ಶುಕ್ರವಾರ, ಡಿಸೆಂಬರ್ 3, 2021
20 °C

T20 WC: ನ್ಯೂಜಿಲೆಂಡ್ ವಿರುದ್ಧ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಗುಡ್ ನ್ಯೂಸ್!

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ಶುಭ ಸಮಾಚಾರ ದೊರಕಿದೆ.

ಗಾಯಮುಕ್ತಗೊಂಡಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬುಧವಾರ ಬೌಲಿಂಗ್ ಅಭ್ಯಾಸವನ್ನು ಪುನರಾರಂಭಿಸಿದ್ದಾರೆ. ಅಲ್ಲದೆ ನ್ಯೂಜಿಲೆಂಡ್ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಆಡುವುದು ಬಹುತೇಕ ಖಚಿತವೆನಿಸಿದೆ.

ಇದನ್ನೂ ಓದಿ: 

ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ ಹೀನಾಯ ಸೋಲಿಗೆ ಶರಣಾಗಿತ್ತು. ಇದೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆಯಲ್ಲಿ ಹಾರ್ದಿಕ್ ಭುಜ ನೋವಿಗೊಳಗಾಗಿದ್ದರು. ಅಲ್ಲದೆ ಫೀಲ್ಡಿಂಗ್ ಮಾಡಿರಲಿಲ್ಲ. ಬಳಿಕ ಸ್ಕ್ಯಾನ್ ವರದಿಯಲ್ಲಿ ಗಾಯವಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು.

ಈಗ ಹಲವು ತಿಂಗಳುಗಳ ಬಳಿಕ ಹಾರ್ದಿಕ್ ಪಾಂಡ್ಯ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸವನ್ನು ನಡೆಸಿದ್ದಾರೆ. ಹಾರ್ದಿಕ್ ಕೊನೆಯದಾಗಿ ಜುಲೈ ತಿಂಗಳಲ್ಲಿ ಶ್ರೀಲಂಕಾ ವಿರುದ್ಧ ಬೌಲಿಂಗ್ ನಡೆಸಿದ್ದರು. ಅದಾದ ಬಳಿಕ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದರೂ ಬೌಲಿಂಗ್ ಮಾಡಿರಲಿಲ್ಲ.

ಸ್ಟ್ರೆಂಗ್ ಆ್ಯಂಡ್ ಕಂಡೀಷನಿಂಗ್ ತರಬೇತುದಾರ ಸೋಹುಮ್ ದೇಸಾಯಿ ಹಾಗೂ ಫಿಸಿಯೊ ನಿತಿನ್ ಪಟೇಲ್ ಮಾರ್ಗದರ್ಶನದಲ್ಲಿ ಹಾರ್ದಿಕ್ ತರಬೇತಿಯನ್ನು ಆರಂಭಿಸಿದ್ದಾರೆ. ಓಟ ಸೇರಿದಂತೆ ಕೆಲವೊಂದು ಕಸರತ್ತನ್ನು ಮಾಡಿದರು.

ಬಳಿಕ ಸುಮಾರು 20 ನಿಮಿಷಗಳ ವರೆಗೆ ಬೌಲಿಂಗ್ ಅಭ್ಯಾಸವನ್ನು ನಡೆಸಿದರು. ಹಾರ್ದಿಕ್ ಪಾಂಡ್ಯ ಪ್ರಗತಿಯನ್ನು ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ಮಾರ್ಗದರ್ಶಕ ಮಹೇಂದ್ರ ಸಿಂಗ್ ಧೋನಿ ಕೂಡ ಪರಿಶೀಲಿಸಿದರು.

ಬೌಲಿಂಗ್ ಅಭ್ಯಾಸದ ಬಳಿಕ ಪ್ಯಾಡ್ ಕಟ್ಟಿದ ಹಾರ್ದಿಕ್, ಬ್ಯಾಟಿಂಗ್ ಅಭ್ಯಾಸವನ್ನು ನಡೆಸಿದರು. ಹಾರ್ದಿಕ್ ಪಾಂಡ್ಯ ಹಳೆಯ ಲಯಕ್ಕೆ ಮರಳುವುದರೊಂದಿಗೆ ಭಾರತವು ಆರನೇ ಬೌಲಿಂಗ್ ಆಯ್ಕೆಯೊಂದಿಗೆ ಜೊತೆಗೆ ಫಿನಿಶರ್ ಸಮಸ್ಯೆಯನ್ನು ಬಗೆಹರಿಸುವ ನಿರೀಕ್ಷೆಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು