ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿಶತಕ ಗಳಿಸಿದರೂ ಕಿಶನ್‌ಗೆ ಅವಕಾಶವಿಲ್ಲ ಏಕೆ? ಇಲ್ಲಿದೆ ರೋಹಿತ್‌ ಸ್ಪಷ್ಟನೆ

Last Updated 10 ಜನವರಿ 2023, 6:13 IST
ಅಕ್ಷರ ಗಾತ್ರ

ಗುವಾಹಟಿ: ಬಾಂಗ್ಲಾದೇಶ ವಿರುದ್ಧ ಇತ್ತೀಚೆಗೆ ನಡೆದ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಗಮನ ಸೆಳೆದಿರುವ ವಿಕೆಟ್‌ ಕೀಪರ್‌ ಬ್ಯಾಟರ್‌ ಇಶಾನ್‌ ಕಿಶನ್ ಹಾಗೂ ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಸೂರ್ಯಕುಮಾರ್‌ ಯಾದವ್‌ ಅವರು ಏಕದಿನ ಮಾದರಿಯ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಳ್ಳಲು ಮತ್ತಷ್ಟು ಸಮಯ ಕಾಯಬೇಕಾಗಿದೆ.

ಕಿಶನ್‌ ಮತ್ತು ಯಾದವ್‌ ಬದಲು, ಆರಂಭಿಕ ಬ್ಯಾಟರ್‌ ಶುಭಮನ್‌ ಗಿಲ್‌ ಮತ್ತು ಶ್ರೇಯಸ್‌ ಅಯ್ಯರ್‌ ಅವರಿಗೆ ಮತ್ತಷ್ಟು ಅವಕಾಶ ನೀಡಲು ತಂಡದ ಆಡಳಿತ ಮುಂದಾಗಿದೆ.

ಭಾರತ ತಂಡವು ಮುಂದಿನ ಎರಡು ವಾರಗಳಲ್ಲಿ 6 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.

ಬಾಂಗ್ಲಾದೇಶ ತಂಡದ ವಿರುದ್ಧ ಚಿತ್ತಗಾಂಗ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಕಿಶನ್‌ ಕೇವಲ 131 ಎಸೆತಗಳಲ್ಲಿ 210 ರನ್ ಗಳಿಸಿದ್ದರು. ಅದರೊಂದಿಗೆ ಏಕದಿನ ಮಾದರಿಯಲ್ಲಿ ವೇಗವಾಗಿ ದ್ವಿಶತಕ ಸಿಡಿಸಿದ ಬ್ಯಾಟರ್‌ ಎನಿಸಿದ್ದರು. ಇತ್ತ ಇದುವರೆಗೆ 45 ಪಂದ್ಯಗಳ 43 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಸೂರ್ಯಕುಮಾರ್‌ ಮೂರು ಶತಕ ಸಹಿತ 1,578 ರನ್‌ ಗಳಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ 180ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸುವ ಅವರು, 46.41ರ ಸರಾಸರಿಯಲ್ಲಿ ರನ್‌ ಕಲೆಹಾಕಿದ್ದಾರೆ. ಹೀಗಾಗಿ ಏಕದಿನ ತಂಡದಲ್ಲಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಆದರೆ, ಶ್ರೀಲಂಕಾ ವಿರುದ್ಧ ಇಂದಿನಿಂದ ಆರಂಭವಾಗಲಿರುವ ಪಂದ್ಯದಲ್ಲಿ ಇವರಿಬ್ಬರಿಗೂ ಸ್ಥಾನ ಸಿಗುವುದು ಅನುಮಾನವಾಗಿದೆ. ನಾಯಕ ರೋಹಿತ್‌ ಶರ್ಮಾ ಅವರೂ ಗಿಲ್‌ ಮತ್ತು ಅಯ್ಯರ್‌ಗೆ ಅವಕಾಶ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ (ಸೋಮವಾರ) ಮಾಧ್ಯಮದವರೊಂದಿಗೆ ಮಾತನಾಡಿರುವ ರೋಹಿತ್, 'ಇಬ್ಬರೂ ಆರಂಭಿಕರು (ಗಿಲ್‌ ಮತ್ತು ಕಿಶನ್‌) ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ಇಬ್ಬರೂ ಹೇಗೆ ಆಡಿದ್ದಾರೆ ಎಂಬುದನ್ನು ಪರಿಗಣಿಸಿದರೆ ಗಿಲ್‌ಗೆ ಅವಕಾಶ ನೀಡುವುದು ನ್ಯಾಯೋಚಿತವಾಗಲಿದೆ' ಎಂದಿದ್ದಾರೆ.

ಗಿಲ್‌ ಈವರೆಗೆ 13 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದು, 57ರ ಸರಾಸರಿಯಲ್ಲಿ 687ರನ್ ಕಲೆಹಾಕಿದ್ದಾರೆ. 99ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ ಕಾಪಾಡಿಕೊಂಡಿದ್ದಾರೆ. ಇವರ ಬ್ಯಾಟ್‌ನಿಂದ ಒಂದು ಶತಕ ಮತ್ತು 4 ಅರ್ಧಶತಕಗಳು ಬಂದಿವೆ.

10 ಪಂದ್ಯಗಳ 9 ಇನಿಂಗ್ಸ್‌ಗಳಲ್ಲಿ ಆಡಿರುವ ಕಿಶನ್‌, 53ರ ಸರಾಸರಿಯಲ್ಲಿ 477 ರನ್‌ ಗಳಿಸಿದ್ದಾರೆ. ಒಂದು ದ್ವಿಶತಕ ಹೊರತುಪಡಿಸಿ ಮೂರು ಸಲ ಅರ್ಧಶತಕ ಗಳಿಸಿದ್ದಾರೆ.

'ಕಳೆದ ಕೆಲವು ಪಂದ್ಯಗಳಲ್ಲಿ ಗಿಲ್ ಸಾಕಷ್ಟು ರನ್ ಗಳಿಸಿದ್ದಾರೆ. ಇಶಾನ್ ಸಹ ಚೆನ್ನಾಗಿ ಆಡಿದ್ದಾರೆ. ಅವರಿಂದ (ಕಿಶನ್‌) ಮುಚ್ಚಿಡುವಂತಹದ್ದೇನೂ ಇಲ್ಲ. ಕಿಶನ್‌ ನಮ್ಮ ತಂಡದಲ್ಲಿರುವ ಅದ್ಭುತ ಆಟಗಾರ. ದ್ವಿಶತಕ ಸಿಡಿಸಿದ್ದಾರೆ. ದ್ವಿಶತಕ ಗಳಿಸಲು ಎಷ್ಟು ಶ್ರಮ ಹಾಕಬೇಕು ಎಂಬುದು ಗೊತ್ತಿದೆ. ಅದೊಂದು ದೊಡ್ಡ ಸಾಧನೆ. ಆದರೆ, ಪ್ರಮಾಣಿಕವಾಗಿ ಹೇಳಬೇಕೆಂದರೆ ಉತ್ತಮವಾಗಿ ಆಡಿರುವ ಆಟಗಾರರಿಗೆ ಮತ್ತಷ್ಟು ಅವಕಾಶ ನೀಡಬೇಕಿದೆ' ಎಂದಿದ್ದಾರೆ.

ಇಶಾನ್‌ಗೆ ಸ್ಥಾನ ಸಿಗದಿರುವುದನ್ನು ದುರದೃಷ್ಟವೆಂದಿರುವ ರೋಹಿತ್‌, ಈ ವರ್ಷ ಅಕ್ಟೋಬರ್‌–ನವೆಂಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗೂ ಮುನ್ನ ಸಾಕಷ್ಟು ಪಂದ್ಯಗಳನ್ನು ಆಡಲಿದ್ದೇವೆ. ಕಿಶನ್‌ ಅವಕಾಶ ಪಡೆಯಲಿದ್ದಾರೆ ಎಂಬ ಭರವಸೆ ನೀಡಿದ್ದಾರೆ.

'ಕಿಶನ್‌ ಕಣಕ್ಕಿಳಿಸಲು ಸಾಧ್ಯವಾಗದಿರುವುದು ದುರದೃಷ್ಟಕರ. ಆದರೆ, ಕಳೆದ ಎಂಟು–ಒಂಬತ್ತು ತಿಂಗಳು ಹೇಗೆ ಸಾಗಿವೆ ಎಂಬುದನ್ನು ಗಮನಿಸಿದರೆ, ಗಿಲ್‌ಗೆ ಅವಕಾಶ ಸಿಗಬೇಕಿರುವುದು ನ್ಯಾಯ' ಎಂದು ಸಮರ್ಥಿಸಿಕೊಂಡಿದ್ದಾರೆ.

ಹಾಗೆಯೇ, ಸೂರ್ಯಕುಮಾರ್‌ ಯಾದವ್‌ ಸಹ ಏಕದಿನ ತಂಡದಲ್ಲಿ ಕಾಣಿಸಿಕೊಳ್ಳಲು ಮತ್ತಷ್ಟು ಸಮಯ ಕಾಯಬೇಕು ಎಂದು ರೋಹಿತ್‌ ಹೇಳಿದ್ದಾರೆ. ಯಾದವ್‌ ಏಕದಿನ ಮಾದರಿಯಲ್ಲಿ 16 ಪಂದ್ಯಗಳಲ್ಲಿ 384 ರನ್ ಗಳಿಸಿದ್ದಾರೆ. ಯಾದವ್‌ಗೆ ಪೈಪೋಟಿ ನೀಡುತ್ತಿರುವ ಶ್ರೇಯಸ್‌ ಅಯ್ಯರ್, 35 ಇನಿಂಗ್ಸ್‌ಗಳಲ್ಲಿ 1,537 ರನ್ ಕಲೆಹಾಕಿದ್ದಾರೆ. ಎರಡು ಶತಕ ಮತ್ತು 14 ಅರ್ಧಶತಕಗಳನ್ನೂ ಸಿಡಿಸಿದ್ದಾರೆ.

ಭಾರತ ತಂಡವು ಶ್ರೀಲಂಕಾ ಸರಣಿ ಬಳಿಕ ನ್ಯೂಜಿಲೆಂಡ್‌ ವಿರುದ್ಧ (ಜನವರಿ 18 ರಿಂದ 24ರ ವರೆಗೆ) ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT