ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Under 19 ಕ್ರಿಕೆಟ್ | ಮಗನ ಆಟ ವೀಕ್ಷಿಸಿದ ರಾಹುಲ್‌ ದ್ರಾವಿಡ್ ದಂಪತಿ

ಧೀರಜ್‌ ದಾಳಿ: ಕರ್ನಾಟಕದ ಬಿಗಿ ಹಿಡಿತ
Published 2 ಡಿಸೆಂಬರ್ 2023, 3:35 IST
Last Updated 2 ಡಿಸೆಂಬರ್ 2023, 3:35 IST
ಅಕ್ಷರ ಗಾತ್ರ

ಮೈಸೂರು: ಮಧ್ಯಮ ವೇಗಿ ಇಶಾನ್‌ ಎಸ್. (49ಕ್ಕೆ3) ಹಾಗೂ ಆಫ್‌ ಸ್ಪಿನ್ನರ್‌ ಧೀರಜ್‌ ಗೌಡ (62ಕ್ಕೆ 3) ಅವರ ಉತ್ತಮ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡ ಶುಕ್ರವಾರ ಆರಂಭವಾದ ಕೂಚ್‌ ಬಿಹಾರ್‌ ಟ್ರೋಫಿ 19 ವರ್ಷದೊಳಗಿನವರ ಟೂರ್ನಿಯ ಪಂದ್ಯದಲ್ಲಿ ಉತ್ತರಾಖಂಡದ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಉತ್ತರಾಖಂಡ ತಂಡಕ್ಕೆ ನಿಗದಿತ 90 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 232 ರನ್‌ ಗಳಿಸಲಷ್ಟೇ ಸಾಧ್ಯವಾಯಿತು.

13 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಕುಸಿತ ಕಂಡ ಉತ್ತರಾಖಂಡ ತಂಡಕ್ಕೆ ನಾಯಕ ಆರವ್‌ ಮಹಾಜನ್‌ (127, 18x4) ಶತಕ ಬಾರಿಸಿ ಆಸರೆಯಾದರು. 82.7 ಓವರ್‌ಗಳವರೆಗೂ ಕ್ರೀಸಿನಲ್ಲಿ ಹೋರಾಟ ನಡೆಸಿದರು. ಅವರಿಗೆ ವಿಕೆಟ್‌ ಕೀಪರ್ ಸಂಸ್ಕಾರ್ ರಾವತ್ (43) ಕೈಜೋಡಿಸಿದರು. ಈ ಜೋಡಿಯ 94 ರನ್‌ಗಳ ಜೊತೆಯಾಟದಿಂದ ತಂಡ ಚೇತರಿಸಿಕೊಂಡಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಉತ್ತರಾಖಂಡ 90 ವಿಕೆಟ್‌ಗೆ 9 ವಿಕೆಟ್‌ಗೆ 232 (ಆರವ್‌ ಮಹಾಜನ್‌ 127, ಸಂಸ್ಕಾರ್ ರಾವತ್ 43, ಯೋಗೇಶ್ 29, ಇಶಾನ್‌ ಎಸ್. 49ಕ್ಕೆ3, ಧೀರಜ್‌ ಗೌಡ 62ಕ್ಕೆ3, ಸಮರ್ಥ್‌ ಎನ್. 17ಕ್ಕೆ2).

ದ್ರಾವಿಡ್ ಆಕರ್ಷಣೆ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್ ಅವರು ಪಂದ್ಯ ವೀಕ್ಷಿಸಲು ಬಂದಿದ್ದವರ ಆಕರ್ಷಣೆಯಾಗಿದ್ದರು. ತಮ್ಮ ಪುತ್ರ ಸಮಿತ್‌ ದ್ರಾವಿಡ್ ಆಟ ನೋಡಲು ಅವರು ಪತ್ನಿ ವಿಜೇತಾ ಅವರೊಂದಿಗೆ ಬಂದಿದ್ದರು. ಮೈದಾನದ ಕಲ್ಲುಕಟ್ಟೆಯ ಮೇಲೆ ಕುಳಿತು ಅವರು ಪಂದ್ಯವನ್ನು ವೀಕ್ಷಿಸಿದರು.. 5 ಓವರ್ ಬೌಲಿಂಗ್ ಮಾಡಿದ ಸಮಿತ್ 11 ರನ್‌ಗಳನ್ನಷ್ಟೆ (2 ಮೇಡನ್) ನೀಡಿದರು.

ಪತ್ರಕರ್ತರೊಂದಿಗೆ ಹೆಚ್ಚು ಮಾತನಾಡಲು ದ್ರಾವಿಡ್ ಬಯಸಲಿಲ್ಲ. ‘ಎಲ್ಲ ಅಪ್ಪಂದಿರಂತೆ ನಾನೂ ಮಗನ ಆಟ ನೋಡಲು ಬಂದಿದ್ದೇನೆ. ಇದರಲ್ಲಿ ವಿಶೇಷವೇನಿಲ್ಲ’ ಎಂದಷ್ಟೇ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT