ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಮುಖ್ಯಸ್ಥ ಸ್ಥಾನಕ್ಕೆ ವಿ.ವಿ.ಎಸ್‌.ಲಕ್ಷ್ಮಣ್‌

ರಾಹುಲ್‌ ದ್ರಾವಿಡ್‌ ಸ್ಥಾನ ತುಂಬಲಿರುವ ದಿಗ್ಗಜ ಕ್ರಿಕೆಟಿಗ
Last Updated 14 ನವೆಂಬರ್ 2021, 13:15 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ಮಾಜಿ ಬ್ಯಾಟರ್‌ ವಿ.ವಿ.ಎಸ್‌.ಲಕ್ಷ್ಮಣ್‌ ಅವರು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯ ಮುಂದಿನ ಮುಖ್ಯಸ್ಥರಾಗಲಿದ್ದಾರೆ. ಇದನ್ನು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ರಾಹುಲ್‌ ದ್ರಾವಿಡ್‌ ಅವರ ಸ್ಥಾನವನ್ನು ಲಕ್ಷ್ಮಣ್‌ ವಹಿಸಿಕೊಳ್ಳುವರು. ಭಾರತ ತಂಡದ ಮುಖ್ಯ ಕೋಚ್‌ ಆಗಿದ್ದ ರವಿ ಶಾಸ್ತ್ರಿ ಅವರ ಅವಧಿ ಇತ್ತೀಚೆಗೆ ಮುಗಿದ ಕಾರಣ ಆ ಸ್ಥಾನಕ್ಕೆ ರಾಹುಲ್‌ ದ್ರಾವಿಡ್‌ ಅವರನ್ನು ನೇಮಕ ಮಾಡಲಾಗಿದೆ.

‘ಲಕ್ಷ್ಮಣ್‌ ಅವರು ಎನ್‌ಸಿಎಯ ನೂತನ ಮುಖ್ಯಸ್ಥರಾಗಲಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇಲೆ ಹಿರಿಯ ಅಧಿಕಾರಿ ಸುದ್ದಿಸಂಸ್ಥೆಗೆ ಖಚಿತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಆಡುವ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಮೆಂಟರ್‌ ಸ್ಥಾನದಿಂದ ಲಕ್ಷ್ಮಣ್‌ ಈಗಾಗಲೇ ನಿರ್ಗಮಿಸಿದ್ದಾರೆ. ಹಿತಾಸಕ್ತ ಸಂಘರ್ಷ ನಿಯಮ ತಪ್ಪಿಸುವ ಉದ್ದೇಶದಿಂದ ಲಕ್ಷ್ಮಣ್‌ ಅವರು ವೀಕ್ಷಕ ವಿವರಣೆಗಾರರ ಪ್ಯಾನೆಲ್‌ನಿಂದ ಹೊರಬಂದಿದ್ದಾರೆ ಮತ್ತು ಪತ್ರಿಕೆಗಳಿಗೆ ಅಂಕಣ ಬರೆಯುವುದನ್ನು ನಿಲ್ಲಿಸಿದ್ದಾರೆ.

ಕೋಲ್ಕತ್ತದಲ್ಲಿ ಡಿಸೆಂಬರ್‌ 4ರಂದು ನಡೆಯಲಿರುವ ಬಿಸಿಸಿಐನ ವಾರ್ಷಿಕ ಮಹಾಸಭೆಗೆ ಮೊದಲೇ ಲಕ್ಷ್ಮಣ್‌ ಅವರ ನೇಮಕ ಜಾರಿಗೆ ಬರಲಿದೆ.

ಎನ್‌ಸಿಎ ಚೀಫ್‌ ಹುದ್ದೆ ವಹಿಸಿಕೊಳ್ಳಲು ಬಿಸಿಸಿಐ ನೀಡಿದ್ದ ಕೊಡುಗೆಗೆ ಲಕ್ಷ್ಮಣ್‌ ಆರಂಭದಲ್ಲಿ ಆಸಕ್ತಿ ತೋರಿರಲಿಲ್ಲ. ಹೈದರಾಬಾದ್‌ನಲ್ಲಿ ನೆಲೆಸಿರುವ ಅವರು, ಅಕಾಡೆಮಿ ಬೆಂಗಳೂರಿನಲ್ಲಿರುವ ಕಾರಣ ಅಲ್ಲಿ ಕಡೇಪಕ್ಷ 200 ದಿನಗಳ ಕಾಲ ಇರಬೇಕಾಗುತ್ತದೆ.

ಭಾರತ ತಂಡದ ಮುಖ್ಯ ಕೋಚ್‌ ಮತ್ತು ಎನ್‌ಸಿಎ ಮುಖ್ಯಸ್ಥರ ನಡುವೆ ಸಮನ್ವಯ ಸರಾಗವಾಗಿ ಆಗಲು ಬಿಸಿಸಿಐ ಬಯಸಿದ್ದು, ಈಗ ಭಾರತದ ಇಬ್ಬರು ದಿಗ್ಗಜ ಆಟಗಾರರಾದ ದ್ರಾವಿಡ್‌ ಮತ್ತು ವೆಂಕಟಸಾಯಿ ಲಕ್ಷ್ಮಣ್‌ ಈ ಪ್ರಮುಖ ಹುದ್ದೆಗಳನ್ನು ವಹಿಸಿಕೊಳ್ಳಲಿದ್ದಾರೆ.

ಭಾರತ ಸೀನಿಯರ್‌ ತಂಡದ ಆಯ್ಕೆಗೆ ದಾರಿಮಾಡಿಕೊಡುವ 19 ವರ್ಷದೊಳಗಿನವರ ತಂಡ ಮತ್ತು ಭಾರತ ‘ಎ’ ತಂಡ ಸಜ್ಜುಗೊಳಿಸುವ ಹೊಣೆ ಲಕ್ಷ್ಮಣ್‌ ಹೆಗಲೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT