ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ್ಥ್ ನಾಯಕತ್ವಕ್ಕೆ ಭುವನೇಶ್ವರ್ ಸವಾಲು

ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿ ಇಂದಿನಿಂದ: ಕರ್ನಾಟಕ–ಉತ್ತರಪ್ರದೇಶ ಮುಖಾಮುಖಿ
Last Updated 19 ಫೆಬ್ರುವರಿ 2021, 22:29 IST
ಅಕ್ಷರ ಗಾತ್ರ

ಬೆಂಗಳೂರು: ಬಲಗೈ ಬ್ಯಾಟ್ಸ್‌ಮನ್ ರವಿಕುಮಾರ್ ಸಮರ್ಥ್ ಶನಿವಾರ ಕರ್ನಾಟಕ ತಂಡದಲ್ಲಿ ನಾಯಕತ್ವದ ಇನಿಂಗ್ಸ್‌ ಆರಂಭಿಸಲಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಮೊದಲ ಪಂದ್ಯದಲ್ಲಿ ಸಮರ್ಥ್ ಚಾಂಪಿಯನ್ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತದ ತಂಡದ ಮಧ್ಯಮವೇಗಿ ಭುವನೇಶ್ವರ್ ಕುಮಾರ್ ನಾಯಕತ್ವದ ಉತ್ತರ ಪ್ರದೇಶದ ಸವಾಲನ್ನು ಎದುರಿಸಲಿದ್ದಾರೆ.

ನಾಲ್ಕು ಬಾರಿ ಪ್ರಶಸ್ತಿ ಗೆದ್ದಿರುವ ಕರ್ನಾಟಕ ತಂಡವು ಈ ಬಾರಿಯೂ ಕಿರೀಟ ಉಳಿಸಿಕೊಳ್ಳಲು ಸಮರ್ಥ್ ತಂತ್ರಗಾರಿಕೆ ಯಾವ ರೀತಿ ಫಲ ನೀಡಲಿದೆ ಎಂಬುದು ಕುತೂಹಲ ಕೆರಳಿಸಿದೆ. ಕೆ.ಎಲ್. ರಾಹುಲ್‌, ಮಯಂಕ್ ಅಗರವಾಲ್, ಮನೀಷ್ ಪಾಂಡೆ ಮತ್ತು ಐಪಿಎಲ್‌ ಹರಾಜಿನಲ್ಲಿ ಬಂಪರ್‌ ಮೌಲ್ಯ ಗಳಿಸಿರುವ ಕೃಷ್ಣಪ್ಪ ಗೌತಮ್ ಅವರು ತಂಡದಲ್ಲಿಲ್ಲ.

ಅನುಭವಿ ಕರುಣ್ ನಾಯರ್ ಅವರಿಗೆ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಈ ಟೂರ್ನಿ ಬಹುಶಃ ಕೊನೆಯ ಅವಕಾಶವಾಗಲಿದೆ. ಈಚೆಗೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಟೂರ್ನಿಯಲ್ಲಿ ಕರುಣ್ ನಾಯಕತ್ವದ ತಂಡವು ಎಂಟರ ಘಟ್ಟದಲ್ಲಿ ಸೋತಿತ್ತು. ಕರುಣ್ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದರು. 2017–18ರ ಸಾಲಿನಲ್ಲಿ ವಿಜಯ್ ಹಜಾರೆ ಟ್ರೋಫಿ ಗೆದ್ದಿದ್ದ ಕರ್ನಾಟಕಕ್ಕೆ ಕರುಣ್ ನಾಯಕರಾಗಿದ್ದರು.

ಅವರು ಈ ಟೂರ್ನಿಯಲ್ಲಿ ಲಯಕ್ಕೆ ಮರಳಿದರೆ ಬ್ಯಾಟಿಂಗ್ ಬಲ ಹೆಚ್ಚುತ್ತದೆ. ದೇವದತ್ತ ಪಡಿಕ್ಕಲ್, ಅನಿರುದ್ಧ ಜೋಶಿ, ನಿಶ್ಚಲ್ ಕೂಡ ಸ್ಥಿರ ಪ್ರದರ್ಶನ ನೀಡಿದರೆ ಲೀಗ್ ಹಂತದ ಸವಾಲನ್ನು ಮೀರಿ ನಿಲ್ಲುವುದು ಸುಲಭವಾಗುತ್ತದೆ. ಟಿ20 ಮಾದರಿಯಲ್ಲಿ ಕೆ.ವಿ. ಸಿದ್ಧಾರ್ಥ್, ಶ್ರೇಯಸ್ ಗೋಪಾಲ್ ಮತ್ತು ಬಿ.ಆರ್. ಶರತ್‌ ಅವರಿಗೆ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ ಅವರಿಗೂ ಇಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡುವ ಅವಕಾಶಗಳು ಲಭಿಸುವ ನಿರೀಕ್ಷೆ ಇದೆ.

ಅನುಭವಿ ಮಧ್ಯಮವೇಗಿ ಅಭಿಮನ್ಯು ಮಿಥುನ್, ಪ್ರಸಿದ್ಧ ಕೃಷ್ಣ, ಶ್ರೇಯಸ್ ಮತ್ತು ಸುಚಿತ್ ಮೇಲೆ ಬೌಲಿಂಗ್ ವಿಭಾಗದ ಹೊಣೆ ಬೀಳಲಿದೆ.

ತಂಡದಲ್ಲಿರುವ ನವಪ್ರತಿಭೆಗಳನ್ನು ಸಮರ್ಥ್ ಯಾವ ರೀತಿ ದುಡಿಸಿಕೊಳ್ಳುವರು ಎಂಬುದನ್ನುಕಾದು ನೋಡಬೇಕಿದೆ.

ಭುವನೇಶ್ವರ್‌ ತಮ್ಮಲ್ಲಿರುವ ಯುವಪಡೆಯನ್ನೇ ನೆಚ್ಚಿಕೊಂಡಿದ್ದಾರೆ. ಅನುಭವಿ ಸುರೇಶ್ ರೈನಾ ಅವರು ಆಡುತ್ತಿಲ್ಲ. ಆದ್ದರಿಂದ ಭುವಿ ಮೇಲೆ ಹೊಣೆ ಹೆಚ್ಚಿದೆ. ಪ್ರಿಯಂ ಗಾರ್ಗ್, ಉಪೇಂದ್ರ ಯಾದವ್, ಆರ್ಯಾನ್ ಜುಯಲ್ ಮತ್ತು ಶಿವಂ ಮಾವಿ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ತಂಡಗಳು
ಕರ್ನಾಟಕ:
ಆರ್. ಸಮರ್ಥ್ (ನಾಯಕ), ರೋಹನ್ ಕದಂ, ಬಿ.ಆರ್. ಶರತ್ (ವಿಕೆಟ್‌ಕೀಪರ್), ಕರುಣ್ ನಾಯರ್, ಡಿ. ನಿಶ್ಚಲ್, ಅಭಿಮನ್ಯು ಮಿಥುನ್, ಅನಿರುದ್ಧ ಜೋಶಿ, ಶ್ರೇಯಸ್ ಗೋಪಾಲ್, ರೋನಿತ್ ಮೋರೆ, ಜೆ. ಸುಚಿತ್, ವೈಶಾಖ ವಿಜಯಕುಮಾರ್, ಆದಿತ್ಯ ಸೋಮಣ್ಣ, ಪ್ರಸಿದ್ಧಕೃಷ್ಣ, ಕೆ.ವಿ. ಸಿದ್ಧಾರ್ಥ್, ಎಂ.ಬಿ. ದರ್ಶನ್, ನಿಕಿನ್ ಜೋಸ್, ಶಿವಕುಮಾರ್ ರಕ್ಷಿತ್, ಕೆ.ಎಲ್. ಶ್ರೀಜಿತ್, ದೇವದತ್ತ ಪಡಿಕ್ಕಲ್, ಮನೋಜ್ ಭಾಂಡಗೆ, ಶುಭಾಂಗ್ ಹೆಗಡೆ

ಉತ್ತರಪ್ರದೇಶ: ಭುವನೇಶ್ವರ್ ಕುಮಾರ್ (ನಾಯಕ), ಸಮರ್ಥ್ ಸಿಂಗ್, ಉಪೇಂದ್ರ ಯಾದವ್ (ವಿಕೆಟ್‌ಕೀಪರ್), ರಿಂಕು ಸಿಂಗ್, ಪ್ರಿಯಂ ಗಾರ್ಗ್, ಅಕ್ಷದೀಪ್ ನಾಥ್, ಅಲ್ಮಸ್ ಶೌಕತ್, ಶಿವಂ ಮಾವಿ, ಅಭಿಷೇಕ್ ಗೋಸ್ವಾಮಿ, ಕಾರ್ತಿಕ್ ತ್ಯಾಗಿ, ಮೊಹಸಿನ್ ಖಾನ್, ಆರ್ಯನ್ ಜುಯಾಲ್, ಶಾನು ಸೈನಿ, ಸಮೀರ್ ಚೌಧರಿ, ಐಶ್ವರ್ಯ ಮೌರ್ಯ, ಮಾಧವ್ ಕೌಶಿಕ್, ಶಿವಂ ಶರ್ಮಾ, ಪೂರ್ಣಕ್ ತ್ಯಾಗಿ, ಕರಣ್ ಶರ್ಮಾ.

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT