ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL ಮೂರನೇ ಟಿ20 ಪಂದ್ಯ: ಶ್ರೇಯಸ್ ’ಹ್ಯಾಟ್ರಿಕ್’; ಭಾರತ ಕ್ಲೀನ್‌ಸ್ವೀಪ್

Last Updated 28 ಫೆಬ್ರುವರಿ 2022, 1:11 IST
ಅಕ್ಷರ ಗಾತ್ರ

ಧರ್ಮಶಾಲಾ:ಸರಣಿಯಲ್ಲಿ ಸತತ ಮೂರನೇ ಅರ್ಧಶತಕ ಬಾರಿಸಿದ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಬಲದಿಂದ ಭಾರತ ತಂಡವು ಶ್ರೀಲಂಕಾ ವಿರುದ್ಧ ಕ್ಲೀನ್‌ಸ್ವೀಪ್ ಸಾಧನೆ ಮಾಡಿತು.

ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ಕೆಟ್ಟ ಆರಂಭ ಕಂಡಿತು. 60 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಶ್ರೀಲಂಕಾ ತಂಡಕ್ಕೆ ನಾಯಕ ದಸುನ್ ಶನಕಾ (ಔಟಾಗದೆ 74; 38ಎ, 4X9, 6X2) ಆಸರೆಯಾದರು. ಅದರಿಂದಾಗಿ ಶ್ರೀಲಂಕಾ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 146 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 16.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 148 ರನ್‌ ಗಳಿಸಿತು. 3–0ಯಿಂದ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿತು. ಸತತ 12ನೇ ಟಿ20 ಪಂದ್ಯ ಗೆದ್ದ ಸಾಧನೆ ಮಾಡಿತು.

ಗುರಿ ಬೆನ್ನಟ್ಟಿದ ಭಾರತ ತಂಡದ ಆರಂಭವೂ ಚೆನ್ನಾಗಿರಲಿಲ್ಲ. 51 ರನ್‌ಗಳಿಗೇ ಎರಡು ವಿಕೆಟ್ ಕಳೆದುಕೊಂಡಿತು. ಆದರೆ, ಅಮೋಘ ಲಯದಲ್ಲಿರುವ ಮುಂಬೈಕರ್ ಶ್ರೇಯಸ್ (ಅಜೇಯ 73; 45ಎ, 9ಬೌಂಡರಿ, 1ಸಿಕ್ಸರ್) ಮತ್ತೆ ಮಿಂಚಿದರು. ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ರವೀಂದ್ರ ಜಡೇಜ (ಅಜೇಯ22) ಕೂಡ ಮಿಂಚಿದರು. ಇದರಿಂದಾಗಿ ತಂಡವು 19 ಎಸೆತಗಳು ಬಾಕಿಯಿರುವಾಗಲೇ ಜಯಿಸಿತು. ಶ್ರೇಯಸ್ ಈ ಸರಣಿಯಲ್ಲಿ 200ಕ್ಕೂ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದರು.

ಶನಕಾ ಅರ್ಧಶತಕ: ಮೊದಲ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಗುಣತಿಲಕ ಕ್ಲೀನ್‌ಬೌಲ್ಡ್ ಆಗಿ ನಿರ್ಗಮಿಸಿದರು. ಎರಡನೇ ಓವರ್‌ನಲ್ಲಿ ಆವೇಶ್ ಖಾನ್ ಎಸೆತದಲ್ಲಿ ಚರಿತಾ ಅಸಲಂಕಾ ಔಟಾದರು. ಮೂರನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಆವೇಶ್ ತಮ್ಮ ಇನ್ನೊಂದು ಓವರ್‌ನಲ್ಲಿ ಪಥುಮ್ ನಿಸಾಂಕಾ ಅವರ ವಿಕೆಟ್ ಕೂಡ ಕಬಳಿಸಿದರು.

ಲಂಕೆಯ ಗಾಯದ ಮೇಲೆ ಬರೆ ಎಳೆದ ಯುವ ಸ್ಪಿನ್ನರ್ ರವಿ ಬಿಷ್ಣೋಯಿ ಕೂಡ ಜೆನಿತ್ ಲಿಯಾನಗೆ ವಿಕೆಟ್ ಕಿತ್ತರು. ಸ್ವಲ್ಪ ಚೆನ್ನಾಗಿ ಆಡುತ್ತಿದ್ದ ಚಾಂಡಿಮಲ್ (22 ರನ್) ಅವರು ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ವೆಂಕಟೇಶ್ ಅಯ್ಯರ್ ಪಡೆದ ಆಕರ್ಷಕ ಕ್ಯಾಚ್‌ಗೆ ನಿರ್ಗಮಿಸಿದರು.

ಇದರಿಂದಾಗಿ ಲಂಕಾ ತಂಡವು 60 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸಿತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಶನಕಾ ಆತ್ಮವಿಶ್ವಾಸಭರಿತ ಆಟವಾಡಿದರು. ಭಾರತದ ಬೌಲರ್‌ಗಳನ್ನು ಕಾಡಿದರು. ಇನ್ನೊಂದು ಬದಿಯಲ್ಲಿದ್ದ ಚಾಮಿಕಾ ಕರುಣಾರತ್ನೆ (ಔಟಾಗದೆ 12; 19ಎ) ಯಾವುದೇ ಅವಸರದ ಹೊಡೆತಗಳಿಗೆ ಕೈಹಾಕದೇ ತಮ್ಮ ನಾಯಕನಿಗೆ ಸಂಪೂರ್ಣ ಬೆಂಬಲ ನೀಡಿದರು. ಶನಕಾ ಮಿಂಚಿನ ಹೊಡೆತಗಳನ್ನು ಕರುಣಾರತ್ನೆ ಕಣ್ತುಂಬಿಕೊಂಡರು. ಇಬ್ಬರೂ ಮುರಿಯದ ಆರನೇ ವಿಕೆಟ್ ಜೊತೆಯಾಟದಲ್ಲಿ 86 ರನ್‌ ಸೇರಿಸಿದರು. ಶನಕಾ ಎರಡು ಭರ್ಜರಿ ಸಿಕ್ಸರ್‌ಗಳನ್ನೂ ಸಿಡಿಸಿದರು.

ಅನುಭವಿಗಳಿಗೆ ವಿಶ್ರಾಂತಿ: ಭಾರತ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2–0ಯಿಂದ ಮುಂದಿದೆ. ಆದ್ದರಿಂದ ಅನುಭವಿ ಬೌಲರ್‌ಗಳಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಯಿತು.

ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬೂಮ್ರಾ, ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ವಿಶ್ರಾಂತಿ ಪಡೆದರು. ಆವೇಶ್ ಖಾನ್, ಚೈನಾಮನ್ ಬೌಲರ್ ಕುಲದೀಪ್ ಯಾದವ್ ಮತ್ತು ರವಿ ಬಿಷ್ಣೋಯಿ ಸ್ಥಾನ ಪಡೆದರು.

ಇಶಾನ್‌ ಕಿಶನ್ ಕಂಕಷನ್: ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರಿಗೂ ಮೂರನೇ ಟಿ20 ಪಂದ್ಯದ ಕಣಕ್ಕಿಳಿಯಲು ಅವಕಾಶ ನೀಡಲಿಲ್ಲ. ಶನಿವಾರ ನಡೆದಿದ್ದ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಲಾಹೀರು ಕುಮಾರ ಹಾಕಿದ್ದ ಬೌನ್ಸರ್ ಹೆಲ್ಮೆಟ್‌ಗೆ ಅಪ್ಫಳಿಸಿತ್ತು. ಇದರಿಂದಾಗಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT