ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ICC T20 WC | ಹೊರಬಿದ್ದ ಪಾಕ್: ಎಂಟರ ಹಂತಕ್ಕೆ ಅಮೆರಿಕ

Published 14 ಜೂನ್ 2024, 19:26 IST
Last Updated 14 ಜೂನ್ 2024, 19:26 IST
ಅಕ್ಷರ ಗಾತ್ರ

ಫ್ಲಾರಿಡಾ: ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ನಡುವೆ ಶುಕ್ರವಾರ ನಡೆಯಬೇಕಿದ್ದ ಪಂದ್ಯ ಮಳೆಯಿಂದ  ರದ್ದುಗೊಂಡಿತು. ಐದು ಅಂಕಗಳೊಂದಿಗೆ ಮೊದಲ ಬಾರಿಗೆ ಆತಿಥೇಯ ತಂಡ ಸೂಪರ್ 8ಕ್ಕೆ ಪ್ರವೇಶಿಸಿದರೆ, ಮಾಜಿ ಚಾಂಪಿಯನ್‌ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿತ್ತು. 

ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8ರಿಂದ ಪಂದ್ಯ ನಡೆಯಬೇಕಿತ್ತು. ಆದರೆ ಮಳೆ ಮತ್ತು ತೇವಗೊಂಡ ಮೈದಾನದ ಕಾರಣ ಟಾಸ್ ಕೂಡ ಸಾಧ್ಯವಾಗಲಿಲ್ಲ. ಈ ಅವಧಿಯಲ್ಲಿ ಅಂಪೈರ್‌ಗಳು ಮೂರು ಬಾರಿ ಪಿಚ್ ಮತ್ತು ಹೊರಾಂಗಣದ ಪರಿಶೀಲನೆ ನಡೆಸಿದರು. ಬಳಿಕ ಪಂದ್ಯ ರದ್ದುಗೊಳಿಸಿ, ಉಭಯ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. 

‘ಎ’ ಗುಂಪಿನಲ್ಲಿ ಅಮೆರಿಕ ನಾಲ್ಕು ಪಂದ್ಯಗಳಿಂದ ಐದು ಅಂಕ ಗಳಿಸಿ, ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಆದರೆ ಪಾಕಿಸ್ತಾನ ತಂಡವು ಮೂರು ಪಂದ್ಯಗಳಿಂದ ಎರಡು ಅಂಕ ಮಾತ್ರ ಸಂಪಾದಿಸಿದೆ. ಹಾಗಾಗಿ ಪಾಕ್‌ ತಂಡ ಟೂರ್ನಿಯಿಂದ ಹೊರಬಿತ್ತು.

ಜೂನ್ 6ರಂದು ನಡೆದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಆತಿಥೇಯ ಅಮೆರಿಕ ವಿರುದ್ಧ ಸೂಪರ್‌ ಓವರ್‌ನಲ್ಲಿ  ಸೋಲುನುಭವಿಸಿತ್ತು. ಜೂನ್ 9 ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧ ಪರಾಭವಗೊಂಡಿತು. ಜೂನ್ 11 ರಂದು ಕೆನಡಾ ವಿರುದ್ಧ ಪಂದ್ಯದಲ್ಲಿ ಮಾತ್ರ ಪಾಕ್ ಗೆಲುವು ಸಾಧಿಸಿದೆ. 2009ರಲ್ಲಿ ಪಾಕ್ ತಂಡ ಟಿ20 ವಿಶ್ವಕಪ್ ಗೆದ್ದಿತ್ತು.  

ಈ ಗುಂಪಿನಿಂದ ಭಾರತ ತಂಡವು ಈಗಾಗಲೇ ಎಂಟರ ಹಂತ ಪ್ರವೇಶಿಸಿದೆ. ಒಂದೊಮ್ಮೆ ಅಮೆರಿಕ ಸೋತಿದ್ದರೆ ಮೂರನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡವು ಸೂಪರ್ 8ರ ಘಟ್ಟ ಪ್ರವೇಶಿಸುವ ಆಸೆ ಜೀವಂತವಾಗಿರುತ್ತಿತ್ತು. ಆದರೆ ಮಳೆ ಅದಕ್ಕೆ ಅವಕಾಶ ನೀಡಲಿಲ್ಲ. 

ಪಾಕಿಸ್ತಾನ ಗುಂಪಿನಲ್ಲಿ ತನ್ನ ಕೊನೆಯ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT