ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತನಾಮ ಕ್ರಿಕೆಟ್ ಕೋಚ್ ತಾರಕ್ ಸಿನ್ಹಾ ಇನ್ನಿಲ್ಲ

Last Updated 6 ನವೆಂಬರ್ 2021, 15:38 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಕೆಟ್ ವಲಯದಲ್ಲಿ ‘ಉಸ್ತಾದ್‌ ಜೀ’ ಎಂದೇ ಖ್ಯಾತರಾಗಿದ್ದ ಕೋಚ್ ತಾರಕ್ ಸಿನ್ಹಾ(71) ಶನಿವಾರ ಬೆಳಿಗ್ಗೆ ನಿಧನರಾದರು.

ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಅವಿವಾಹಿತರಾಗಿದ್ದರು. ಅವರಿಗೆ ಸಹೋದರಿ ಇದ್ದಾರೆ.

ದೆಹಲಿಯ ಕ್ರಿಕೆಟ್ ವಲಯದಲ್ಲಿ ತಾರಕ್ ಸಿನ್ಹಾ ಅವರೆಂದರೆ ‘ದ್ರೋಣಾಚಾರ್ಯ’ನೇ ಆಗಿದ್ದರು. ಸಾನೆಟ್ ಕ್ರಿಕೆಟ್ ಕ್ಲಬ್‌ನ ಸಂಸ್ಥಾಪಕರಾಗಿದ್ದರು.

ಟೆಸ್ಟ್ ಆಟಗಾರರಾದ ಸುರೀಂದರ್ ಖನ್ನಾ, ಮನೋಜ್ ಪ್ರಭಾಕರ್, ದಿವಂಗತ ರಮಣ್ ಲಾಂಬಾ, ಅಜಯ್ ಶರ್ಮಾ, ಅತುಲ್ ವಾಸನ್, ಸಂಜೀವ್ ಶರ್ಮಾ, ಆಕಾಶ್ ಚೋಪ್ರಾ, ಕೆ.ಪಿ. ಭಾಸ್ಕರ್, ಶಿಖರ್ ಧವನ್, ಆಶಿಶ್ ನೆಹ್ರಾ ಮತ್ತು ಸದ್ಯ ಭಾರತ ತಂಡದ ವಿಕೆಟ್‌ಕೀಪರ್ ಆಗಿರುವ ರಿಷಭ್ ಪಂತ್, ಮಹಿಳಾ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ, ರುಮೇಲಿ ಧಾರ್ ಅವರು ಸಿನ್ಹಾ ಮಾರ್ಗದರ್ಶನದಲ್ಲಿ ಬೆಳೆದ ಪ್ರಮುಖರು.

ಇವರ ಕ್ಲಬ್‌ನಲ್ಲಿ ತರಬೇತಿ ಪಡೆದ ಹಲವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾರೆ.

‘ತಾರಕ್ ಸಿನ್ಹಾ ಅವರು ಶನಿವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಕೊನೆಯುಸಿರೆಳೆದರು ಎಂದು ತಿಳಿಸಲು ಹೃದಯ ಭಾರವಾಗಿದೆ. ಕಳೆದೆರಡು ತಿಂಗಳಿನಿಂದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು’ ಎಂದು ಸಾನೆಟ್ ಕ್ಲಬ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಐದು ದಶಕಗಳಿಂದ ಅವರು ಕ್ರಿಕೆಟ್ ತರಬೇತಿ ನೀಡುತ್ತಿದ್ದರು. ರಿಷಭ್ ದೆಹಲಿಗೆ ಕ್ರಿಕೆಟ್ ತರಬೇತಿಗೆ ಬಂದಾಗ ಗುರುದ್ವಾರದಲ್ಲಿ ಉಳಿದುಕೊಂಡಿದ್ದರು. ಆರ್ಥಿಕ ಸಂಕಷ್ಟದಲ್ಲಿದ್ದ ರಿಷಭ್‌ಗೆ ಉಳಿಯಲು ಬಾಡಿಗೆ ಮನೆ ವ್ಯವಸ್ಥೆ ಮಾಡಿದ್ದ ಸಿನ್ಹಾ, 10 ಮತ್ತು 12ನೇ ತರಗತಿಯ ಪರೀಕ್ಷೆಗಳನ್ನು ಬರೆಯಲೂ ಅನುಕೂಲ ಮಾಡಿಕೊಟ್ಟಿದ್ದರು. ತಮ್ಮ ಸಹಾಯಕ ಕೋಚ್ ದೇವೆಂದರ್ ಶರ್ಮಾ ಅವರು ರಿಷಭ್ ತರಬೇತಿಗೆ ವ್ಯವಸ್ಥೆ ಮಾಡಿದ್ದರು.

‘ನನಗೆ ಪಿತೃಸಮಾನರಾಗಿದ್ದರು ತಾರಕ್ ಸರ್’ ಎಂದು ರಿಷಭ್ ಕಂಬನಿ ಮಿಡಿದಿದ್ದಾರೆ.

ರಿಷಭ್ ರಂತಹ ಹಲವಾರು ಮಕ್ಕಳಿಗೆ ಕ್ರಿಕೆಟ್ ಮತ್ತು ಶಿಕ್ಷಣದಲ್ಲಿ ಬೆಳಗಲು ದಾರಿ ಮಾಡಿಕೊಟ್ಟವರು ಸಿನ್ಹಾ. 2018ರಲ್ಲಿ ಅವರಿಗೆ ಜೀವಮಾನ ಸಾಧನೆಗಾಗಿ ದ್ರೋಣಾಚಾರ್ಯ ಪುರಸ್ಕಾರ ಸಂದಿದೆ.

‘ಕಾರ್ಪೊರೆಟ್ ಮಾದರಿಯ ಕೋಚ್ ಅವರಾಗಿರಲಿಲ್ಲ. ಸಾಂಪ್ರದಾಯಿಕ ಪದ್ಧತಿ ಮತ್ತು ಮೌಲ್ಯಗಳನ್ನು ಹೊಂದಿ್ದ್ದರು. ತಮ್ಮ ವೃತ್ತಿಯನ್ನು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿದ್ದರು. ಎಂದಿಗೂ ಹಣಕ್ಕಾಗಿ ದುಡಿಯಲಿಲ್ಲ’ ಎಂದು ಹಲವು ವಿದ್ಯಾರ್ಥಿಗಳು ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT