ಸೋಮವಾರ, ಮಾರ್ಚ್ 30, 2020
19 °C

ಬದುಕು ಕ್ರಿಕೆಟ್ ಅನ್ನು ಮೀರಿದ್ದು: ಪಾಕಿಸ್ತಾನ ಸೂಪರ್ ಲೀಗ್‌ನಿಂದ ಹೊರನಡೆದ ಲಿನ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಾಹೋರ್: ಆಸ್ಟ್ರೇಲಿಯಾ ಕ್ರಿಕೆಟಿಗ ಕ್ರಿಸ್‌ ಲಿನ್‌ ಅವರು ಕೋವಿಡ್–19 ಭೀತಿಯಿಂದಾಗಿ ಪಾಕಿಸ್ತಾನ ಸೂಪರ್‌ ಲೀಗ್ (ಪಿಎಸ್‌ಎಲ್‌) ಟೂರ್ನಿಯಿಂದ ಹೊರನಡೆದಿದ್ದಾರೆ.

ಪಿಎಸ್‌ಎಲ್‌ನಲ್ಲಿ ಲಾಹೋರ್‌ ಕ್ವಲಂಡರ್ಸ್‌ ಪರ ಕಣಕ್ಕಿಳಿಯುವ ಲಿನ್‌, ‘ಪಿಎಸ್‌ಎಲ್‌ನಲ್ಲಿ ಇದ್ದಷ್ಟು ದಿನ ನನ್ನ ಸಮಯವನ್ನು ಸಂಪೂರ್ಣವಾಗಿ ಖುಷಿಯಿಂದ ಅನುಭವಿಸಿದ್ದೇನೆ. ಇದೀಗ ದುರದೃಷ್ಟದ ಪರಿಸ್ಥಿತಿಯಿಂದಾಗಿ ನಾನು ತವರಿಗೆ ತೆರಳಲು ನಿರ್ಧರಿಸಿದ್ದೇನೆ. ನಾವು ಬದುಕಲು ಕ್ರಿಕೆಟ್‌ಗಿಂತಲೂ ಮಿಗಿಲಾದ ಸಾಕಷ್ಟು ಅಂಶಗಳಿವೆ’ ಎಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಭಾನುವಾರ ನಡೆದ ಪಂದ್ಯದಲ್ಲಿ ಮುಲ್ತಾನ್‌ ಸುಲ್ತಾನ್‌ ತಂಡದ ವಿರುದ್ಧ ಕೇವಲ 55 ಎಸೆತಗಳನ್ನು ಎದುರಿಸಿದ್ದ ಲಿನ್‌, 113ರನ್‌ ಬಾರಿಸಿದ್ದರು. ಪಾಯಿಂಟ್‌ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಲಾಹೋರ್‌ಗೆ ಲಿನ್‌ ಅನುಪಸ್ಥಿತಿಯಿಂದ ಹಿನ್ನಡೆಯಾಗಲಿದೆ.

ಐಎಸ್‌ಎಲ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯಗಳು ನಾಳೆ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮುಲ್ತಾನ್‌ ಸುಲ್ತಾನ್‌–ಪೇಶಾವರ್‌ ಜಲ್ಮಿ  ಮತ್ತು ಎರಡನೇ ಪಂದ್ಯದಲ್ಲಿ ಕರಾಚಿ ಕಿಂಗ್ಸ್‌–ಲಾಹೋರ್‌ ಕ್ವಲಂಡರ್ಸ್‌ ತಂಡಗಳು ಸೆಣಸಲಿವೆ.

ಹಲವು ವಿದೇಶಿ ಆಟಗಾರರು ಈಗಾಗಲೇ ಪಿಎಸ್‌ಎಲ್‌ನಿಂದ ಹೊರನಡೆದಿದ್ದಾರೆ. ಇಂಗ್ಲೆಂಡ್‌ನ ಅಲೆಕ್ಸ್‌ ಹೇಲ್ಸ್‌, ಜೇಸನ್ ರಾಯ್‌, ತೈಮಲ್ ಮಿಲ್ಸ್‌, ಲಿಯಾಂ ಡಾಸನ್, ಲಿಯಾಮ್ ಲೀವಿಂಗ್‌ಸ್ಟೋನ್‌, ಲೆವಿಸ್‌ ಗ್ರೆಗೊರಿ, ಜೇಮ್ಸ್‌ ವಿನ್ಸ್‌, ವೆಸ್ಟ್‌ ಇಂಡೀಸ್‌ನ ಕಾರ್ಲೋಸ್‌ ಬ್ರಾಥ್‌ವೇಟ್‌, ದಕ್ಷಿಣ ಆಫ್ರಿಕಾದ ರೈಲೀ ರುಸ್ಸೋ, ಜೇಮ್ಸ್‌ ಫೊಸ್ಟರ್‌ (ಕೋಚ್) ವಾಪಸ್‌ ಆಗಿದ್ದರು.

ಲಿನ್‌ ಅವರು ಆಸ್ಟ್ರೇಲಿಯಾಗೆ ತೆರಳಿದ ಬಳಿಕ ಸರ್ಕಾರದ ನಿರ್ದೇಶನದಂತೆ 14 ದಿನಗಳ ಕಾಲ ಪ್ರತ್ಯೇಕವಾಗಿ ಉಳಿದು ಆರೋಗ್ಯ ತಪಾಸಣೆಗೆ ಒಳಗಾಗಲಿದ್ದಾರೆ.

ಕ್ರಿಸ್‌ ಲಿನ್‌ ಐಪಿಎಲ್‌ನಲ್ಲಿ ಸರ್‌ರೈಸರ್ಸ್‌ ಹೈದರಾಬಾದ್‌ ತಂಡ ಪರ ಆಡಲಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು, ಇದುವರೆಗೂ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. ಪ್ರಪಂಚದಾದ್ಯಂತ ಸುಮಾರು 1,20,000 ಸಾವಿರ ಜನರಿಗೆ ಸೋಂಕು ಇರುವುದು ದೃಢವಾಗಿದ್ದು, ಜಾಗತಿಕವಾಗಿ 5,700ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ.

ಕೋವಿಡ್‌–19ಗೆ ಭಾರತದಲ್ಲಿಯೂ ಇಬ್ಬರು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 114ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು