ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಮನೀಷ್ ಪಾಂಡೆ ಅಬ್ಬರಕ್ಕೆ ಛತೀಸಗಡ ಗಡಗಡ

ಜಯದ ಹಾದಿಗೆ ಮರಳಿದ ಕರ್ನಾಟಕ
Last Updated 2 ಅಕ್ಟೋಬರ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬುಧವಾರ ಬೆಳಗಿನ ಜಾವ ಸುರಿದಿದ್ದ ಮಳೆಯಲ್ಲಿ ಮಿಂದಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮನೀಷ್ ಪಾಂಡೆ ಸಿಡಿಲಬ್ಬರದ ಶತಕ ದಾಖಲಾಯಿತು.

ಇಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ನಾಯಕ ಮನೀಷ್ (ಔಟಾಗದೆ 142; 118ಎಸೆತ, 5ಬೌಂಡರಿ, 7ಸಿಕ್ಸರ್) ಶತಕದ ಬಲದಿಂದ ಕರ್ನಾಟಕ ತಂಡವು ಛತ್ತೀಸಗಡದ ಎದುರು 79 ರನ್‌ಗಳಿಂದ ಗೆದ್ದಿತು. ಮಂಗಳವಾರ ಆಲೂರು ಕ್ರೀಡಾಂಗಣದಲ್ಲಿ ಹೈದರಾಬಾದ್ ಎದುರು ಸೋತಿದ್ದ ತಂಡವು ಮತ್ತೆ ಜಯದ ಹಾದಿಗೆ ಮರಳಿತು. ಟೂರ್ನಿಯಲ್ಲಿ ದಾಖಲಿಸಿದ ಮೂರನೇ ಗೆಲುವು ಇದು.

ಟಾಸ್ ಗೆದ್ದ ಛತ್ತೀಸಗಡ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದ ಓವರ್‌ಗಳಲ್ಲಿ ಬೌಲರ್‌ಗಳು ಯಶಸ್ವಿಯಾದರು. ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಮತ್ತು ಅನುಭವಿ ಕರುಣ್ ನಾಯರ್ ಅವರು ತಂಡದ ಮೊತ್ತ ಕೇವಲ 25 ರನ್‌ಗಳಾಗುವಷ್ಟರಲ್ಲಿ ಪೆವಿಲಿಯನ್‌ಗೆ ಮರಳಿದರು. ಆಗ ಕ್ರೀಸ್‌ನಲ್ಲಿದ್ದ ಕೆ.ಎಲ್‌. ರಾಹುಲ್ ಜೊತೆಗೂಡಿದ ಮನೀಷ್ ಇನಿಂಗ್ಸ್‌ನ ದಿಕ್ಕು ಬದಲಿಸಿದರು. ಮೂರನೇ ವಿಕೆಟ್‌ಗೆ ಅವರಿಬ್ಬರೂ ಗಳಿಸಿದ 150 ರನ್‌ಗಳ ಜೊತೆಯಾಟದಿಂದ ಕರ್ನಾಟಕ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 285 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಛತ್ತೀಸಗಡ ತಂಡವು 44.4 ಓವರ್‌ಗಳಲ್ಲಿ 206 ರನ್‌ ಗಳಿಸಿ ಆಲೌಟ್ ಆಯಿತು.

ಮನೀಷ್ ಆರ್ಭಟ: ರಾಹುಲ್ ತಾಳ್ಮೆಯಾಟ: ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿದ್ದ ಮನೀಷ್ ಪಾಂಡೆ ಮೂರನೇಯದ್ದರಲ್ಲಿ 48 ರನ್ ಗಳಿಸಿ ಔಟಾಗಿದ್ದರು. ಆದರೆ ಇಲ್ಲಿಯ ಅವರ ಆಟವು ಆ ಎಲ್ಲ ಇನಿಂಗ್ಸ್‌ಗಳಿಗಿಂತಲೂ ವಿಭಿನ್ನ ಮತ್ತು ಉತ್ಕೃಷ್ಟವಾಗಿತ್ತು. ಅಪರಿಮಿತ ಆತ್ಮವಿಶ್ವಾಸದ ಆಟ ಅವರದ್ದಾಗಿತ್ತು. 46 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದರು. ಅದರಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಸೇರಿದ್ದವು. ‘ಗಾಂಧಿ ಜಯಂತಿ’ಯ ರಜೆಯ ಕಾರಣ ಒಂದು ಗ್ಯಾಲರಿಯಲ್ಲಿ ಸೇರಿದ್ದ ಅಭಿಮಾನಿಗಳ ಮನ ಗೆದ್ದರು. ಈ ಐವತ್ತು ರನ್‌ಗಳನ್ನು ಶತಕವನ್ನಾಗಿ ಪರಿವರ್ತಿಸಲು ಮತ್ತೆ 50 ಎಸೆತಗಳನ್ನು ಆಡಿದರು. ಲಿಸ್ಟ್ ’ಎ’ ಕ್ರಿಕೆಟ್‌ನಲ್ಲಿ ಇದು ಅವರ ಹತ್ತನೇ ಶತಕ.

ಇನ್ನೊಂದು ಬದಿಯಲ್ಲಿ ಕೆ.ಎಲ್. ರಾಹುಲ್ ಕಲಾತ್ಮಕ ಶೈಲಿಯ ಹೊಡೆತಗಳ ಮೂಲಕ ರನ್‌ ಗಳಿಕೆ ಹೆಚ್ಚಿಸಿದರು. ಇದೇ ಅಂಗಳದಲ್ಲಿ ಕೇರಳದ ಎದುರು ಶತಕ ಬಾರಿಸಿದ್ದ ರಾಹುಲ್ ಛತ್ತೀಸಗಡ ವಿರುದ್ಧ ಮತ್ತೊಂದು ಬಾರಿ ನೂರರ ಗಡಿ ದಾಟುವ ನಿರೀಕ್ಷೆ ಮೂಡಿಸಿ್ದರು. ಆದರೆ 35ನೇ ಓವರ್‌ನಲ್ಲಿ ಸುಮಿತ್ ರುಯಕರ್ ಎಸೆತದಲ್ಲಿ ಪುನೀತ್ ದಾತೆಗೆ ಕ್ಯಾಚಿತ್ತರು.

ಕೊನೆ ಓವರ್‌ನಲ್ಲಿ 20 ರನ್: ಶತಕ ಬಾರಿಸಿದ ನಂತರ ಮತ್ತಷ್ಟು ಆಕ್ರಮಣಕಾರಿಯಾದ ಪಾಂಡೆಯನ್ನು ಕಟ್ಟಿಹಾಕಲು ಬೌಲರ್‌ಗಳು ಪರದಾಡಿದರು. ಅದರಲ್ಲೂ ಕೊನೆಯ ಓವರ್‌ನಲ್ಲಿ ಪಾಂಡೆ ಪ್ರಹಾರಕ್ಕೆ ಬೌಲರ್ ಶಶಾಂಕ್ ಸಿಂಗ್ ತತ್ತರಿಸಿಹೋದರು. ಆ ಓವರ್‌ನಲ್ಲಿ 20 ರನ್‌ಗಳನ್ನು ಸೂರೆ ಮಾಡಿದರು. ಸತತ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಚಿತ್ತಾಪಹಾರಿಯಾಗಿದ್ದವು. ಮನೀಷ್–ರೋನಿತ್ ಜೊತೆಯಾಟದಲ್ಲಿ 34 (13ಎಸೆತ) ರನ್‌ಗಳು ಸೇರಿದವು. 48ನೇ ಓವರ್‌ನಲ್ಲಿ ಕ್ರೀಸ್‌ಗೆ ಬಂದ ರೋನಿತ್ ಎರಡು ಬೌಂಡರಿ ಹೊಡೆದರು.

ಅಭಿಮನ್ಯು ಮಿಥುನ್ ವಿಶ್ರಾಂತಿ ಪಡೆದಿದ್ದರಿಂದ ಕಣಕ್ಕಿಳಿದ ವಿ. ಕೌಶಿಕ್ ಉತ್ತಮ ಬೌಲಿಂಗ್ ಮಾಡಿದರು. ಪ್ರಸಿದ್ಧಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಹೋದ ವಾರ ಮುಂಬೈ ವಿರುದ್ಧ ಜಯಿಸಿದ್ದ ಛತ್ತೀಸಗಡ ತಂಡದ ಬ್ಯಾಟಿಂಗ್ ಪಡೆಯು ಇಲ್ಲಿ ವಿಫಲವಾಯಿತು.

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 50 ಓವರ್‌ಗಳಲ್ಲಿ 7ಕ್ಕೆ285 (ಕೆ.ಎಲ್. ರಾಹುಲ್ 81, ಮನೀಷ್ ಪಾಂಡೆ ಔಟಾಗದೆ 142, ಪುನೀತ್ ದುಬೆ 60ಕ್ಕೆ2, ಶಶಾಂಕ್ ಸಿಂಗ್ 66ಕ್ಕೆ2) ಛತ್ತೀಸಗಡ: 44.4 ಓವರ್‌ಗಳಲ್ಲಿ 206 (ಶಶಾಂಕ್ ಚಂದ್ರಕರ್ 42, ಆಶುತೋಷ್ ಸಿಂಗ್ 32, ಅಮನದೀಪ್ ಖರೆ 43, ಶಶಾಂಕ್ ಸಿಂಗ್ 20, ಅಜಯ್ ಮಂಡಲ್ 20, ಸುಮಿತ್ ರುಯಕರ್ 20, ಪ್ರಸಿದ್ಧ ಕೃಷ್ಣ 31ಕ್ಕೆ3, ರೋನಿತ್ ಮೋರೆ 52ಕ್ಕೆ2, ಶ್ರೇಯಸ್ ಗೋಪಾಲ್ 53ಕ್ಕೆ3, ಕೆ. ಗೌತಮ್ 34ಕ್ಕೆ1, ವಿ. ಕೌಶಿಕ್ 35ಕ್ಕೆ1) ಫಲಿತಾಂಶ: ಕರ್ನಾಟಕ ತಂಡಕ್ಕೆ 79 ರನ್‌ಗಳ ಜಯ ಮತ್ತು 4 ಪಾಯಿಂಟ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT