ಸೋಮವಾರ, ಸೆಪ್ಟೆಂಬರ್ 23, 2019
24 °C
ರವಿ ಶಾಸ್ತ್ರಿ ಮೇಲೆ ಹೆಚ್ಚಿದ ಒತ್ತಡ

ಕೋಚ್‌ ಹುದ್ದೆ ರೇಸ್‌ನಲ್ಲಿ ಮೂಡಿ, ಜಯವರ್ಧನೆ

Published:
Updated:

ನವದೆಹಲಿ: ರವಿ ಶಾಸ್ತ್ರಿ ಅವರಿಗೆ ಮತ್ತೊಂದು ಅವಕಾಶ ನೀಡುವ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಒಲವು ತೋರಿದ್ದರೂ, ಭಾರತ ಕ್ರಿಕೆಟ್‌ ತಂಡದ ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಅನುಭವಿ ತರಬೇತುದಾರ ಟಾಮ್‌ ಮೂಡಿ ಒಳಗೊಂಡಂತೆ ಕೆಲವು ಅಂತರರಾಷ್ಟ್ರೀಯ ಮಾಜಿ ಆಟಗಾರರೂ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಗಳು ಬುಧವಾರ ತಿಳಿಸಿವೆ.

ಅರ್ಜಿ ಸಲ್ಲಿಸಲು ಮಂಗಳವಾರ (ಜುಲೈ 30) ಅಂತಿಮ ದಿನವಾಗಿತ್ತು. ಕಳೆದ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆದ  ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಭಾರತ ಸೋತ ನಂತರ ಹಾಲಿ ಕೋಚ್‌ ರವಿ ಶಾಸ್ತ್ರಿ ಮೇಲೆ ಒತ್ತಡ ಹೆಚ್ಚುತ್ತಿದೆ. ಇದರ ಮಧ್ಯೆಯೇ ಭಾರತ ತಂಡ, ವೆಸ್ಟ್‌ ಇಂಡೀಸ್‌ ಪ್ರವಾಸಕ್ಕೆ ತಯಾರಾಗುತ್ತಿದೆ. 

ಮೂಡಿ ಜೊತೆ, ನ್ಯೂಜಿಲೆಂಡ್‌ನ ಮಾಜಿ ಕೋಚ್‌ ಮೈಕ್‌ ಹೆಸ್ಸೊನ್‌, ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ, ಭಾರತ ತಂಡದ ಮಾಜಿ ಆಲ್‌ರೌಂಡರ್‌ ರಾಬಿನ್‌ ಸಿಂಗ್‌, ಜಿಂಬಾಬ್ವೆ ತಂಡದ ಕೋಚ್‌ ಲಾಲ್‌ಚಂದ್‌ ರಜಪೂತ್‌ ಅರ್ಜಿ ಸಲ್ಲಿಸಿದ ಪ್ರಮುಖರಲ್ಲಿ ಒಳಗೊಂಡಿದ್ದಾರೆ. ರಜಪೂತ್‌, ಹಿಂದೊಮ್ಮೆ ಭಾರತ ತಂಡದ ಮ್ಯಾನೇಜರ್ ಆಗಿದ್ದರು.

ಮಾಜಿ ಟೆಸ್ಟ್‌ ಆಟಗಾರ ಪ್ರವೀಣ್‌ ಆಮ್ರೆ ಬ್ಯಾಟಿಂಗ್‌ ಕೋಚ್‌ ಹುದ್ದೆ ಮೇಲೆ, ದಕ್ಷಿಣ ಆಫ್ರಿಕದ ಜಾಂಟಿ ರೋಡ್ಸ್‌ ಫೀಲ್ಡಿಂಗ್‌ ಕೋಚ್‌ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಶಾಸ್ತ್ರಿ, ಕೋಚ್‌ ಹುದ್ದೆಗೆ ಫೆವರೀಟ್‌ ಆಗಿದ್ದರೂ, ಬದಲಾವಣೆ ತಂಡಕ್ಕೆ ಒಳ್ಳೆಯದು ಎಂದು ರಾಬಿನ್‌ ಸಿಂಗ್‌ ಆಂಗ್ಲ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಶಾಸ್ತ್ರಿ ಅವರ ಕರಾರಿನ ಅವಧಿ ವಿಶ್ವಕಪ್‌ ಕೊನೆಯವರೆಗೆ ಇತ್ತು. ಆದರೆ ವೆಸ್ಟ್ ಇಂಡೀಸ್‌ ಪ್ರವಾಸದ ಕಾರಣ 45 ದಿನಗಳ ಕಾಲ ವಿಸ್ತರಿಸಲಾಗಿದೆ.

ಮಾಜಿ ಆಟಗಾರರಾದ ಕಪಿಲ್‌ ದೇವ್‌, ಅಂಶುಮನ್‌ ಗಾಯಕ್‌ವಾಡ್‌ ಮತ್ತು ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರನ್ನೊಳಗೊಂಡ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ), ತಂಡದ ಕೋಚ್‌ ಅವರನ್ನು ಆಯ್ಕೆ ಮಾಡಲಿದೆ. 

ಶಾಸ್ತ್ರಿ ಅವರ ಜೊತೆ ತಂಡದ ಒಡನಾಟ ಅತ್ಯುತ್ತಮವಾಗಿದೆ. ಅವರೇ ಮುಂದುವರಿದರೆ ಸಂತಸವಾಗುತ್ತದೆ ಎಂದು ಹೇಳುವ ಮೂಲಕ ನಾಯಕ ವಿರಾಟ್‌ ಕೊಹ್ಲಿ, ತಮ್ಮ ಆಯ್ಕೆಯನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸಂದರ್ಶನ ಸಂದರ್ಭದಲ್ಲಿ ಶಾಸ್ತ್ರಿ, ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುತ್ತಾರೆ. ಅವರು ‘ವಿಡಿಯೊ ಕಾಲ್‌’ ಮೂಲಕ ಸಿಎಸಿ ಸದಸ್ಯರ ಜೊತೆ ಮಾತನಾಡಬೇಕಾಗುತ್ತದೆ.

ಅನಿಲ್‌ ಕುಂಬ್ಳೆ ಪದತ್ಯಾಗದ ನಂತರ, 2017ರಿಂದ ರವಿಶಾಸ್ತ್ರಿ ಅವರು ಭಾರತ ತಂಡದ ಕೋಚ್‌ ಆಗಿದ್ಧಾರೆ. 2014 ರಿಂದ 16ರವರೆಗೆ ಅವರು ತಂಡದ ನಿರ್ದೇಶಕರಾಗಿದ್ದರು.

Post Comments (+)