ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಸರಣಿ: ತಾಲೀಮು ಆರಂಭಿಸಿದ ಭಾರತದ ಆಟಗಾರರು

ಕೋವಿಡ್ ಟೆಸ್ಟ್‌ ಪಾಸು
Last Updated 14 ನವೆಂಬರ್ 2020, 13:19 IST
ಅಕ್ಷರ ಗಾತ್ರ

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಸುದೀರ್ಘ ಸರಣಿಗೆ ಸಜ್ಜಾಗುತ್ತಿರುವ ಭಾರತ ಕ್ರಿಕೆಟ್‌ ತಂಡದ ಆಟಗಾರರು, ಶನಿವಾರ ಅಭ್ಯಾಸಕ್ಕಾಗಿ ಅಂಗಣಕ್ಕಿಳಿದರು. ತಂಡದ ಎಲ್ಲ ಆಟಗಾರರು ಕೋವಿಡ್‌–19 ಪರೀಕ್ಷೆಗೆ ಒಳಗಾಗಿದ್ದು, ವರದಿ ನೆಗೆಟಿವ್‌ ಬಂದಿವೆ.

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಇತ್ತೀಚೆಗೆ ಮುಗಿದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಹಾರ್ದಿಕ್‌ ಪಾಂಡ್ಯ, ಪೃಥ್ವಿ ಶಾ, ಮೊಹಮ್ಮದ್‌ ಶಮಿ ಸೇರಿದಂತೆ ಹಲವರು ಸಿಡ್ನಿ ಒಲಿಂಪಿಕ್‌ ಪಾರ್ಕ್‌ನ ಬ್ಲ್ಯಾಕ್‌ಟೌನ್‌ನಲ್ಲಿ ತಾಲೀಮು ನಡೆಸಿದರು.

ಆಟಗಾರರು ಅಭ್ಯಾಸ ಹಾಗೂ ಜಿಮ್‌ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಸ್ಪಿನ್ನರ್‌ ಕುಲದೀಪ್‌ ಯಾದವ್‌, ವೇಗಿ ಉಮೇಶ್‌ ಯಾದವ್‌, ಆಲ್‌ರೌಂಡರ್‌ ರವೀಂದ್ರ ಜಡೇಜ, ಶಾರ್ದೂಲ್‌ ಠಾಕೂರ್‌ ಹಾಗೂ ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ವರ್‌ ಪೂಜಾರ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. ಐಪಿಎಲ್‌ನಲ್ಲಿ ತಮ್ಮ ಯಾರ್ಕರ್ ಎಸೆತಗಳ ಮೂಲಕ ಗಮನಸೆಳೆದಿದ್ದ ತಂಗರಸು ನಟರಾಜನ್‌ ಹಾಗೂ ದೀಪಕ್‌ ಚಾಹರ್‌ ಕೂಡ ಈ ವೇಳೆ ಇದ್ದರು.

ಭಾರತ ತಂಡದ ಆಟಗಾರರು ಸದ್ಯ 14 ದಿನಗಳ ಪ್ರತ್ಯೇಕವಾಸಲ್ಲಿದ್ದಾರೆ. ಪ್ರಾಥಮಿಕ ಕೋವಿಡ್‌–19 ಟೆಸ್ಟ್‌ ಪೂರ್ಣಗೊಳಿಸಿದ್ದಾರೆ.

ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಕೂಡ ಕುಲದೀಪ್‌ ಅವರೊಂದಿಗೆ ಇರುವ ಚಿತ್ರವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ಸಹೋದರ ಕುಲದೀಪ್‌ ಅವರೊಂದಿಗೆ; ದೇಶಕ್ಕಾಗಿ ಆಡಲು‌‌ ಮರಳಿದ್ದೇನೆ‘ ಎಂದು ಬರೆದುಕೊಂಡಿದ್ದಾರೆ.

ಭಾರತ ತಂಡವು ಆತಿಥೇಯ ತಂಡದ ವಿರುದ್ಧ ತಲಾ ಮೂರು ಪಂದ್ಯಗಳ ಟ್ವೆಂಟಿ–20 ಹಾಗೂ ಏಕದಿನ ಸರಣಿ ಮತ್ತು ನಾಲ್ಕು ಪಂದ್ಯಗಳ ಬಾರ್ಡರ್‌–ಗಾವಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಆಡಲಿದೆ. ನವೆಂಬರ್‌ 27ರಂದು ಏಕದಿನ ಪಂದ್ಯದ ಮೂಲಕ ಸೀಮಿತ ಓವರ್‌ಗಳ ಸರಣಿ ಆರಂಭವಾಗಲಿದೆ.

ಅಡಿಲೇಡ್‌ನಲ್ಲಿ ಡಿಸೆಂಬರ್‌ 17ರಿಂದ ಪಿಂಕ್‌ ಬಾಲ್‌ ಪಂದ್ಯದ ಮೂಲಕ ಟೆಸ್ಟ್‌ ಸರಣಿ ನಡೆಯಲಿದೆ. ಆ ಬಳಿಕ ಮೆಲ್ಬರ್ನ್‌ನಲ್ಲಿ ಬಾಕ್ಸಿಂಗ್‌ ಡೇ ಟೆಸ್ಟ್‌ (ಡಿಸೆಂಬರ್‌ 26ರಿಂದ 30), ಸಿಡ್ನಿ (ಜನವರಿ 7–11) ಹಾಗೂ ಗಾಬಾದಲ್ಲಿ (ಜನವರಿ 15–19)ಪಂದ್ಯಗಳು ನಡೆಯಲಿವೆ.

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಮೊದಲ ಪಂದ್ಯ ಆಡಿದ ಬಳಿಕ ತಾಯ್ನಾಡಿಗೆ ವಾಪಸಾಗಲಿದ್ದಾರೆ. ಜನವರಿಯಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅವರು ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಇರಲು ಬಯಸಿದ್ದು, ಬಿಸಿಸಿಐ ರಜೆ ಅವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT