ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊ ಕ್ರೀಡಾ ಗ್ರಾಮದಲ್ಲಿ ಸಕಲ ಸೌಲಭ್ಯದ ಭರವಸೆ

ಹೊಸ ಮಾರ್ಗಸೂಚಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಭಾರತ ಒಲಿಂಪಿಕ್ ಸಂಸ್ಥೆ
Last Updated 20 ಜೂನ್ 2021, 11:50 IST
ಅಕ್ಷರ ಗಾತ್ರ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಭಾರತದ ಕ್ರೀಡಾಪಟುಗಳಿಗೆ ಕ್ರೀಡಾಗ್ರಾಮದಲ್ಲಿ ತರಬೇತಿಗೆ ಸಕಲ ಸೌಲಭ್ಯಗಳನ್ನು ಒದಗಿಸಲು ಆಯೋಜಕರು ಪ್ರಯತ್ನಪಡುತ್ತಿದ್ದಾರೆ ಎಂದು ಭಾರತ ಒಲಿಂಪಿಕ್‌ ಸಂಸ್ಥೆಗೆ (ಐಒಎ) ಕಳುಹಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.

ಟೋಕಿಯೊಗೆ ತೆರಳುವ ಮುನ್ನ ಒಂದು ವಾರ ಪ್ರತಿದಿನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದೂ ಟೋಕಿಯೊಗೆ ತಲುಪಿದ ನಂತರ ಮೂರು ದಿನ ಬೇರೆ ದೇಶದ ಯಾರೊಂದಿಗೂ ಮಾತನಾಡಬಾರದು ಎಂದು ಭಾರತದ ಪ್ರತಿನಿಧಿಗಳಿಗೆ ಜಪಾನ್ ಸರ್ಕಾರ ಸೂಚಿಸಿತ್ತು. ಇದಕ್ಕೆ ಐಒಎ ಅಸಮಾಧಾನ ವ್ಯಕ್ತಪಡಿಸಿತ್ತು.

ಭಾರತ ಒಳಗೊಂಡಂತೆ ಇತ್ತೀಚೆಗೆ ಕೋವಿಡ್‌–19ರ ವಿವಿಧ ರೂಪಾಂತರಿತ ವೈರಸ್‌ಗಳು ಕಂಡುಬಂದ 11 ದೇಶಗಳಿಂದ ತೆರಳುವ ಕ್ರೀಡಾಪಟುಗಳು ಮತ್ತು ಅಧಿಕಾರಿಗಳಿಗೆ ಸಂಬಂಧಿಸಿ ಕಠಿಣ ನಿಯಮಾವಳಿಗಳನ್ನು ಜಪಾನ್ ಸರ್ಕಾರ ಸಿದ್ಧಪಡಿಸಿದೆ. ಇದನ್ನು ಅನ್ಯಾಯ ಮತ್ತು ತಾರತಮ್ಯದ ನೀತಿ ಎಂದು ಬಣ್ಣಿಸಿದ ಐಒಎ ಕ್ರೀಡಾಪಟುಗಳ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುವ ಕ್ರಮಗಳನ್ನು ಕೈಬಿಡಬೇಕು ಎಂದು ಟೋಕಿಯೊ ಒಲಿಂಪಿಕ್ಸ್‌ ಆಯೋಜನಾ ಸಮಿತಿಯನ್ನು (ಟೊಕೊಗ್‌) ಕೋರಿತ್ತು.

ಇದಕ್ಕೆ ಉತ್ತರಿಸಿರುವಟೊಕೊಗ್‌ ‘ನಿಮ್ಮದು ಸೇರಿದಂತೆ 11 ರಾಷ್ಟ್ರಗಳ ಮತ್ತು ಒಟ್ಟಾರೆ 195 ದೇಶಗಳ ಕ್ರೀಡಾಪಟುಗಳಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸದ್ಯದಲ್ಲೇ ಒದಗಿಸಲಾಗುವದು’ ಎಂದು ವಿವರಿಸಿದೆ.

ಟೊಕೊಗ್ ಜೊತೆ ಮಾತುಕತೆ ನಡೆಸಿ ಕ್ರೀಡಾಪಟುಗಳಿಗಾಗಿ ಮಾಡಿಕೊಂಡಿರುವ ಸೌಲಭ್ಯಗಳ ಕುರಿತು ವಿವರ ಪಡೆದುಕೊಳ್ಳಲಾಗುವುದು ಎಂದು ಐಒಎ ಅಧ್ಯಕ್ಷ ನರಿಂದರ್ ಭಾತ್ರಾ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಒಂದನೇ ಗುಂಪಿನ ರಾಷ್ಟ್ರಗಳಿಂದ ಬರುವವರು ಏಳು ದಿನ ಸತತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಟೋಕಿಯೊ ಒಲಿಂಪಿಕ್ಸ್ ಆಯೋಜನಾ ಸಮಿತಿಯ ಸಲಹಾ ಸಮಿತಿ ಈಚೆಗೆ ಸೂಚಿಸಿತ್ತು. ಅಫ್ಗಾನಿಸ್ತಾನ, ಮಾಲ್ಡಿವ್ಸ್‌, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಒಂದನೇ ಗುಂಪಿಗೆ ಸೇರಿಸಲಾಗಿದೆ. ಸ್ಪರ್ಧೆಗಿಂತ ಐದು ದಿನ ಮೊದಲು ಕ್ರೀಡಾಗ್ರಾಮದಲ್ಲಿ ವರದಿ ಮಾಡಿಕೊಳ್ಳಬೇಕು ಎಂದೂ ಇಲ್ಲಿನ ಕ್ರೀಡಾಪಟುಗಳಿಗೆ ಸೂಚಿಸಲಾಗಿತ್ತು. ಹೊಸ ನಿಯಮಾವಳಿಯಂತೆ ಐದು ದಿನಗಳಲ್ಲಿ ಮೂರು ದಿನ ಅಥ್ಲೀಟ್‌ಗಳಿಗೆ ಅಭ್ಯಾಸಕ್ಕೆ ಅವಕಾಶ ಸಿಗುವುದಿಲ್ಲ. ಇದು ಸರಿಯಾದ ವಿಧಾನವಲ್ಲ. ಮೂರು ದಿನ ಕ್ರೀಡಾಪಟುಗಳು ಆಹಾರ ಸೇವಿಸುವುದಾದರೂ ಎಲ್ಲಿ ಎಂದು ಐಒಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT