ಬುಧವಾರ, ಸೆಪ್ಟೆಂಬರ್ 18, 2019
28 °C
ಭಾರತಕ್ಕೆ 75ರನ್‌ ಮುನ್ನಡೆ: ಜಡೇಜ, ಶಮಿಗೆ ತಲಾ ಎರಡು ವಿಕೆಟ್‌

ಮೊದಲ ಟೆಸ್ಟ್‌: ಇಶಾಂತ್‌ ದಾಳಿಗೆ ದಂಗಾದ ವಿಂಡೀಸ್‌

Published:
Updated:
Prajavani

ನಾರ್ತ್‌ ಸೌಂಡ್‌, ಆ್ಯಂಟಿಗ: ಬಿರುಗಾಳಿ ವೇಗದ ಬೌಲಿಂಗ್‌ ಮೂಲಕ ವೆಸ್ಟ್‌ ಇಂಡೀಸ್‌ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಹುಟ್ಟಿಸಿದ ಇಶಾಂತ್‌ ಶರ್ಮಾ (43ಕ್ಕೆ5) ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು 75ರನ್‌ಗಳ ಮುನ್ನಡೆ ಗಳಿಸಲು ನೆರವಾದರು.

8 ವಿಕೆಟ್‌ಗೆ 189ರನ್‌ಗಳಿಂದ ಶನಿವಾರ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ ವಿಂಡೀಸ್‌ 74.2 ಓವರ್‌ಗಳಲ್ಲಿ 222ರನ್‌ ಕಲೆಹಾಕಿತು. ದ್ವಿತೀಯ ಇನಿಂಗ್ಸ್‌ ಶುರು ಮಾಡಿರುವ ಭಾರತ ತಂಡ ಚಹಾ ವಿರಾಮದ ವೇಳೆಗೆ 39 ಓವರ್‌ಗಳಲ್ಲಿ 3 ವಿಕೆಟ್‌ಗೆ 100 ರನ್‌ ಗಳಿಸಿತ್ತು. ಮಯಂಕ್‌ ಅಗರವಾಲ್‌ (16) ಮತ್ತೊಮ್ಮೆ ವಿಫಲರಾದರು. ಕೆ.ಎಲ್‌.ರಾಹುಲ್‌ (38; 85ಎ, 4ಬೌಂ) ಮತ್ತು ಚೇತೇಶ್ವರ್ ಪೂಜಾರ (25; 53ಎ, 1ಬೌಂ) ಪ್ರವಾಸಿ ಪಡೆಗೆ ಆಸರೆಯಾದರು.

ಮೂರನೇ ದಿನದ ಮೊದಲ ಅವಧಿಯಲ್ಲಿ ಆತಿಥೇಯರು 15.2 ಓವರ್‌ಗಳನ್ನು ಆಡಿದರು. ಹೀಗಾಗಿ ಎದುರಾಳಿಗಳನ್ನು ಬೇಗನೆ ಆಲೌಟ್‌ ಮಾಡುವ ಕೊಹ್ಲಿ ಪಡೆಯ ಆಸೆ ಫಲಿಸಲಿಲ್ಲ. ಆರಂಭದ ಒಂದು ಗಂಟೆ ವಿಂಡೀಸ್‌ ನಾಯಕ ಹೋಲ್ಡರ್‌ (39; 65ಎ, 5ಬೌಂ) ಮತ್ತು ಮಿಗುಯೆಲ್‌ ಕಮಿನ್ಸ್‌ ವಿಕೆಟ್‌ ಬೀಳದಂತೆ ಎಚ್ಚರ ವಹಿಸಿದರು. ಜಿಗುಟು ಆಟದ ಮೂಲಕ ಭಾರತದ ಬೌಲರ್‌ಗಳನ್ನು ಕಾಡಿದ ಈ ಜೋಡಿ ಒಂಬತ್ತನೇ ವಿಕೆಟ್‌ ಪಾಲುದಾರಿಕೆಯಲ್ಲಿ 41ರನ್‌ಗಳನ್ನು ಸೇರಿಸಿತು.

ಈ ಜೊತೆಯಾಟವನ್ನು ಮುರಿಯಲು ನಾಯಕ ಕೊಹ್ಲಿ ಬೌಲಿಂಗ್‌ನಲ್ಲಿ ಪದೇ ಪದೇ ಬದಲಾವಣೆ ಮಾಡಿದರು. 74ನೇ ಓವರ್‌ ಬೌಲ್‌ ಮಾಡಿದ ಮೊಹಮ್ಮದ್‌ ಶಮಿ, ಯಶಸ್ಸು ತಂದು ಕೊಟ್ಟರು. ಅವರು ಮೊದಲ ಎಸೆತದಲ್ಲಿ ಹೋಲ್ಡರ್‌ ವಿಕೆಟ್‌ ಉರುಳಿಸಿದರು. ಮರು ಓವರ್‌ನಲ್ಲಿ ಸ್ಪಿನ್ನರ್‌ ರವೀಂದ್ರ ಜಡೇಜ, ಕಮಿನ್ಸ್‌ (0) ಅವರನ್ನು ಬೌಲ್ಡ್‌ ಮಾಡಿ ಆತಿಥೇಯರ ಇನಿಂಗ್ಸ್‌ಗೆ ತೆರೆ ಎಳೆದರು.

ಭಾರತ: ಮೊದಲ ಇನಿಂಗ್ಸ್‌; 96.4 ಓವರ್‌ಗಳಲ್ಲಿ 297. ವೆಸ್ಟ್‌ ಇಂಡೀಸ್‌: ಪ್ರಥಮ ಇನಿಂಗ್ಸ್‌: 74.2 ಓವರ್‌ಗಳಲ್ಲಿ 222 (ಡರೆನ್‌ ಬ್ರಾವೊ 18, ರಾಸ್ಟನ್‌ ಚೇಸ್‌ 48, ಶಾಯ್‌ ಹೋಪ್‌ 24, ಶಿಮ್ರನ್‌ ಹೆಟ್ಮೆಯರ್‌ 35, ಜೇಸನ್‌ ಹೋಲ್ಡರ್‌ 39; ಇಶಾಂತ್‌ ಶರ್ಮಾ 43ಕ್ಕೆ5, ಜಸ್‌ಪ್ರೀತ್‌ ಬೂಮ್ರಾ 55ಕ್ಕೆ1, ಮೊಹಮ್ಮದ್‌ ಶಮಿ 48ಕ್ಕೆ2, ರವೀಂದ್ರ ಜಡೇಜ 64ಕ್ಕೆ2). ಭಾರತ: ಎರಡನೇ ಇನಿಂಗ್ಸ್‌: 39 ಓವರ್‌ಗಳಲ್ಲಿ 3 ವಿಕೆಟ್‌ಗೆ 100 (ಕೆ.ಎಲ್‌.ರಾಹುಲ್‌ 38, ಚೇತೇಶ್ವರ್‌ ಪೂಜಾರ 25, ಮಯಂಕ್‌ ಅಗರವಾಲ್‌ 16). (ವಿವರ ಅಪೂರ್ಣ).

Post Comments (+)