ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಮುಂದಿದೆ ಅಗ್ನಿಪಥ

Last Updated 7 ಜುಲೈ 2019, 19:30 IST
ಅಕ್ಷರ ಗಾತ್ರ

ಬೈಕರ್ ರೋಹಿತ್ ಶರ್ಮಾ ಈ ವಿಶ್ವಕಪ್‌ ಟೂರ್ನಿಯಲ್ಲಿ ದ್ವಿಶತಕ ದಾಖಲಿಸುತ್ತಾರೆಯೇ? ಕೆ.ಎಲ್. ರಾಹುಲ್ ಒಂದಾದರೂ ಶತಕ ಹೊಡೆಯುವರೇ? ವಿರಾಟ್ ಕೊಹ್ಲಿ ತಮ್ಮ ಅರ್ಧಶತಕಗಳಿಗೆ ನೂರರ ಲೇಪನ ನೀಡುವರೇ? ಮಹೇಂದ್ರಸಿಂಗ್ ಧೋನಿ ಸಿಕ್ಸರ್‌ ಮೂಲಕ ಫಿನಿಷಿಂಗ್ ಮಾಡುವರೇ?

ರೌಂಡ್‌ ರಾಬಿನ್ ಲೀಗ್‌ ನ ಸವಾಲನ್ನು ಎದುರಿಸಿ ನಾಲ್ಕರ ಹಂತಕ್ಕೆ ಬಂದು ನಿಂತಿರುವ ಭಾರತ ತಂಡದ ಆಟಗಾರರ ಸುತ್ತ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿರುವ ಪ್ರಶ್ನೆಗಳು ಇವು. ಆದರೆ ಇವೆಲ್ಲ ಪ್ರಶ್ನೆಗಳಿಗಿಂತ ಮುಖ್ಯವಾಗಿ ಲೀಗ್ ಹಂತವು ಒಂದು ರೀತಿಯಲ್ಲಿ ಭಾರತ ತಂಡಕ್ಕೆ ಪ್ರಯೋಗದ ಕಣವಾಗಿತ್ತು ಎನ್ನಲ್ಲಡ್ಡಿಯಿಲ್ಲ. ಎಂ.ಎಸ್.ಕೆ. ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿಯ ಎಡವಟ್ಟುಗಳು ಬಹಿರರಂಗವಾಗಿದ್ದೂ ಆಯಿತು. ಆದರೆ, ಈ ಎಲ್ಲ ವೈರುದ್ಧ್ಯಗಳನ್ನೂ ಮೀರಿ ವಿರಾಟ್ ಕೊಹ್ಲಿ ಬಳಗವು ಸೆಮಿಫೈನಲ್‌ಗೆ ಬಂದು ನಿಂತಿದೆ.

ಕೋಟಿ ಕೋಟಿ ಅಭಿಮಾನಿಗಳ ವಲಯದಲ್ಲಿ ವಿಶ್ವಕಪ್ ಗೆಲುವಿನ ಆಸೆ ಹಸಿರು ಮರವಾಗಿ ನಿಂತಿದೆ. ಆದರೆ ಇಲ್ಲಿಯವರೆಗಿನ ಆಟ ನೋಡಿದರೆ, ಬೌಲರ್‌ಗಳನ್ನು ಹೊರತುಪಡಿಸಿದರೆ ಉಳಿದವರು ಇನ್ನೂ ಚೆನ್ನಾಗಿ ಆಡಬಹುದಾಗಿತ್ತು ಎಂಬ ಭಾವನೆ ಬರದಿರದು. ಮುಂದಿನ ಹಂತದಲ್ಲಿ ಅಭಿಮಾನಿಗಳ ನಿರೀಕ್ಷೆಗಳನ್ನು ಈಡೇರಿಸುವ ಎಲ್ಲ ಸಾಮರ್ಥ್ಯವೂ ಭಾರತದ ಆಟಗಾರರಲ್ಲಿ ಇದೆ. ಅದು ಕಾರ್ಯರೂಪಕ್ಕೆ ಬರಬೇಕಷ್ಠೇ.

ಹೊಣೆ ನಿಭಾಯಿಸಿದ ರೋಹಿತ್‌

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಹೊಡೆದಿರುವ ರೋಹಿತ್ ಈ ಟೂರ್ನಿಯಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ಎದುರು ಅವರು ಶತಕ ಗಳಿಸಿದ್ದು ಇಲ್ಲಿ ಗಮನಾರ್ಹ. ಇಂಗ್ಲೆಂಡ್ ಎದುರಿನ ಪಂದ್ಯ ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿಯೂ ಭಾರತಕ್ಕೆ ಜಯ ಕೊಡಿಸುವಲ್ಲಿ ಅವರ ಶತಕಗಳೇ ಪ್ರಮುಖವಾಗಿದ್ದವು. ಚಾಂಪಿಯನ್ ಆಸ್ಟ್ರೇಲಿಯಾ ಎದುರು ಅರ್ಧಶತಕ ಗಳಿಸಿದ್ದರು. ಆ ಪಂದ್ಯದಲ್ಲಿ ಶತಕ ಗಳಿಸಿದ್ದ ಶಿಖರ್ ಧವನ್ ಗಾಯಗೊಂಡರು. ನಂತರದ ಪಂದ್ಯಗಳಿಗೆ ಅವರು ಅಲಭ್ಯರಾದರು.

ಪಾಕಿಸ್ತಾನ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ಕೆ.ಎಲ್ . ರಾಹುಲ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ ರೋಹಿತ್ ಸಂಪೂರ್ಣ ಹೊಣೆ ಹೊತ್ತರು. ಏಕೆಂದರೆ ಆ ಪಂದ್ಯದಲ್ಲಿ ರಾಹುಲ್ ಅರ್ಧಶತಕ ಗಳಿಸಿದರೂ ಹೊಸ ಚೆಂಡು ಎದುರಿಸುವಲ್ಲಿ ಆತ್ಮವಿಶ್ವಾಸ ತುಳುಕಿದಂತೆ ಕಾಣಲಿಲ್ಲ. ಎರಡು ಹೊಸ ಚೆಂಡು ಎದುರಿಸುವ ಸವಾಲು ಇರುವ ಈ ಟೂರ್ನಿಯಲ್ಲಿ ರೋಹಿತ್ ಫುಲ್ ಮಾರ್ಕ್ಸ್‌ ಗಳಿಸಿದ್ದಾರೆ. ಇಲ್ಲಿ ತಮಗೆ ಲಭಿಸಿದ ಜೀವದಾನಗಳನ್ನು ಸಮರ್ಥವಾಗಿ ಬಳಸಿಕೊಂಡರು.

ಸೆಮಿಫೈನಲ್‌ನಲ್ಲಿ ಅವರ ಆಟವೇ ಪ್ರಮುಖವಾಗಲಿದೆ. ಅವರಿಗೆ ಇನ್ನೊಂದು ಬದಿಯಿಂದ ಗಟ್ಟಿ ಜೊತೆಯಾಟದ ಬಲ ತುಂಬಲು ರಾಹುಲ್ ಸಿದ್ಧವಾಗಬೇಕಿದೆ. ಒಂದೊಮ್ಮೆ ಅವರು ಸಿದ್ಧವಾಗದಿದ್ದರೆ ಅವರನ್ನು ಮತ್ತೆ ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವ ಚಿಂತನೆಯೂ ನಡೆಯಬಹುದು. ಈಗಾಗಲೇ ರಿಷಭ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಭರವಸೆ ಮೂಡಿಸಿದ್ದಾರೆ. ಅವರು ಐದು ಅಥವಾ ಆರನೇ ಕ್ರಮಾಂಕದಲ್ಲಿಯೂ ಮಿಂಚುವ ಸಾಮರ್ಥ್ಯ ಇರುವ ಆಟಗಾರ. ಆದ್ದರಿಂದ ರಾಹುಲ್‌ಗೆ ನಾಲ್ಕನೇ ಕ್ರಮಾಂಕ, ನೀಡಿ ಮತ್ತೊಬ್ಬ ಕನ್ನಡಿಗ ಮಯಂಕ್ ಅಗರವಾಲ್ ಅವರಿಗೆ ಇನಿಂಗ್ಸ್ ಆರಂಭಿಸುವ ಹೊಣೆಯನ್ನೂ ನೀಡಬಹುದು. ಆದರೆ, ಮಹತ್ವದ ಘಟ್ಟದಲ್ಲಿ ಇಂತಹದೊಂದು ಪ್ರಯೋಗಕ್ಕೆ ತಂಡದ ಮ್ಯಾನೇಜ್‌ಮೆಂಟ್ ಕೈಹಾಕುವುದೇ ಎನ್ನುವುದೇ ಪ್ರಶ್ನೆ.

ಅದೇನೇ ಇರಲಿ; ತಂಡದ ನಾಯಕ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಲಯದಲ್ಲಿರುವುದು ವಿಶ್ವಾಸ ಹೆಚ್ಚಿಸಿದೆ. ಸತತ ಐದು ಅರ್ಧಶತಕಗಳನ್ನು ಹೊಡೆದಿರುವ ಅವರು ದಾಖಲೆ ಬರೆದಿದ್ದಾರೆ. ಆದರೆ ಬ್ಯಾಟ್‌ನಿಂದ ಒಂದು ಶತಕ ಅರುಳುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ನಾಲ್ಕರ ಘಟ್ಟದಲ್ಲಿ ಅವರೇನಾದರೂ ತಮ್ಮ ನೈಜ ಸಾಮರ್ಥ್ಯವನ್ನು ಸಂಪೂರ್ಣ ಪಣಕ್ಕಿಟ್ಟರೆ ಎದುರಾಳಿ ತಂಡದ ಬೌಲರ್‌ಗಳು ತಮ್ಮ ಅಭಿಮಾನಿಗಳ ಪಾಲಿಗೆ ಖಳನಾಯಕರಾಗುವುದು ಖಚಿತ!

ವಿಶ್ವಾಸ ಉಳಿಸಿಕೊಂಡ ವೇಗದ ಪಡೆ

ಇಂಗ್ಲೆಂಡ್ ಪಿಚ್‌ಗಳಲ್ಲಿ ಮಧ್ಯಮವೇಗಿಗಳ ಪಾತ್ರ ದೊಡ್ಡದು. ಆದ್ದರಿಂದ ಅಂತಹದ್ದೊಂದು ಬೌಲಿಂಗ್ ಪಡೆಯನ್ನು ಕಟ್ಟಲು ಕಳೆದ ನಾಲ್ಕು ವರ್ಷಗಳಿಂದ ಭಾರತವು ಮಾಡಿದ್ದ ಪ್ರಯತ್ನ ಈಗ ಫಲ ನೀಡಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಕ್ರಮಾಂಕದಲ್ಲಿರುವ ಜಸ್‌ಪ್ರೀತ್ ಬೂಮ್ರಾ ತಮ್ಮ ಆಟ ತೋರಿಸಿದ್ದಾರೆ. ಅವರ ಕರಾರುವಾಕ್‌ ಯಾರ್ಕರ್‌ಗಳು ಭಾರತದ ಗೆಲುವಿಗೆ ಮಹತ್ವದ ಪಾತ್ರ ವಹಿಸಿವೆ.

ಆಸ್ಟ್ರೇಲಿಯಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ತಂಡಗಳ ಎದುರಿನ ಪಂದ್ಯಗಳಲ್ಲಿ ಅವರು ಪ್ರಮುಖ ಘಟ್ಟಗಳಲ್ಲಿ ಜೊತೆಯಾಟಗಳನ್ನು ಮುರಿದಿದ್ದು ತಂಡದ ಗೆಲುವಿಗೆ ಕಾರಣವಾಯಿತು. ಭುವನೇಶ್ವರ ಕುಮಾರ್‌ ಗಾಯಾಳಾಗಿದ್ದರಿಂದ ಅವಕಾಶ ಪಡೆದ ಮೊಹಮ್ಮದ್ ಶಮಿಯಂತೂ ಅಂತೂ ಮೂರು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿಬಿಟ್ಟಿದ್ದಾರೆ

ಗಾಯದಿಂದ ದೈಹಿಕವಾಗಿ ಮತ್ತು ಕೌಟುಂಬಿಕ ಸಮಸ್ಯೆಯಿಂದ ಮಾನಸಿಕವಾಗಿ ಜರ್ಜರಿತವಾಗಿದ್ದ ಶಮಿ ಈಗ ತಮ್ಮ ಫಿಟ್‌ನೆಸ್‌ ತೋರಿಸಿದ್ದಾರೆ. ಅಫ್ಗಾನಿಸ್ತಾನ ಎದುರು ಕಣಕ್ಕಿಳಿದಿದ್ದ ಶಮಿ ‘ಹ್ಯಾಟ್ರಿಕ್‌’ ಸಾಧನೆಮಾಡಿ ತಂಡದ ಗೆಲುವಿಗೆ ಕಾರಣರಾಗಿದ್ದರು.
ಇಂಗ್ಲೆಂಡ್‌ ಪಿಚ್‌ಗಳ ಗುಣ, ಬೀಸುವ ಗಾಳಿಯ ಲಯದೊಂದಿಗೆ ಸ್ನೇಹ ಸಾಧಿಸಿರುವ ಅವರಿಗೆ ಸಫಲತೆ ಒಲಿದಿದೆ. ಇದೀಗ ಭುವಿ ಕೂಡ ಫಿಟ್ ಆಗಿ ಕಣಕ್ಕೆ ಮರಳಿರುವುದು ಪ್ಲಸ್ ಪಾಯಿಂಟ್.

ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಮೊದಲ ಎರಡ್ಮೂರು ಪಂದ್ಯಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ, ರಿಸ್ಟ್‌ ಸ್ಪಿನ್ನರ್ ಚಾಹಲ್ ನಂತರದ ಪಂದ್ಯಗಳಲ್ಲಿ ದುಬಾರಿಯಾದರು. ಇನ್ನೊಬ್ಬ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರಿಗೆ ಇನ್ನೂ ಆಡುವ ಹನ್ನೊಂದರಲ್ಲಿ ಅವಕಾಶವೇ ಲಭಿಸಿಲ್ಲ. ಬದಲೀ ಫೀಲ್ಡರ್‌ ಆಗಿ ಸಿಕ್ಕ ಅವಕಾಶಗಳಲ್ಲಿಯೇ ಉತ್ತಮ ಕ್ಯಾಚ್‌ಗಳನ್ನು ಪಡೆದು ಮಿಂಚಿದ್ದಾರೆ.

ಹಾರ್ದಿಕ್ ಪಾಂಡ್ಯ ತಮ್ಮ ಮೇಲೆ ಇಟ್ಟಿದ್ದ ಭರವಸೆಯನ್ನು ತಕ್ಕಮಟ್ಟಿಗೆ ಈಡೇರಿಸಿದ್ದಾರೆ. ನಾಲ್ಕು, ಐದು ಮತ್ತು ಆರನೇ ಕ್ರಮಾಂಕಗಳಲ್ಲಿ ಬ್ಯಾಟ್‌ ಮಾಡಿರುವ ಅವರು ತಾವು ಎಲ್ಲದಕ್ಕೂ ಸಿದ್ಧ ಎಂದಿದ್ದಾರೆ. ಬಾಂಗ್ಲಾ ವಿರುದ್ಧ ಬಿಟ್ಟರೆ ಉಳಿದೆಲ್ಲ ಪಂದ್ಯಗಳಲ್ಲಿಯೂ ಅವರ ಕಾಣಿಕೆ ಉಪಯುಕ್ತ. ‘ಕಾಫಿ ವಿತ್ ಕರಣ್’ ಕಾರ್ಯಕ್ರಮದ ವಿವಾದದ ನಂತರ ತಂಡಕ್ಕೆ ಮರಳಿದ್ದ ಅವರು ತಮ್ಮನ್ನು ಆಟದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಧೋನಿ ಎಂಬ ಚಾಣಕ್ಯ

ವಿರಾಟ್ ನಾಯಕತ್ವದ ಯಶಸ್ಸಿನಲ್ಲಿ ಮಹೇಂದ್ರಸಿಂಗ್ ಧೋನಿಯ ಪಾಲು ದೊಡ್ಡದು. ಸ್ಟಂಪಿಂಗ್‌ನಲ್ಲಿ ಮಿಂಚಿನ ವೇಗ. ಬೌಲರ್‌ಗಳಿಗೆ ನೀಡುವ ಸಲಹೆಗಳು ತಂಡಕ್ಕೆ ನೆರವಾಗುತ್ತಿವೆ. ಆದರೆ ಬ್ಯಾಟಿಂಗ್‌ನಲ್ಲಿ ಅವರ ತಾಳ್ಮೆಯ ಆಟವು ಬಹಳಷ್ಟು ಜನರಿಗೆ ರುಚಿಸುತ್ತಿಲ್ಲ. ಅವರ ಹೆಲಿಕಾಪ್ಟರ್ ಶಾಟ್ ಮತ್ತು ಸಿಕ್ಸರ್ ಫಿನಿಷಿಂಗ್‌ಗಳು ಇಲ್ಲಿ ಕಾಣುತ್ತಿಲ್ಲ. ಆದರೆ, ಸಂದರ್ಭಕ್ಕೆ ತಕ್ಕಂತೆ ತಮ್ಮ ಆಟವನ್ನು ರೂಪಾಂತರಗೊಳಿಸಿಕೊಳ್ಳುವ ಅವರ ಸಾಮರ್ಥ್ಯಕ್ಕೆ ಒತ್ತು ಸಿಗುತ್ತಿಲ್ಲ. ಸ್ಕೋರ್‌ ಬೋರ್ಡ್‌ ಮೇಲೆ ದೊಡ್ಡ ಮೊತ್ತ ಇದ್ದಾಗ ಕ್ರೀಸ್‌ಗೆ ಬಂದರೆ ಬೀಸಾಟವಾಡುವ ಧೈರ್ಯ ಎಲ್ಲ ಬ್ಯಾಟ್ಸ್‌ಮನ್‌ಗಳಿಗೂ ಇರುತ್ತದೆ. ಆದರೆ ತಂಡದ ಮೊತ್ತ ಕಡಿಮೆಯಿದ್ದಾಗಲೂ ಅಂತಹ ಆಟವಾಡಲು ಆಗದು. ಆದ್ದರಿಂದಲೇ ತಮ್ಮ ಆಟವನ್ನು ಹತೋಟಿಯಲ್ಲಿಟ್ಟು ತಂಡಕ್ಕೆ ಸ್ಥಿರತೆ ಒದಗಿಸಲು ಪ್ರಯತ್ನಿಸಿದ್ದಾರೆ ಎಂದೂ ಕೆಲವರು ವಿಶ್ಲೇಷಿಸಿದ್ದಾರೆ. ಅದೇನೇ ಇರಲಿ; ಧೋನಿ ಅನುಭವವು ತಂಡಕ್ಕೆ ದೊಡ್ಡ ಆಸ್ತಿಯಾಗಿರುವುದಂತೂ ನಿಜ. ಅಫ್ಗನ್ ಎದುರಿನ ಪಂದ್ಯದಲ್ಲಿ ಹ್ಯಾಟ್ರಿಕ್ ವೀರನಾಗಿದ್ದ ಶಮಿ ಕೂಡ ತಮ್ಮ ಸಫಲತೆಯ ಹಿಂದೆ ಧೋನಿ ಸಲಹೆ ಇತ್ತು ಎಂದು ಹೇಳಿರುವುದು ಇಲ್ಲಿ ಗಮನಾರ್ಹ.

ಭಾರತ ತಂಡವು ಇದೀಗ ಏಳನೇ ಬಾರಿ ಸೆಮಿಫೈನಲ್ ತಲುಪಿದೆ. ಅದರಲ್ಲಿ ಮೂರು ಸಲ ಮಾತ್ರ ಫೈನಲ್‌ಗೆ ಪ್ರವೇಶಿಸಿತ್ತು. ಎರಡು ಬಾರಿ ಪ್ರಶಸ್ತಿ ಜಯಿಸಿತ್ತು. ಆದ್ದರಿಂದ ಈ ಹಂತದಲ್ಲಿ ಎದುರಾಗಲಿರುವ ಬಲಿಷ್ಠ ತಂಡವನ್ನು ಎದುರಿಸಲು ಭಾರತ ತಂಡವು ಸಜ್ಜಾಗಬೇಕಿದೆ. ಏಕೆಂದರೆ ಇಲ್ಲಿಯವರೆಗಿನ ಆಟವೇ ಬೇರೆ. ಸೆಮಿ ಹಂತದ ಸವಾಲೇ ಬೇರೆ. ಬಹುತೇಕ ಇಂಗ್ಲೆಂಡ್ ತಂಡವೇ ಭಾರತಕ್ಕೆ ಎದುರಾಗುವುದು ಖಚಿತವಾಗಿದೆ. ಆತಿಥೇಯ ತಂಡವು ಈಗ ಭರ್ಜರಿ ಫಾರ್ಮ್‌ನಲ್ಲಿದೆ. ಒಂದು ಹಂತದಲ್ಲಿ ಹೊರಬೀಳುವ ಆತಂಕ ಎದುರಿಸಿದ್ದ ಇಂಗ್ಲೆಂಡ್ ನಂತರ ಪುಟಿದೆದ್ದು ನಿಂತಿದೆ. ಲೀಗ್ ಹಂತದಲ್ಲಿ ಭಾರತವನ್ನು ಸೋಲಿಸಿರುವ ಏಕೈಕ ತಂಡ ಇಂಗ್ಲೆಂಡ್. ಆದ್ದರಿಂದ ಸೇಡು ತೀರಿಸಿಕೊಳ್ಳಲು ವಿರಾಟ್ ಪಡೆಗೆ ಇದು ಸದವಕಾಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT