ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಹಂತಗಳ ತರಬೇತಿಗೆ ಸಿದ್ದತೆ: ಶ್ರೀಧರ್

Last Updated 2 ಜೂನ್ 2020, 19:30 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ದಿನಗಳಲ್ಲಿ ನಿರೀಕ್ಷೆಯಂತೆ ಕ್ರಿಕೆಟ್ ಪಂದ್ಯಗಳು ನಡೆದರೆ ಆಟಗಾರರು ಅದಕ್ಕೆ ಸಿದ್ಧವಾಗಿರಲು ನಾಲ್ಕು ಹಂತದ ತರಬೇತಿ ಮಾದರಿಯನ್ನು ಸಿದ್ಧಗೊಳಿಸಲಾಗಿದೆ. ಇದರಿಂದಾಗಿ ನಾಲ್ಕರಿಂದ ಆರು ವಾರಗಳಲ್ಲಿ ಆಟಗಾರರು ಪಂದ್ಯದಲ್ಲಿ ಆಡಲು ಫಿಟ್‌ ಆಗುವರು ಎಂದು ಭಾರತ ಕ್ರಿಕೆಟ್ ತಂಡದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಹೇಳಿದ್ದಾರೆ.

ಕೊರೊನಾ ವೈರಸ್ ಮಹಾಮಾರಿಯ ಸೋಂಕು ತಡೆಯಲು ಲಾಕ್‌ಡೌನ್‌ ಇದ್ದ ಕಾರಣ ಸುಮಾರು ಮೂರು ತಿಂಗಳುಗಳಿಂದ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ಈ ತಿಂಗಳಿನಲ್ಲಿ ಮತ್ತೆ ಕ್ರಿಕೆಟ್ ತರಬೇತಿ ಮತ್ತು ಕ್ಲಬ್‌ಗಳನ್ನು ಆರಂಭಿಸಲು ಕೇಂದ್ರ ಸರ್ಕಾರವು ಅನುಮಿ ನೀಡಿರುವ ಹಿನ್ನೆಲೆಯಲ್ಲಿ ಮತ್ತೆ ಚಟುವಟಿಕೆಗಳು ಆರಂಭಗೊಳ್ಳುವ ನಿರೀಕ್ಷೆ ಇದೆ. ಫಿಟ್‌ನೆಸ್, ಫೀಲ್ಡಿಂಗ್‌ ವಿಭಾಗಗಳಲ್ಲಿ ಬಹಳಷ್ಟು ಬದಲಾವಣೆಗಳ ಸಾಧ್ಯತೆಯೂ ಇದೆ.

ಈ ಕುರಿತು ಮಾತನಾಡಿರುವ ಶ್ರೀಧರ್, ‘ನಾಲ್ಕರಿಂದ ಆರು ವಾರಗಳ ಶಿಬಿರದಲ್ಲಿ ಆಟಗಾರರಿಗೆ ತರಬೇತಿ ನೀಡಿದರೆ ಅವರು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ಕಣಕ್ಕಿಳಿಯಲು ಸುಲಭವಾಗುತ್ತದೆ. ದೀರ್ಘ ಕಾಲ ಮೈದಾನದಿಂದ ದೂರವಿರುವ ಆಟಗಾರರು ಪಂದ್ಯಗಳಲ್ಲಿ ಆಡಲು ಅಪಾರ ಹುರುಪಿನಿಂದಿರುತ್ತಾರೆ. ಆದರೆ ತಾಳ್ಮೆಯಿಂದ ಮುಂದುವರಿಯುವುದು ಅಗತ್ಯ. ಈ ಎಲ್ಲ ಅಂಶಗಳನ್ನು ಅಡಕಗೊಳಿಸಿದ ತರಬೇತಿ ಮಾದರಿ ಇದೆ’ಎಂದಿದ್ದಾರೆ.

‘ಆರಂಭದಲ್ಲಿ ಆಟಗಾರರನ್ನು ಸಾಧಾರಣವಾದ ವ್ಯಾಯಾಮ ಚಟುವಟಿಕೆಗಳಲ್ಲಿ ತೊಡಗಿಸಬೇಕು. ಒಮ್ಮೆಲೆ ಹೆಚ್ಚು ಕಾರ್ಯಭಾರ ನೀಡಿದರೆ ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಎರಡನೇ ಹಂತದಲ್ಲಿ ಒತ್ತಡವನ್ನು ಸ್ವಲ್ಪ ಹೆಚ್ಚು ಮಾಡಲಾಗುವುದು. ಉದಾಹರಣೆಗೆ ಮಧ್ಯಮವೇಗದ ಬೌಲರ್‌ಗಳು ತಮ್ಮ ನೈಜ ರನ್‌ಅಪ್‌ನ ಅರ್ಧ ಅಂತರದಿಂದ ಕೇವಲ ಎರಡು ಓವರ್‌ಗಳನ್ನು ಬೌಲಿಂಗ್ ಮಾಡುವ ಅಭ್ಯಾಸವನ್ನು ಮೊದಲ ಹಂತದಲ್ಲಿ ಮಾಡುತ್ತಾರೆ. ನಂತರ ಇದನ್ನು ಸ್ವಲ್ಪ ಹೆಚ್ಚು ಮಾಡಲಾಗುವುದು’ ಎಂದು ಹೇಳಿದ್ದಾರೆ.

‘ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ವೇಗದ ಬೌಲಿಂಗ್ ಎದುರು ಐದರಿಂದ ಆರು ನಿಮಿಷಗಳ ಅಭ್ಯಾಸ ಮಾಡುತ್ತಾರೆ. ಫೀಲ್ಡಿಂಗ್‌ನಲ್ಲಿ ಕ್ಯಾಚಿಂಗ್ ಅಭ್ಯಾಸವನ್ನು ಮೃದುವಾದ ಚೆಂಡಿನಿಂದ ಆರಂಭಿಸಲಾಗುವುದು. ಹೀಗೆ ಹಂತದಿಂದ ಹಂತಕ್ಕೆ ತರಬೇತಿಯ ಒತ್ತಡ ಮತ್ತು ಕಠಿಣತೆ ಹೆಚ್ಚಿಸುತ್ತ ಹೋಗುತ್ತೇವೆ. ಇದರಿಂದಾಗಿ ಆಟಗಾರರಿಗೆ ಹೊಂದಿಕೊಳ್ಳಲು ಅವಕಾಶ ಸಿಗುತ್ತದೆ’ ಎಂದು ಶ್ರೀಧರ್ ಹೇಳಿದ್ಧಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT