ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ, ಭಾರತ ತಂಡದ ವಿರುದ್ಧ ಟೆಸ್ಟ್ ಆಡಲು ಸಾಧ್ಯವಾಗದ್ದು ದುರದೃಷ್ಟಕರ: ಯಾಸಿರ್

ಟೆಸ್ಟ್‌ ಕ್ರಿಕೆಟ್‌ನಲ್ಲಿ ವೇಗವಾಗಿ 200 ವಿಕೆಟ್‌ ಕಬಳಿಸಿದ ಸಾಧನೆ ಮಾಡಿರುವ ಲೆಗ್ ಸ್ಪಿನ್ನರ್‌ ಅಭಿಪ್ರಾಯ
Last Updated 17 ಡಿಸೆಂಬರ್ 2019, 7:32 IST
ಅಕ್ಷರ ಗಾತ್ರ

ಕರಾಚಿ: ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡದ ವಿರುದ್ಧ ಒಂದೇಒಂದು ಟೆಸ್ಟ್‌ ಪಂದ್ಯವನ್ನಾದರೂ ಆಡಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಪಾಕಿಸ್ತಾನದ ಕ್ರಿಕೆಟಿಗ ಯಾಸಿರ್‌ ಶಾ ಅಭಿಪ್ರಾಯಪಟ್ಟಿದ್ದಾರೆ.ಸದ್ಯ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಆಡುತ್ತಿರುವ ಶಾ, ಕೊಹ್ಲಿಯಂತೆ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ವಿರುದ್ಧ ಸ್ಪರ್ಧಿಸಲು ಬಯಸುವುದಾಗಿ ತಿಳಿಸಿದ್ದಾರೆ.

ಲೆಗ್‌ ಸ್ಪಿನ್ನರ್‌ ಆಗಿರುವ 33 ವರ್ಷದ ಶಾ, ಪಾಕಿಸ್ತಾನ ಪರ 2011ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಭಾರತ ವಿರುದ್ಧ ಒಂದೂ ಟೆಸ್ಟ್‌ ಆಡದ ಅವರು, ಇದುವರೆಗೆ 33 ಟೆಸ್ಟ್‌ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 207 ವಿಕೆಟ್ ಕಬಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಶಾ,‘ಇದು (ಭಾರತ ವಿರುದ್ಧ ಟೆಸ್ಟ್ ಆಡಿದಿರುವುದು)ದುರದೃಷ್ಟಕರ ಮತ್ತು ಅದನ್ನು ನೆನೆದಾಗ ಬೇಸರವಾಗುತ್ತದೆ. ನಾನು ಭಾರತ ವಿರುದ್ಧ ಟೆಸ್ಟ್‌ ಆಡಲು ಬಯಸುತ್ತೇನೆ. ಏಕೆಂದರೆ ಆ ತಂಡದಲ್ಲಿ ಅತ್ಯುತ್ತಮ ಆಟಗಾರರಿದ್ದಾರೆ. ಒಬ್ಬ ಲೆಗ್‌ ಸ್ಪಿನ್ನರ್‌ ಆಗಿ, ಕೊಹ್ಲಿಯಂತಹಶ್ರೇಷ್ಠ ಬ್ಯಾಟ್ಸ್‌ಮನ್‌ ಎದುರು ಆಡುವುದು ಮತ್ತು ವಿಕೆಟ್‌ ಪಡೆಯವುದು ಅತ್ಯಂತ ಸಂತಸದ ಸಂಗತಿ’ ಎಂದು ಹೇಳಿಕೊಂಡಿದ್ದಾರೆ.

‘ನಾವು ಈ ರೀತಿಯಲ್ಲಿ ಬಯಸುತ್ತೇವೆ. ಆದರೆ ಇದ್ಯಾವುದೂ ಆಟಗಾರರ ಕೈಯಲ್ಲಿಲ್ಲ. ಹಾಗಾಗಿ ನಾವು ಎನನ್ನೂ ಮಾಡಲಾಗದು. ಆದರೆ, ಅಂತಹದೊಂದು ಅವಕಾಶ ಸಿಗುವುದನ್ನು(ಭಾರತ ಎದುರು ಟೆಸ್ಟ್‌ ಆಡುವುದನ್ನು) ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ವಿಕೆಟ್ ಗಳಿಸಲು ಶಾ ಪರದಾಡಿದ್ದರು. ಆ ಬಗ್ಗೆ ಅವರು, ‘ಜನರು ನನ್ನ ಫಾರ್ಮ್‌ ಕುರಿತು ಮಾತನಾಡುತ್ತಾರೆ. ಆದರೆ, ನಾನು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 200 ವಿಕೆಟ್‌ ಸಾಧನೆ ಮಾಡುವವರೆಗೆ, ಅದರಲ್ಲೂ ಬ್ಯಾಟಿಂಗ್ ಮತ್ತು ವೇಗದ ಬೌಲರ್‌ಗಳಿಗೆ ನೆರವು ನೀಡುತ್ತಿದ್ದ ಪಿಚ್‌ಗಳಲ್ಲಿ ಎಷ್ಟು ಟೆಸ್ಟ್‌ ಪಂದ್ಯಗಳನ್ನು ಆಡಿದ್ದೇನೆ?’ ಎಂದು ಪ್ರಶ್ನಿಸಿದ್ದಾರೆ.

ಅಂದಹಾಗೆ ಅತಿ ಕಡಿಮೆ ಪಂದ್ಯಗಳಲ್ಲಿ 200 ವಿಕೆಟ್‌ ಪಡೆದ ಬೌಲರ್‌ ಎಂಬ ಶ್ರೇಯ ಯಾಸಿರ್‌ ಶಾ ಅವರದ್ದು. ಶಾ ಕೇವಲ 33ನೇ ಪಂದ್ಯದಲ್ಲಿಯೇ ಈ ಸಾಧನೆ ಮಾಡಿದ್ದರು.

ಪಾಕಿಸ್ತಾನ ತಂಡವು 2012ರಲ್ಲಿ ಏಕದಿನ ಕ್ರಿಕೆಟ್‌ ಸರಣಿ ಆಡಲು ಭಾರತ ಪ್ರವಾಸ ಕೈಗೊಂಡಿತ್ತು. ಆದರೆ 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿ ನಡೆದಾಗಿನಿಂದ ಉಭಯ ತಂಡಗಳ ನಡುವಣ ಟೆಸ್ಟ್‌ ಪಂದಗಳು ಸಾದ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT