ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಶತಕರಹಿತ ಪಯಣಕ್ಕೆ ವಿರಾಮ? ಹೊನಲು ಬೆಳಕಿನಲ್ಲಿ ಮೂಡಿದ ಆಶಾಕಿರಣ

ಚಿನ್ನಸ್ವಾಮಿ ಅಂಗಳದ ಹೊನಲು ಬೆಳಕಿನಲ್ಲಿ ಮೂಡಿದ ಆಶಾಕಿರಣ
Last Updated 10 ಮಾರ್ಚ್ 2022, 21:04 IST
ಅಕ್ಷರ ಗಾತ್ರ

ಬೆಂಗಳೂರು: ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಮೊಟ್ಟಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ನಡೆದು ಎರಡು ವರ್ಷಗಳು ಕಳೆದಿವೆ.

ಈ ಅವಧಿಯಲ್ಲಿ ಭಾರತ ತಂಡದ ರನ್‌ ಯಂತ್ರವೆಂಬ ಹೆಗ್ಗಳಿಕೆ ಹೊಂದಿರುವ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಶತಕ ಹೊರಹೊಮ್ಮಿಲ್ಲ. ಇದೀಗ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಭಾರತದ ನೆಲದಲ್ಲಿ ಎರಡನೇ ಪಿಂಕ್ ಬಾಲ್ ಟೆಸ್ಟ್ ಆಯೋಜಿಸಲು ಸಿದ್ಧವಾಗಿದೆ. ಇದೇ ಶನಿವಾರ ನಗರದ ಚಿನ್ನಸ್ವಾಮಿಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್‌ನಲ್ಲಿ ವಿರಾಟ್ ಶತಕದ ಬರ ದೂರವಾಗುವುದೇ ಎಂಬ ನಿರೀಕ್ಷೆಗಳು ಈಗ ಗರಿಗೆದರಿವೆ.

ಹೋದ ವಾರ ಮೊಹಾಲಿಯಲ್ಲಿ ನಡೆದ ಟೆಸ್ಟ್ ಪಂದ್ಯವು ವಿರಾಟ್ ಅವರಿಗೆ 100ನೇಯದ್ದಾಗಿತ್ತು. ಅದ ರಲ್ಲಿಯೂ ಅವರು ಶತಕ ಬಾರಿಸುವ ನಿರೀಕ್ಷೆ ಮುಡಿತ್ತು. ಆದರೆ, ಮೊದಲ ಇನಿಂಗ್ಸ್‌ನಲ್ಲಿ ಅವರು 45 ರನ್‌ ಗಳಿಸಿ ಔಟಾಗಿದ್ದರು.

ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ಶತಕಗಳ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಇರುವ ಆಟಗಾರನೆಂದರೆ ವಿರಾಟ್ ಒಬ್ಬರೇ ಎಂಬ ಮಾತಿದೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಆಡಿದ 15 ಟೆಸ್ಟ್‌ ಪಂದ್ಯಗಳಲ್ಲಿ ಅವರಿಂದ ಶತಕ ದಾಖಲಾಗಿಲ್ಲ.

ಕೋಲ್ಕತ್ತ ಟೆಸ್ಟ್‌ನಲ್ಲಿ ಅವರು ಕೊನೆಯದಾಗಿ ಮೂರಂಕಿ ಮೊತ್ತ ದಾಟಿದ್ದರು. ನಂತರ ಐದು ಅರ್ಧಶತಕ ಗಳಿಸಿದ್ದಾರೆ. ಏಕದಿನ, ಟಿ20 ಮತ್ತು ಐಪಿಎಲ್‌ನಲ್ಲಿಯೂ ಮೂರಂಕಿ ಮೊತ್ತ ತಲುಪಿಲ್ಲ.

‘ಪ್ರತಿಯೊಬ್ಬ ಆಟಗಾರನಿಗೂ ಇಂತಹ ಸಮಸ್ಯೆ ಒಮ್ಮೆಯಾದರೂ ಕಾಡುವುದನ್ನು ನಾವು ನೋಡಿದ್ದೇವೆ. ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜ ಆಟಗಾರನ 99 ಮತ್ತು 100ನೇ ಶತಕದ ನಡುವೆ ಸುಮಾರು ಒಂದು ವರ್ಷದ ಅಂತರ ಇತ್ತು. ಇಲ್ಲಿ ವಿರಾಟ್ ವಿಷಯದಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರು ಶತಕ ಗಳಿಸದಿದ್ದರೂ ತಮ್ಮ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡಿಕೊಂಡಿಲ್ಲ. ಅವರ ಫಿಟ್‌ನೆಸ್, ಹಾವಭಾವ ಮತ್ತು ಉತ್ಸಾಹಗಳು ಒಂದಿನಿತೂ ಕಡಿಮೆಯಾಗಿಲ್ಲ. ಆದ್ದರಿಂದ ಶೀಘ್ರದಲ್ಲಿಯೇ ಅವರಿಂದ ಶತಕದಾಟ ಹೊರಹೊಮ್ಮುವುದು ಖಚಿತ’ ಎಂದು ದೆಹಲಿಯಲ್ಲಿರುವ ವಿರಾಟ್ ಅವರ ಬಾಲ್ಯದ ಕೋಚ್ ರಾಜಕುಮಾರ್ ಶರ್ಮಾ ಹೇಳುತ್ತಾರೆ.

ಮೂರು ಮಾದರಿಗಳ ತಂಡಗಳ ನಾಯಕತ್ವವನ್ನು ಬಿಟ್ಟುಕೊಟ್ಟಿರುವ ವಿರಾಟ್ ಮೇಲಿನ ಒತ್ತಡ ಈಗ ಕಡಿಮೆಯಾಗಿದೆ. ಇದರಿಂದಾ ಅವರು ತಮ್ಮ ಬ್ಯಾಟಿಂಗ್ ವೈಭವವನ್ನು ಮರುಕಳಿಸುವ ನಿರೀಕ್ಷೆಯೂ ಇದೆ. ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದ ನೆಟ್ಸ್‌ನಲ್ಲಿ ತಮ್ಮ ಪದಚಲನೆ ಮತ್ತು ಹೊಡೆತಗಳ ಆಯ್ಕೆಯಕುರಿತು ಹೆಚ್ಚು ಒತ್ತು ನೀಡಿ ಅಭ್ಯಾಸ ಮಾಡಿದರು. ತಮ್ಮ ಲೋಪಗಳನ್ನು ತಿದ್ದಿಕೊಂಡು ಲಯಕ್ಕೆ ಮರಳುವ ಪ್ರಯತ್ನ ಅವರದ್ದಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಹೊನಲು ಬೆಳಕಿನಲ್ಲಿಯೇ ಶತಕ ಬರವನ್ನು ನೀಗಿಸಿಕೊಳ್ಳುವ ಛಲವೂ ಅವರ ಹಾವಭಾವದಲ್ಲಿ ಕಂಡಿತ್ತು.

ಅಷ್ಟಕ್ಕೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊಹ್ಲಿಗೆ ಉದ್ಯಾನನಗರಿ ‘ಎರಡನೇ ತವರೂರು’. ಈ ಕ್ರೀಡಾಂಗಣದಲ್ಲಿ ಅವರಿಗೆ ಹತ್ತಾರು ಸುಮಧುರ ನೆನಪುಗಳಿವೆ. ಆ ಸಾಲಿಗೆ ಮತ್ತೊಂದು ಸುಂದರ ಸ್ಮರಣೆ ಸೇರಿಸಿಕೊಳ್ಳುವ ಅವಕಾಶ ಈಗ ಅವರ ಮುಂದಿದೆ.

ಟೆಸ್ಟ್‌ ಪಂದ್ಯದ ವೀಕ್ಷಣೆಗೆ ಎಲ್ಲ ಆಸನ ಭರ್ತಿ ಮಾಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.

‘ಈ ಮೊದಲು ಕ್ರೀಡಾಂಗಣದ ಆಸನ ಸಾಮರ್ಥ್ಯದ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲು ಅನುಮತಿ ಲಭಿಸಿತ್ತು. ಆದರೆ ಸುಮಾರು ಎರಡು ವರ್ಷಗಳ ನಂತರ ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆಯೋಜನೆಯಾಗುತ್ತಿದೆ. ಅದಕ್ಕಾಗಿ ಅಭಿಮಾನಿಗಳಿಂದ ಟೆಕೆಟ್‌ಗಾಗಿ ಬಹಳಷ್ಟು ಬೇಡಿಕೆ ವ್ಯಕ್ತವಾಗಿದೆ. ಅಲ್ಲದೇ ಇದೇ ಮೊದಲ ಸಲ ಇಲ್ಲಿ ಹೊನಲು ಬೆಳಕಿನ ಟೆಸ್ಟ್ ನಡೆಯಲಿದೆ. ಈ ಐತಿಹಾಸಿಕ ಪಂದ್ಯವನ್ನು ನೋಡಲು ಜನರು ಉತ್ಸುಕರಾಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ಮತ್ತು ಬಿಸಿಸಿಐನ ಅನುಮತಿ ಪಡೆದು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ. ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರು ಕೋವಿಡ್ ತಡೆ ಲಸಿಕಗೆ ಡಬಲ್‌ ಡೋಸ್ ಪಡೆದಿರುವುದು ಕಡ್ಡಾಯ. ಲಸಿಕೆ ಪಡೆದ ಪ್ರಮಾಣಪತ್ರ ಪ್ರದರ್ಶಿಸಬೇಕು.

‘ಬೆಂಗಳೂರಿನಲ್ಲಿ ಕ್ರಿಕೆಟ್ ಸಂಸ್ಕೃತಿ ಶ್ರೀಮಂತವಾಗಿದೆ. ಹಲವಾರು ದಿಗ್ಗಜ ಆಟಗಾರರನ್ನು ದೇಶಕ್ಕೆ ಕೊಟ್ಟಿರುವ ಹೆಗ್ಗಳಿಕೆ ಈ ನಗರದ್ದು. ಇಲ್ಲಿರುವ ಸಾವಿರಾರು ಕ್ರಿಕೆಟ್‌ಪ್ರೇಮಿಗಳಿಗೆ ನಿರಾಶೆಗೊಳಿಸದಿರಲು ಈ ಕ್ರಮಕ್ಕೆ ಮುಂದಾಗಿದ್ದೇವೆ. ಅದಕ್ಕೆ ಬಿಸಿಸಿಐ ಮತ್ತು ಸರ್ಕಾರ ಅನುಮತಿ ನೀಡಿವೆ‘ ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT