ಭಾನುವಾರ, ಮಾರ್ಚ್ 7, 2021
18 °C

ಎಲ್ಲರ ಅಭಿಪ್ರಾಯವನ್ನೂ ಗೌರವಿಸಬೇಕು: ಕಪಿಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ವಿರಾಟ್ ಕೊಹ್ಲಿ ಅವರ ಅಭಿಪ್ರಾಯವನ್ನು ಗೌರವಿಸಬೇಕು. ಪ್ರತಿಯೊಬ್ಬರ ವೈಯಕ್ತಿಕ ಅಭಿಪ್ರಾಯಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹಿರಿಯ ಕ್ರಿಕೆಟಿಗ ಮತ್ತು ಭಾರತ ತಂಡದ ಕೋಚ್ ಆಯ್ಕೆ ಮಾಡಲಿರುವ ಕ್ರಿಕೆಟ್ ಆಡಳಿತ ಸಮಿತಿಯ ಸದಸ್ಯ ಕಪಿಲ್ ದೇವ್ ಹೇಳಿದರು.

'ಭಾರತ ತಂಡಕ್ಕೆ ರವಿಶಾಸ್ತ್ರಿ ಅವರೇ ಮುಖ್ಯ ಕೋಚ್ ಆಗಿ ಮುಂದುವರಿಯಬೇಕು’ ಎಂದು ವಿರಾಟ್ ಈಚೆಗೆ ಹೇಳಿದ್ದರು.ಈ ಹೇಳಿಕೆಯ ಕುರಿತು ಕೆಲವು ಕ್ರಿಕೆಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಸೌರವ್ ಗಂಗೂಲಿ ಸೇರಿದಂತೆ ಇನ್ನೂ ಕೆಲವರು ಬೆಂಬಲಿಸಿ್ದರು.

ಗುರುವಾರ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಈಸ್ಟ್ ಬೆಂಗಾಲ್ ಕ್ಲಬ್ ಕಾರ್ಯಕ್ರಮದಲ್ಲಿ ‘ಭಾರತ ಗೌರವ’ ಪುರಸ್ಕಾರ ಸ್ವೀಕರಿಸುವ ಮುನ್ನ ಕಪಿಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಭಾರತ ತಂಡದ ಹಿತದೃಷ್ಟಿಯಿಂದ ಸಮರ್ಥ ವ್ಯಕ್ತಿಯನ್ನೇ ಕೋಚ್ ಹುದ್ದೆಗೆ ಆಯ್ಕೆ ಮಾಡಲು ನಮ್ಮ ಸಮಿತಿಯು ಕಟಿಬದ್ಧವಾಗಿದೆ. ಈ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ. ವಿರಾಟ್ ತಮ್ಮ ಅಭಿಪ್ರಾಯವನ್ನು ವ್ಯಕ್ತ‍ಪಡಿಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ’ ಎಂದು ಕಪಿಲ್ ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಈಸ್ಟ್ ಬೆಂಗಾಲ್ ಕ್ಲಬ್‌ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ‘ಪರಂಪರೆಯು ಮುಖ್ಯವಾದದ್ದು. ಅದನ್ನು ಕಾಪಾಡಿಕೊಂಡು ಹೋಗುವುದು ಅವಶ್ಯ. ನಮ್ಮೆಲ್ಲರನ್ನೂ ಬೆಂಗಾಲಿ, ಪಂಜಾಬಿ, ದಕ್ಷಿಣ ಭಾರತೀಯ, ತಮಿಳಿಯನ್ ಎಂದೆಲ್ಲ ಗುರುತಿಸುತ್ತಾರೆ. ಅದೆಲ್ಲವೂ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಭಾಗ. ಕ್ರೀಡೆಯಲ್ಲಿಯೂ ಅಷ್ಟೇ. ವಿಂಬಲ್ಡನ್ ಟೂರ್ನಿಯು ಹುಲ್ಲಿನ ಅಂಕಣದ ಮೇಲೆ ಆಡಲಾಗುತ್ತದೆ. ಅದು ಹುಲ್ಲಿನಂಕಣದ ಟೆನಿಸ್‌ನ ಸಂಪ್ರದಾಯದ ಪ್ರತೀಕ’ ಎಂದರು.

ತಾವು ಫುಟ್‌ಬಾಲ್ ದಿಗ್ಗಜ ಡೀಗೊ ಮರಡೋನಾ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ ಕಪಿಲ್, ‘ಎಲ್ಲ ಕ್ರೀಡಾಪಟುಗಳಲ್ಲಿ ಅತ್ಯಂದ ಚುರುಕಾದವರು ಮರಡೋನಾ. ಅತ್ಯಂತ ವೇಗವಾಗಿ ಓಡುತ್ತಿದ್ದರು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು