ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕ್‌ಗೆ ಇನ್ನಷ್ಟು ಅವಕಾಶ; ಭುವಿ, ಹರ್ಷಲ್‌ ಬೆಂಬಲಕ್ಕೆ ನಿಂತ ರೋಹಿತ್

Last Updated 26 ಸೆಪ್ಟೆಂಬರ್ 2022, 12:31 IST
ಅಕ್ಷರ ಗಾತ್ರ

ಹೈದರಾಬಾದ್‌: ಟಿ20 ವಿಶ್ವಕಪ್‌ಗೆ ಮುನ್ನ ವಿಕೆಟ್‌ಕೀಪರ್‌ ಬ್ಯಾಟರ್‌ ದಿನೇಶ್‌ ಕಾರ್ತಿಕ್‌ಗೆ ಇನ್ನಷ್ಟು ಪಂದ್ಯಗಳಲ್ಲಿ ಆಡಲು ಅವಕಾಶ ನೀಡಲಾಗುವುದು ಎಂದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ.

ಈ ಮೂಲಕ ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲೂ ರಿಷಭ್ ಪಂತ್‌ ಬದಲು ಕಾರ್ತಿಕ್‌ಗೆ ಅಂತಿಮ ಇಲೆವೆನ್‌ನಲ್ಲಿ ಸ್ಥಾನ ನೀಡುವ ಸೂಚನೆ ನೀಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ತಿರುವನಂತಪುರದಲ್ಲಿ ಬುಧವಾರ ನಡೆಯಲಿದೆ.

ಏಷ್ಯಾ ಕಪ್‌ ಟೂರ್ನಿಯಲ್ಲಿ ಕಾರ್ತಿಕ್ ಬದಲು ಯುವ ಆಟಗಾರ ರಿಷಭ್‌ಗೆ ಸ್ಥಾನ ನೀಡಲಾಗಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಎಲ್ಲ ಮೂರು ಪಂದ್ಯಗಳಲ್ಲೂ ತಮಿಳುನಾಡಿನ ಅನುಭವಿ ಆಟಗಾರನಿಗೆ ಅವಕಾಶ ಲಭಿಸಿತ್ತು.

‘ವಿಶ್ವಕಪ್‌ಗೆ ಮುನ್ನ ಇಬ್ಬರಿಗೂ ಸಾಕಷ್ಟು ಪಂದ್ಯಗಳನ್ನು ಆಡುವ ಅವಕಾಶ ನೀಡುವುದು ಗುರಿಯಾಗಿತ್ತು. ದಿನೇಶ್‌ಗೆ ಇನ್ನಷ್ಟು ಅವಕಾಶ ದೊರೆಯಬೇಕು ಎಂಬುದು ನನ್ನ ಭಾವನೆ. ಏಕೆಂದರೆ ಈ ಸರಣಿಯಲ್ಲಿ ಅವರಿಗೆ ಹೆಚ್ಚು ಹೊತ್ತು ಬ್ಯಾಟ್‌ ಮಾಡಲು ಆಗಿಲ್ಲ. 3–4 ಎಸೆತಗಳನ್ನಷ್ಟೇ ಆಡಿದ್ದಾರೆ. ಅದು ತುಂಬಾ ಕಡಿಮೆಯಾಯಿತು’ ಎಂದಿದ್ದಾರೆ.

‘ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್‌ ವಿಭಾಗದ ಶಕ್ತಿ ಹಾಗೂ ದೌರ್ಬಲ್ಯವನ್ನು ಅರಿತುಕೊಂಡು ಅಂತಿಮ ಇಲೆವೆನ್ ಆಯ್ಕೆ ಮಾಡುತ್ತೇವೆ. ಎಡಗೈ ಬ್ಯಾಟರ್‌ ಬೇಕೇ (ಪಂತ್‌) ಅಥವಾ ಬಲಗೈ ಬ್ಯಾಟರ್‌ಅನ್ನು (ಕಾರ್ತಿಕ್‌) ಆಡಿಸಬೇಕೇ ಎಂಬುದನ್ನು ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಭುವಿ, ಹರ್ಷಲ್‌ಗೆ ಬೆಂಬಲ: ಈ ಸರಣಿಯಲ್ಲಿ ಅಷ್ಟೊಂದು ಪ್ರಭಾವಿ ಎನಿಸದ ವೇಗಿಗಳಾದ ಭುವನೇಶ್ವರ್‌ ಕುಮಾರ್‌ ಮತ್ತು ಹರ್ಷಲ್‌ ಪಟೇಲ್‌ ಅವರ ಬೆಂಬಲಕ್ಕೆ ರೋಹಿತ್‌ ನಿಂತಿದ್ದಾರೆ.

ಭುವನೇಶ್ವರ್‌ ಮತ್ತು ಗಾಯದಿಂದ ಚೇತರಿಸಿಕೊಂಡು ಬಂದಿರುವ ಹರ್ಷಲ್‌ ಅವರು ಪ್ರತಿ ಓವರ್‌ನಲ್ಲಿ ಸರಾಸರಿ 12ಕ್ಕೂ ಅಧಿಕ ರನ್‌ ಬಿಟ್ಟುಕೊಟ್ಟಿದ್ದರು.

‘ಭುವಿ ಅವರಂತಹ ಆಟಗಾರನ ಉಪಸ್ಥಿತಿ ತಂಡದ ಶಕ್ತಿಯನ್ನು ಹೆಚ್ಚಿಸುತ್ತದೆ. ಕೆಲವೊಂದು ವಿಭಾಗಗಳಲ್ಲಿ ಆಗಿರುವ ಲೋಪಗಳನ್ಜು ಸರಿಪಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಶೀಘ್ರದಲ್ಲೇ ಹಳೆಯ ಲಯ ಕಂಡುಕೊಳ್ಳುವ ವಿಶ್ವಾಸವಿದೆ’ ಎಂದು ನುಡಿದಿದ್ದಾರೆ.

‘ಹರ್ಷಲ್‌ ಅವರೂ ತಂಡದ ಪ್ರಮುಖ ಆಟಗಾರ. ಗಾಯದ ಕಾರಣ ಎರಡು ತಿಂಗಳು ಅಂಗಳದಿಂದ ದೂರವಿದ್ದ ಬಳಿಕ ಅವರು ಮರಳಿದ್ದಾರೆ. ಒಂದು ಸರಣಿಯಲ್ಲಿ ನೀಡಿದ ಪ್ರದರ್ಶನವನ್ನು ಆಧರಿಸಿ ಅವರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ ಹರ್ಷಲ್‌ ಒಟ್ಟು ಎಂಟು ಓವರ್‌ಗಳನ್ನು ಬೌಲ್‌ ಮಾಡಿದ್ದು, 99 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT