ಗುರುವಾರ , ನವೆಂಬರ್ 26, 2020
21 °C

ವಿಶ್ವಕಪ್‌ ಗೆದ್ದ ಕ್ರಿಕೆಟಿಗ ತನ್ಮಯ್ ಶ್ರೀವಾಸ್ತವ ನಿವೃತ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: 2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗಳಿಸಿದ್ದ ಭಾರತ ತಂಡದಲ್ಲಿದ್ದ ಬ್ಯಾಟ್ಸ್‌ಮನ್ ತನ್ಮಯ್ ಶ್ರೀವಾಸ್ತವ ಎಲ್ಲ ಮಾದರಿಯ ಕ್ರಿಕೆಟ್‌ಗೆ ಶನಿವಾರ ವಿದಾಯ ಹೇಳಿದ್ದಾರೆ. ಬದುಕಿನ ಹಾದಿಯಲ್ಲಿ ಬೇರೊಂದು ಯೋಜನೆಯಲ್ಲಿ ತೊಡಗಿಸಿಕೊಳ್ಳಲು ಸಜ್ಜಾಗುತ್ತಿರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ. 30 ವರ್ಷದ ತನ್ಮಯ್ ಎಡಗೈ ಬ್ಯಾಟ್ಸ್‌ಮನ್ ಆಗಿದ್ದಾರೆ.

’ಸಾಕಷ್ಟು ಮಧುರ ನೆನಪುಗಳನ್ನು ಕೊಡುಗೆಯಾಗಿ ನೀಡಿದ, ಅನೇಕ ಗೆಳೆಯರನ್ನು ಸಂಪಾದಿಸಲು ದಾರಿಯಾದ ಮತ್ತು ಖ್ಯಾತಿ ತಂದುಕೊಟ್ಟ ಕ್ರಿಕೆಟ್‌ಗೆ ವಿದಾಯ ಹೇಳುವ ಸಮಯ ಸಮೀಪಿಸಿದೆ. ಜೂನಿಯರ್ ಕ್ರಿಕೆಟ್ ಮತ್ತು ರಣಜಿ ಟ್ರೋಫಿಯಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದೇನೆ. 2008ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿಹಿಡಿದದ್ದು ಬಹುದೊಡ್ಡ ಸಾಧನೆ‘ ಎಂದು ಕಾನ್ಪುರದ ಈ ಆಟಗಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಸುದೀರ್ಘ ಬರಹದಲ್ಲಿ ಅವರು ಕ್ರಿಕೆಟ್ ಜೀವನದುದ್ದಕ್ಕೂ ಬೆಂಬಲ ನೀಡಿದ ತಂದೆ–ತಾಯಿ, ಪತ್ನಿ, ಕೋಚ್‌ಗಳು ಮತ್ತು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆಯ ಆಡಳಿತಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

’ಅಂಗಣದ ಒಳಗೆ ಮತ್ತು ಹೊರಗೆ ಕ್ರಿಕೆಟ್‌ಗೆ ಸಂಬಂಧಿಸಿ ಸಾಕಷ್ಟು ಸಮಯ ಕಳೆದಿದ್ದೇನೆ. ಆದ್ದರಿಂದ ನಿವೃತ್ತಿ ಕೇವಲ ಔಪಚಾರಿಕವಾಗಿದ್ದು ಕ್ರಿಕೆಟ್ ನ‌ನ್ನೊಂದಿಗೆ ಸದಾ ಇರುತ್ತದೆ‘ ಎಂದು ಅವರು ಹೇಳಿದ್ದಾರೆ.  

90 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ತನ್ಮಯ್ 4918 ರನ್ ಕಲೆ ಹಾಕಿದ್ದು 10 ಶತಕಗಳು ಮತ್ತು 27 ಅರ್ಧಶತಕಗಳು ಇದರಲ್ಲಿ ಒಳಗೊಂಡಿವೆ. ದೇಶಿ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ ಪರ ಆಡಿದ್ದ ಅವರು ನಂತರ ಉತ್ತರಾಖಂಡ ತಂಡದ ನಾಯಕರಾಗಿದ್ದರು. ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಮತ್ತು ಕೊಚ್ಚಿ ಟಸ್ಕರ್ಸ್‌ ಪರವಾಗಿ ಕಣಕ್ಕೆ ಇಳಿದಿದ್ದಾರೆ. 

ಮಲೇಷ್ಯಾದಲ್ಲಿ 2008ರಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ತನ್ಮಯ್ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. 262 ರನ್ ಕಲೆ ಹಾಕಿದ್ದ ಅವರು ಫೈನಲ್‌ನಲ್ಲಿ 43 ರನ್ ಗಳಿಸಿ ತಂಡ ಪ್ರಶಸ್ತಿ ಗಳಿಸಲು ಪ್ರಮುಖ ಕಾರಣರಾಗಿದ್ದರು. ಆಗ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು