರ್‌ನಲ್ಲಿ 18 ರನ್ ಬಾರಿಸಿದರು. ಮೂರು ವೈಡ್‌ ಜೊತೆ ಓವರ್‌ ಥ್ರೊಗಳು ದುಬಾರಿಯಾದವು. ಸೌರಭ್ ನೇತ್ರಾವಲ್ಕರ್‌ ಮಾಡಿದ ಓವರಿನಲ್ಲಿ ಪಾಕಿಸ್ತಾನ 13 ರನ್‌ ಗಳಿಸಲಷ್ಟೇ ಶಕ್ತವಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT