ಮಂಗಳವಾರ, ಮಾರ್ಚ್ 21, 2023
20 °C

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಗೆಲುವಿನ ಹಳಿಗೆ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಬೌಲರ್‌ಗಳ ಸಂಘಟಿತ ದಾಳಿ, ಮಯಂಕ್‌ ಅಗರವಾಲ್‌ ಮತ್ತು ನಿಕಿನ್ ಜೋಸ್‌ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳಿತು.

ಇಲ್ಲಿಯ ಈಡನ್‌ ಗಾರ್ಡನ್‌ನಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮಯಂಕ್ ಪಡೆ ಆರು ವಿಕೆಟ್‌ಗಳಿಂದ ಸಿಕ್ಕಿಂ ತಂಡವನ್ನು ಸೋಲಿಸಿತು.

ಟಾಸ್‌ ಗೆದ್ದ ಕರ್ನಾಟಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ಬೌಲರ್‌ಗಳಾದ ವಾಸುಕಿ ಕೌಶಿಕ್‌ (16ಕ್ಕೆ 3), ಶ್ರೇಯಸ್‌ ಗೋಪಾಲ್‌ (37ಕ್ಕೆ 3) ಮತ್ತು ಆಲ್‌ರೌಂಡರ್‌ ಕೃಷ್ಣಪ್ಪ ಗೌತಮ್‌ (24ಕ್ಕೆ 3) ಸಿಕ್ಕಿಂ ತಂಡವನ್ನು 117 ರನ್‌ಗಳಿಗೆ ಕಟ್ಟಿ ಹಾಕಿದರು. 

ನೀಲೇಶ್ ಲ್ಯಾಮಿಚಾನೆ (26) ಮತ್ತು ಸುಮಿತ್ ಸಿಂಗ್‌ (42)  ಪ್ರತಿರೋಧ ತೋರದಿದ್ದರೆ ಆ ತಂಡವು 100ರೊಳಗೆ ಕುಸಿಯುವ ಸಾಧ್ಯತೆಯಿತ್ತು.

ಸಾಧಾರಣ ಗುರಿ ಬೆನ್ನತ್ತಿದ ಕರ್ನಾಟಕದ ಪರ ಆರಂಭಿಕ ಬ್ಯಾಟರ್ ಮನೀಷ್ ಪಾಂಡೆ (4) ಮೊದಲ ಓವರ್‌ನಲ್ಲೇ ವಿಕೆಟ್‌ ಒಪ್ಪಿಸಿದರು. ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಕೃಷ್ಣಪ್ಪ ಗೌತಮ್‌ ಕೂಡ ಶೂನ್ಯಕ್ಕೆ ಔಟಾದರು. ಮನೋಜ್ ಭಾಂಡಗೆ (6) ಹೆಚ್ಚು ಹೊತ್ತು ನಿಲ್ಲಲಿಲ್ಲ. ಒಂದೆಡೆ ವಿಕೆಟ್‌ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತ ಮಯಂಕ್ (ಔಟಾಗದೆ 54) ಜವಾಬ್ದಾರಿಯ ಆಟವಾಡಿದರು. ಅವರು ಮತ್ತು ನಿಕಿನ್‌ ಜೋಸ್‌ (ಔಟಾಗದೆ 46) ಮುರಿಯದ ಐದನೇ ವಿಕೆಟ್‌ ಜೊತೆಯಾಟದಲ್ಲಿ 84 ಸೇರಿಸಿ ತಂಡವನ್ನು ಜಯದ ದಡ ಸೇರಿಸಿದರು. 24.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಕರ್ನಾಟಕ ಗೆದ್ದಿತು.

ಈ ಜಯದೊಂದಿಗೆ ಮಯಂಕ್ ಪಡೆ (20 ಪಾಯಿಂಟ್ಸ್) ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೋದ ಪಂದ್ಯದಲ್ಲಿ ಕರ್ನಾಟಕ ತಂಡವು ಆರು ವಿಕೆಟ್‌ಗಳಿಂದ ಅಸ್ಸಾಂಗೆ ಸೋತಿತ್ತು.

ಸಂಕ್ಷಿಪ್ತ ಸ್ಕೋರು
ಸಿಕ್ಕಿಂ
: 46.2 ಓವರ್‌ಗಳಲ್ಲಿ 117 (ನೀಲೇಶ್ ಲ್ಯಾಮಿಚಾನೆ 26, ಸುಮಿತ್ ಸಿಂಗ್‌ 42, ಪಾಲ್‌ಜೋರ್‌ ತಮಾಂಗ್‌ 13; ವಾಸುಕಿ ಕೌಶಿಕ್‌ 16ಕ್ಕೆ 3, ಎಂ. ವೆಂಕಟೇಶ್13ಕ್ಕೆ 1, ಶ್ರೇಯಸ್‌ ಗೋಪಾಲ್‌ 37ಕ್ಕೆ 3, ಕೃಷ್ಣಪ್ಪ ಗೌತಮ್‌ 24ಕ್ಕೆ 3).

ಕರ್ನಾಟಕ: 24.4 ಓವರ್‌ಗಳಲ್ಲಿ 4ಕ್ಕೆ 121 (ಮಯಂಕ್ ಅಗರವಾಲ್‌ ಔಟಾಗದೆ 54, ನಿಕಿನ್ ಜೋಸ್‌ ಔಟಾಗದೆ 46; ಪಾಲ್‌ಜೋರ್‌ ತಮಾಂಗ್‌ 24ಕ್ಕೆ 3, ಸುಮಿತ್ ಸಿಂಗ್‌ 21ಕ್ಕೆ 1).

ಫಲಿತಾಂಶ: ಕರ್ನಾಟಕ ತಂಡಕ್ಕೆ ಆರು ವಿಕೆಟ್‌ಗಳ ಜಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು